ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರಂತರ ಉದ್ಯೋಗ ನೀಡಲು ಮನವಿ.

ಬಳ್ಳಾರಿ

    ಶ್ರೀಧರಗಡ್ಡೆ ಬಸ್ ನಿಲ್ದಾಣದಿಂದ ಗ್ರಾಮದ ಮುಖ್ಯ ರಸ್ತೆಗಳ ಮೂಲಕ ಗ್ರಾಮ ಪಂಚಾಯಿತಿಯ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ನೂರಾರು ರೈತ-ಕೃಷಿ ಕಾರ್ಮಿಕರು ಆರ್.ಕೆ.ಎಸ್. ಮತ್ತು ಎಸ್.ಯು.ಸಿ.ಐ. ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 150 ದಿನಗಳ ಕೆಲಸ ಮತ್ತು ವಾರಕ್ಕೊಮ್ಮೆ ಕೂಲಿ ಪಾವತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಂತರ ಮನವಿ ಪತ್ರ ಸ್ವೀಕರಿಸಿದ ಪಿ.ಡಿ.ಓ ರವರು ‘ಕೂಡಲೇ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ’ ಭರವಸೆ ನೀಡಿದರು.

      ಈ ಸಂದರ್ಭದಲ್ಲಿ ಆರ್.ಕೆ.ಎಸ್. ಜಿಲ್ಲಾ ಕಾರ್ಯದರ್ಶಿಗಳಾದ ಈ.ಹನುಮಂತಪ್ಪರವರು ಮಾತನಾಡುತ್ತಾ.., “ಶ್ರೀಧರಗಡ್ಡೆ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಿ ಅನೇಕ ಕುಟುಂಬಗಳು ಬದುಕುತ್ತಿವೆ. ಇವರಿಗೆ ಕೃಷಿ-ಜಮೀನುಗಳಲ್ಲಿ ನಿರಂತರ ಕೆಲಸವಿರುವುದಿಲ್ಲ. ಆದ್ದರಿಂದ ಇವರು ಉದ್ಯೋಗ ಖಾತ್ರಿ ಯೋಜನೆ ಮೇಲೆ ಅವಲಂಬನೆಯಾಗಿದ್ದಾರೆ. ಜೀವನ ವೆಚ್ಚ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಇವರಿಗೆ ಕನಿಷ್ಟ ದಿನಗೂಲಿ ರೂ. 300/- ನೀಡಬೇಕು ಹಾಗೂ ವರ್ಷಕ್ಕೆ 150 ದಿನಗಳು ಉದ್ಯೋಗ ಕಲ್ಪಿಸಬೇಕು. ಆಗ ಮಾತ್ರ ಇವರು ನೆಮ್ಮದಿಯಾಗಿ ಬದಕಲು ಸಾಧ್ಯ” ಎಂದರು.

      ಈ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಮತ್ತು ಬಳ್ಳಾರಿ ಗ್ರಾಮೀಣ ಸ್ಥಳೀಯ ಸಮಿತಿಯ ಕಾರ್ಯದರ್ಶಿಗಳಾದ ಕಾಮ್ರೇಡ್ ಎ.ದೇವದಾಸ್ ರವರು ಮಾತನಾಡುತ್ತಾ.., “ಕರ್ನಾಟಕದಲ್ಲಿ ಒಟ್ಟು 160 ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲಾಗಿದ್ದು ಅದರಲ್ಲಿ ಬಳ್ಳಾರಿ ತಾಲ್ಲೂಕು ಒಂದು. ಅಲ್ಲದೇ ಇಂದಿನ ದುಬಾರಿ ದಿನಗಳಲ್ಲಿ ರೈತರು ತಮ್ಮ ಜೀವನ ನಡೆಸುವುದ್ದೇ ಕಷ್ಟಕರವಾಗಿದೆ.

       ಮಕ್ಕಳನ್ನು ಪೋಷಿಸಲಾಗುತ್ತಿಲ್ಲ. ಲಕ್ಷಾಂತರ ರೂಪಾಯಿಗಳನ್ನು ತೆತ್ತು ಬೆಳೆಗಳನ್ನು ಬೆಳೆದು ದಲ್ಲಾಳಿಗಳ ಹೊಟ್ಟೆ ತುಂಬಿಸುವಂತಾಗುತ್ತಿದೆ. ಇನ್ನೊಂದೆಡೆ ಸರ್ಕಾರಗಳು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡದೇ ಇರುವುದರಿಂದ ರೈತರು ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಮತ್ತೊಂದೆಡೆ ಕೃಷಿ ಕಾರ್ಮಿಕರಿಗೆ ಕುಟುಂಬದ ನಿರ್ವಾಹಣೆಗೆ ಉದ್ಯೋಗ ಖಾತರಿ ಕೆಲಸವೇ ಗತಿಯಾಗಿದೆ. ಆದ್ದರಿಂದ ಇವರ ಬವಣೆ ನೀಗಿಸಲು ಇವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಕೊಳ್ಳಬೇಕೆಂದು ಮನವಿ” ಮಾಡಿದರು.

        ಈ ಸಂದರ್ಭದಲ್ಲಿ ಪದ್ಮ, ನಾಗರತ್ನ, ಶೇಖರ್, ಹನುಮಂತ, ಪಂಪಾಪತಿ, ಹೊನ್ನಳ್ಳಿ, ಹುಲಿಗೆಮ್ಮ, ಪೆನ್ನೋಬಳೇಶ, ಗೋವಿಂದ್, ರವಿಕಿರಣ್ ಇನ್ನಿತರರು ಹಾಗೂ ನೂರಾರು ಕೃಷಿ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link