ಉಡುಪಿ
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ನಾಳೆ ಉಡುಪಿ ಮಠಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಮಣಿಪಾಲದ ಕಸ್ತೂರಬಾ (ಕೆಎಂಸಿ) ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಶ್ರೀಗಳಿಗೆ ಸದ್ಯ ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಅವರ ರಕ್ತದೊತ್ತಡದಲ್ಲಿ ತೀವ್ರ ಇಳಿಮುಖವಾಗಿದೆ. 6 ಗಂಟೆಗೆ ಕೆಎಂಸಿ ಆಸ್ಪತ್ರೆ ವೈದ್ಯರು ಶ್ರೀಗಳ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿರುವ ಬುಲೆಟಿನ್ ಆಧಾರದ ಮೇಲೆ ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ವೈದ್ಯರು ತೀವ್ರ ನಿಗಾವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಉಸಿರಾಟದ ತೊಂದರೆಯಿಂದಾಗಿ ಡಿ 21 ರ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಕೂಡಲೇ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಸದ್ಯ ಐಸಿಯುದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ತಮ್ಮ ಇಳಿವಯಸ್ಸಿನಲ್ಲಿಯೂ ಪೇಜಾವರ ಶ್ರೀಗಳು ನಿರಂತರ ಪ್ರವಾಸದಲ್ಲಿದ್ದರು. ಉತ್ತರ ಭಾರತ, ತಿರುಪತಿ ಮತ್ತು ಚೆನ್ನೈಗೆ ಭೇಟಿ ನೀಡಿದ್ದರು. 2017ರಲ್ಲಿ ಪೇಜಾವರ ಶ್ರೀಗಳು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಒಂದು ತಿಂಗಳ ಬಳಿಕ ಅವರಿಗೆ ಪುನಃ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ನೀಡಲಾಗಿತ್ತು.