ಕೊಟ್ಟೂರು
ಯುಗಾದಿ ಹಬ್ಬವನ್ನು ಪಟ್ಟಣದ ಜನತೆ ಶ್ರದ್ದಾ ಭಕ್ತಿಗಳೊಂದಿಗೆ ಶನಿವಾರ ಆಚರಿಸಿದರು. ಆರಾಧ್ಯ ದೈವ ಕೊಟ್ಟೂರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ತೇರು ಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಧಾರ್ಮಿಕ ಕೈಂಕರ್ಯ ಯುಗಾದಿಯ ಹಬ್ಬದ ಪ್ರಮುಖ ಆಕರ್ಷಣೆಯಾಗಿ ನಡೆಯಿತು. ಈ ಪ್ರಕ್ರಿಯೆಯಲ್ಲಿ ಭಕ್ತರು ಪಾಲ್ಗೊಂಡು ತೇರುಗಡ್ಡೆಯನ್ನು ಎಳೆದು ಭಕ್ತಿ ಸಮರ್ಪಿಸಿದರು.
ಕೊಟ್ಟೂರೇಶ್ವರ ಸ್ವಾಮಿಯ ತೇರುಗಡ್ಡೆಯನ್ನು ಪ್ರತಿ ಯುಗಾದಿ ಪಾಡ್ಯದ ದಿನದಂದು ತೇರು ಶೆಡ್ಡಿನೊಳಗೆ ಸೇರಿಸುವ ಪದ್ದತಿ ಮೊದಲಿನಿಂದ ನಡೆದುಕೊಂಡು ಬಂದಿದೆ. ಶ್ರೀ ಸ್ವಾಮಿಯ ರಥೋತ್ಸವ ಸಾಗಿದ ನಂತರ ತೇರುಗಡ್ಡೆಯನ್ನು ತೇರು ಬಜಾರದಲ್ಲಿ ಇದುವರೆಗೆ ನಿಲುಗಡೆಗೊಳಿಸಲಾಗಿತ್ತು.
ಶೆಡ್ಡಿನೊಳಗೆ ಸೇರಿಸುವ ಮುನ್ನ ತೇರುಗಡ್ಡೆಯ ಮೇಲಿನ ಆಸನದಲ್ಲಿ ಹಿರೇಮಠದ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ಧರ್ಮಕರ್ತ ಸಿ.ಹೆಚ್.ಎಂ.ಗಂಗಾಧರ ಬಳಗ ಆಸೀನರಾಗುತ್ತಿದ್ದಂತೆ ಭಕ್ತರು ಕೊಟ್ಟೂರೇಶ್ವರ ಸ್ವಾಮಿಗೆ ಜಯಘೋಷಗಳನ್ನು ಕೂಗುತ್ತಾ ಮಿಣಿ(ಹಗ್ಗ)ಯಿಂದ ತೇರುಗಡ್ಡೆಯನ್ನು ಎಳೆದರು. ವಿವಿಧ ವಾದ್ಯಗಳ ನಿನಾದದೊಂದಿಗೆ, ಈ ಧಾರ್ಮಿಕ ವಿಧಿ ವಿಧಾನ ನಡೆಯಿತು. ಈ ಪ್ರಕ್ರಿಯೆ ಐದಾರು ನಿಮಿಷದಲ್ಲಿ ಮುಗಿಯಿತಾದರೂ ಇಂತಹ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳಲು ಅಧಿಕ ಸಂಖ್ಯೆಯಲ್ಲಿ ಭಕ್ತರು ಎಂದಿನಂತೆ ಪಾಲ್ಗೊಂಡು ಸ್ವಾಮಿಗೆ ತಮ್ಮ ಭಕ್ತಿಯನ್ನು ಸಲ್ಲಿಸಿದರು.
ಪಂಚಾಗ ಪಠಣ:
ತೇರುಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠದಲ್ಲಿ ಶನಿವಾರ ಸಂಜೆ ನೂತನ ವಿಕಾರ ನಾಮ ಸಂಸ್ಥರದ ನೂತನ ಪಂಚಾಗ ಪಠಣ ನಡೆಯಿತು. ದೇವಸ್ಥಾನದ ಪೂಜಾ ಬಳಗದ ಶೇಖರಯ್ಯ ಪಂಚಾಂಗವನ್ನು ಪಠಿಸಿದರು. ಮುಂಗಾರು ಮಳೆ ಚೆನ್ನಾಗಿ ಸುರಿಯುವ ಸೂಚನೆಯನ್ನು ವ್ಯಕ್ತಪಡಿಸಿದರು.ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ಆಯಾಗಾರ ಬಳಗದವರು. ಮತ್ತಿತರರು ಇದ್ದರು.