ಕೊರೋನಾ ಸೋಂಕು : ಗುಣಮುಖರಾಗುತ್ತಿರುವ ಜಿಲ್ಲೆಗಳಲ್ಲಿ ಉಡುಪಿ ಮಾದರಿ

ಬೆಂಗಳೂರು

    ಕೊರೋನಾ ಸೋಂಕು ನಿಯಂತ್ರಣದಲ್ಲಿ ಚಾಮರಾಜನಗರ ಜಿಲ್ಲೆ ಮಾದರಿಯಾಗಿದ್ದರೆ, ಗುಣಮುಖರಾಗುವ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆ ಚಮತ್ಕಾರ ಮಾಡುತ್ತಿದೆ. ಗುಣಮುಖರಾಗುವ ದೇಶದ ಸರಾಸರಿ ಶೇ. 54 ರಷ್ಟಿದ್ದರೆ ಉಡುಪಿಯಲ್ಲಿ ಕನಿಷ್ಠ ಎಂದರೂ ಶೇ. 90 ರಷ್ಟಿದೆ. ದೇಶದ ಯಾವುದೇ ರಾಜ್ಯ ಅಥವಾ ಬೇರಾವುದೇ ರಾಷ್ಟ್ರದಲ್ಲೂ ಈ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗುತ್ತಿಲ್ಲ. ಹೇಳಿ ಕೇಳಿ ಉಡುಪಿ ಹಸಿರು ವಲಯದಲ್ಲೆ ಇತ್ತು.

     ಲಾಕ್ ಡೌನ್ ಸಡಿಲ ಮಾಡಿದ ನಂತರ ಮಹಾರಾಷ್ಟ್ರದ ಮುಂಬೈನಿಂದ ಏಕಾಏಕಿ ಆಗಮಿಸಿದ ವಲಸೆ ಕಾರ್ಮಿಕರಿಂದಾಗಿ ಇಡೀ ರಾಜ್ಯದಲ್ಲೇ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿದ್ದ ಜಿಲ್ಲೆ ಎಂದು ಗುರುತಿಸಿಕೊಂಡಿತು. ಆದರೀಗ ಉಡುಪಿ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಗುಣಮುಖರಾಗುತ್ತಿರುವ ಪ್ರಮಾಣ ಹೆಚ್ಚುತ್ತಲೆ ಇದೆ.

   ಮುಂಬೈ ಮತ್ತು ಥಾಣೆಯಿಂದ 13 ಸಾವಿರಕ್ಕೂ ಹೆಚ್ಚಿನ ಜನತೆ ಉಡುಪಿಗೆ ಬಂದಿದ್ದು, ಈ ಪೈಕಿ ಶೇ. 98 ರಷ್ಟು ಜನರಿಗೆ ಸೋಂಕು ತಗುಲಿದೆ. ಇಡೀ ರಾಜ್ಯಕ್ಕೆ ಸುಮಾರು 26 ಸಾವಿರಕ್ಕೂ ಹೆಚ್ಚು ಜನ ಮಹಾರಾಷ್ಟ್ರದಿಂದ ಬಂದಿದ್ದಾರೆ. ಹೆಚ್ಚಿನ ಸೋಂಕಿತರು ಮಹಾರಾಷ್ಟ್ರದ ಬೇರೆ ಭಾಗಗಳಿಂದ ವಿವಿಧ ಜಿಲ್ಲೆಗಳಿಗೆ ಆಗಮಿಸಿದ್ದರು. ಆದರೆ ಉಡುಪಿಗೆ ಇಡೀ ದೇಶದಲ್ಲೇ ಹೆಚ್ಚು ಸೋಂಕು ಇರುವ ಪ್ರಮುಖ ನಗರಗಳಲ್ಲೊಂದಾದ ಮುಂಬೈನಿಂದ ಆಗಮಿಸಿದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿತು. ಆದರೆ ಸಾವಿನ ಸಂಖ್ಯೆ ಅತ್ಯಲ್ಪ. ಅಂದರೆ ಈವರೆಗೆ ಕೇವಲ ಇಬ್ಬರು ಮಾತ್ರ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಅದರಲ್ಲಿ ಒಬ್ಬರು ಹೃದಯಾಘಾತದಿಂದ ಅಸು ನೀಗಿದ್ದು, ಮರುದಿನ ದೊರೆತ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು.

    ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕ್ವಾರಂಟೈನ್ ಮಾಡಿದ ಹಾಗೂ ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಉಡುಪಿಯಲ್ಲಿ ಈವರೆಗೆ 1063 ಸೋಂಕಿತ ಪ್ರಕರಣಗಳಿದ್ದು, 959 ಮಂದಿ ಚೇತರಿಸಿಕೊಂಡಿದ್ದಾರೆ. ಕೇವಲ 102 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾರೂ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎನ್ನುವುದು ಮತ್ತೊಂದು ವಿಶೇಷ. ಬೆಂಗಳೂರಿನಲ್ಲಿ 1272 ಮಂದಿ ಸೋಂಕಿತರ ಪೈಕಿ 411 ಮಂದಿ ಮಾತ್ರ ಚೇತರಿಸಿಕೊಂಡಿದ್ದಾರೆ. ಆದರೆ 64 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲೇ ಮೊದಲ ಸಾವು ಸಂಭವಿಸಿದ ಕಲಬುರಗಿಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1199 ಕ್ಕೆ ಏರಿಕೆಯಾಗಿದ್ದು, 11 ಮಂದಿ ಮೃತಪಟ್ಟು 697 ಮಂದಿ ಗುಣಮುಖರಾಗಿದ್ದಾರೆ.

   ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಸೋಂಕಿನಿಂದ ಗುಣಮುಖರಾದ ಶೇ. 98 ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳೆ ಇರಲಿಲ್ಲ. ಆದರೂ ಪರೀಕ್ಷೆ ಮೂಲಕ ಸೋಂಕು ಪತ್ತೆ ಮಾಡಲಾಗಿದೆ. ನಮ್ಮ ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವ ವರದಿ ನೋಡಿದರೆ ಕೋವಿಡ್ 19 ಸೋಂಕು ದುರ್ಬಲವಾಗುತ್ತಿರುವುದು ಸ್ಪಷ್ಟವಾಗುತ್ತದೆ ಎನ್ನುತ್ತಾರೆ.

   ಇನ್ನು ಸೋಂಕು ನಿಯಂತ್ರಣಕ್ಕೆ ನಾವೇನು ಚಮತ್ಕಾರ ಮಾಡಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಜನರ ಸಹಕಾರ ಅತ್ಯುತ್ತಮವಾಗಿತ್ತು. ಮುಂಬೈನಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವ ಆರೋಪದಿಂದಾಗಿ ಅಲ್ಲಿರುವವರನ್ನೆಲ್ಲಾ ಕರೆಸಿಕೊಳ್ಳಲೇಬೇಕಾಗಿತ್ತು. ಜಿಲ್ಲಾಡಳಿತ, ಜಿಲ್ಲೆಯ ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳು, ವೈದ್ಯಕೀಯ ತಂಡ ಉತ್ತಮ ಸಹಕಾರ ನೀಡಿವೆ. ಮೊದಲ ಹಂತದಲ್ಲಿ 1700 ಕ್ಕೂ ಹೆಚ್ಚು ಬೆಡ್‍ಗಳನ್ನು ಕ್ವಾರಂಟೈನ್‍ಗೆ ಸುಸಜ್ಜಿತಗೊಳಿಸಲಾಗಿತ್ತು. ಇದೀಗ ಎಷ್ಟೇ ಸೋಂಕಿತರಿಗೂ ಚಕಿತ್ಸೆ ನೀಡುವ ಸಾಮರ್ಥ್ಯ ವೃದ್ದಿಸಿಕೊಂಡಿ ದ್ದೇವೆ. ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ ನಂತರ ಯಾರೊಬ್ಬರಿಗೂ ಮತ್ತೆ ಸೋಂಕು ತಗುಲಿದ ಮಾಹಿತಿ ಬಂದಿಲ್ಲ.

     ಗುಣಮುಖರಾದವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವ ಉದ್ದೇಶದಿಂದ ಸ್ವತಃ ನಾನೇ ಹಲವು ಕಡೆಗಳಲ್ಲಿ ಬೀಳ್ಕೊಡುಗೆ ಸಮಾರಂಭಗಳಲ್ಲಿ ಭಾಗವಹಿಸಿ ಜಿಲ್ಲೆಯ ಜನತೆಗೆ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇನೆ. ಅಷ್ಟೇ ಅಲ್ಲ ಗುಣಮುಖರಾದವರ ವಿಚಾರದಲ್ಲಿ ತಾರತಮ್ಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.

    ಇನ್ನು ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ. ಸಕಾಲದಲ್ಲಿ ಪರೀಕ್ಷೆ ನಡೆದಿದ್ದರೆ ಉತ್ತಮ ಫಲಿತಾಂಶ ಬರುತ್ತಿತ್ತು. ಈಗಲೂ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯಿದೆ. ಪರೀಕ್ಷೆಯಿಂದ ಒಬ್ಬ ವಿದ್ಯಾರ್ಥಿಯೂ ಸಹ ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಸರ್ಕಾರಿ ವಾಹನಗಳನ್ನು ನಿಲ್ಲಿಸಿದ್ದು, ಒಬ್ಬ ವಿದ್ಯಾರ್ಥಿ ಇದ್ದರೂ ಸಹ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಬೇಕು ಎಂದು ಸೂಚಿಸಲಾಗಿದೆ. ಕೊರೋನಾ ಸೋಂಕಿನ ನಡುವೆಯೂ ವಿದ್ಯಾರ್ಥಿಗಳು ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಸೂಕ್ತ ವಾತಾವರಣ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap