ಬ್ಯಾಡಗಿ:
ಹಾವೇರಿ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಭರವಸೆ ವ್ಯಕ್ತ ಪಡಿಸಿದರು.
ಅವರು ಮಂಗಳವಾರ ತಮ್ಮ ಸ್ವಗ್ರಾಮವಾದ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಗ್ರಾಮದ ದೇವತೆಯಾದ ಶ್ರೀ ಆದಿಶಕ್ತಿ ಮಾತೆಗೆ ಪೂಜೆ ಸಲ್ಲಿಸಿ, ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಕುಟುಂಬದ ಸರ್ವ ಸದಸ್ಯರೊಡಗೂಡಿ ಸರದಿ ಸಾಲಿನಲ್ಲಿ ಬಂದುನಿಂತು ಮತ ಚಲಾಯಿಸಿ ನಮ್ಮ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಯುವಕರು ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಪಕ್ಷವನ್ನು ಹೆಚ್ಚು ಬೆಂಬಲಿಸಲಿದ್ದಾರೆ, ಕ್ಷೇತ್ರದಾದ್ಯಂತ ಮತದಾರರು ಈಗಾಗಲೇ ಬಿಜೆಪಿ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗಿನಂತಾಗಿದೆ. ಆದ್ದರಿಂದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೇ ಬಿಜೆಪಿಯ ಶಿವಕುಮಾರ ಉದಾಸಿಯವರನ್ನು ಬೆಂಬಲಿಸುವ ನಿರ್ಣಯವನ್ನು ಕೈಕೊಂಡಿದ್ದಾರೆಂದರು.
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಸರಕಾರವೇ ಅಸ್ತಿತ್ವದಲ್ಲಿಲ್ಲದಂತ ವಾತವರಣ ಸೃಷ್ಟಿಯಾಗಿದೆ. ರಾಜ್ಯದ ಜನತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷದ ಸರಕಾರದಿಂದ ರೋಸಿ ಹೋಗಿದ್ದಾರೆ. ಹೀಗಾಗಿ ರಾಜ್ಯದ ಜನರು ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಆರ್ಶಿವಚನ ಮಾಡಲಿದ್ದಾರೆಂದರಲ್ಲದೇ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಮತದಾರರು ಶಿವಕುಮಾರ ಉದಾಸಿ ಅವರಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಮತ್ತೊಂದು ಬಾರಿ ಆಯ್ಕೆ ಮಾಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಲು ಅನುಕೂಲ ಮಾಡಿಕೊಡಲಿದ್ದಾರೆಂದು ತಮ್ಮ ವಿಶ್ವಾಸ ವ್ಯಕ್ತ ಪಡಿಸಿದರು.