ಉಗ್ರ ಸಂಘಟನೆ ಸೇರಿದ ಇಬ್ಬರ ಬಂಧನ..!

ಬೆಂಗಳೂರು

      ಐಎಸ್‍ಐಎಸ್, ಐಎಸ್‍ಐಎಲ್ ಸಂಘಟನೆಗೆ ಸೇರಿದ್ದಾರೆ ಎಂಬ ಆರೋಪದಡಿ ಇಬ್ಬರು ಶಂಕಿತ ಉಗ್ರರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅಹ್ಮದ್ ಅಬ್ದುಲ್ ಖಾದರ್ (40), ಬೆಂಗಳೂರಿನ ಫ್ರೆಜರ್ ಟೌನ್ ವಾಸಿ ಇರ್ಫಾನ್ ನಾಸಿರ್ (33) ಬಂಧಿತರು.

       ಬಂಧಿತ ಅಹ್ಮದ್ ಅಬ್ದುಲ್ ಚೆನ್ನೈನ ಬ್ಯಾಂಕ್‍ವೊಂದರಲ್ಲಿ ವ್ಯವಹಾರಿಕ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಇರ್ಫಾನ್ ನಾಸೀರ್ ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     ಶಂಕಿತರ ವಿರುದ್ಧ ಸೆ. 19, 2020 ರಂದು ಎನ್‍ಐಎ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಇತ್ತೀಚೆಗೆ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆ ವೈದ್ಯನನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು. ಬಸವನಗುಡಿಯ ಅಪಾರ್ಟ್‍ಮೆಂಟ್‍ನಲ್ಲಿದ್ದ ಅಬ್ದುಲ್ ರೆಹಮಾನ್ ಅಲಿಯಾಸ್ ಡಾ. ಬ್ರೇವ್‍ನನ್ನು ಅಧಿಕಾರಿ ಬಂಧಿಸಿದ್ದರು. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಕುರಿತು ಬಾಯ್ಬಿಟ್ಟಿದ್ದಾನೆ.

      ಬಂಧಿತ ಅಬ್ದುಲ್ ಖಾದರ್, ಇರ್ಫಾನ್ ನಾಸೀರ್ ಮತ್ತು ಇತರರು ಸೇರಿ ಕುರಾನ್ ಸರ್ಕಲ್ ಎಂಬ ವಾಟ್ಸ್ ಆ್ಯಪ್ ಗ್ರೂಪ್ ವೊಂದನ್ನು ಮಾಡಿಕೊಂಡಿದ್ದು, ಅದರಲ್ಲಿ ನಗರದ ಮುಸ್ಲಿಂ ಯುವಕರನ್ನು ಒಗ್ಗೂಡಿಸಿ ಪ್ರಚೋದಿಸಿದ್ದರು.

      ಇವರೆಲ್ಲಾ ಐಎಸ್‍ಐಎಸ್ ಅಲ್ಲದೇ ಹಿಸ್ಬ್ ಉತ್ ತೆಹೀರ್ ಸಂಘಟನೆಯ ಸದಸ್ಯರಾಗಿದ್ದರು. ಐಎಸ್‍ಐಎಸ್ ಗೆ ಸಹಾಯ ಮಾಡಲು ಸಿರಿಯಾಗೆ ಹೋಗಲು ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಸಿರಿಯಾಗೆ ಹೋಗಲು ಅಬ್ದುಲ್ ಉರ್ ರಹಮಾನ್ ವ್ಯವಸ್ಥೆ ಮಾಡುತ್ತಿದ್ದನು. ಆತನ ಮುಖಾಂತರ ಐಎಸ್‍ಐಎಸ್ ಸೇರಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

       ಸಿಲಿಕಾನ್ ಸಿಟಿಯ ಮುಸ್ಲಿಂ ಹುಡುಗರನ್ನು ಪ್ರಚೋದಿಸಿ ಸಿರಿಯಾಗೆ ಹೋಗಲು ಈತ ಆರ್ಥಿಕ ನೆರವು ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಬುಧವಾರ ಇಬ್ಬರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿ, ಎಲೆಕ್ಟ್ರಾನಿಕ್ ಸಾಧನಗಳನ್ನು ಒಳಗೊಂಡಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳನ್ನು ಬೆಂಗಳೂರಿನ ವಿಶೇಷ ಎನ್‍ಐಎ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ 10 ದಿನಗಳ ಕಾಲ ಎನ್‍ಐಎ ಕಸ್ಟಡಿ ನೀಡಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link