ದಾವಣಗೆರೆ :
ವಿದ್ಯಾರ್ಥಿಯೊಬ್ಬ ಲಾರಿಯಿಂದ ಕೂದಲೆಳೆಯಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಗರದ ಪಿಬಿ ರಸ್ತೆಯಲ್ಲಿರುವ ಬಿಎಸ್ಸೆಎನ್‍ಎಲ್ ವೃತ್ತದ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.
ಪ್ರಾಣಪಾಯದಿಂದ ಪಾರಾಗಿರುವ ವಿದ್ಯಾರ್ಥಿಯು ಸೈಕಲ್‍ನಲ್ಲಿ ರಸ್ತೆಯ ಕಾರ್ನರ್‍ನಲ್ಲಿ ತನ್ನ ಪಾಡಿಗೆ ತಾನು ನಿಂತಿದ್ದ. ಇದೇ ವೇಳೆ ನಿಜಲಿಂಗಪ್ಪ ಬಡಾವಣೆಯ ಕಡೆಯಿಂದ ರಿಂಗ್ ರಸ್ತೆಯಲ್ಲಿ ಬಂದ ಬೃಹತ್ ಲಾರಿಯೊಂದು ಬಂದು ಗುದ್ದಿದ್ದು, ಘಟನೆಯಲ್ಲಿ ಸೈಕಲ್ ನಜ್ಜುಗುಜ್ಜಾಗಿದ್ದು, ಬಾಲಕ ಕೂದಲೆಳೆಯಲ್ಲಿ ಪಾರಾಗಿದ್ದಾನೆ.
ಶಾಲಾ ಮತ್ತು ಕಚೇರಿ ಸಮಯದಲ್ಲಿ ಬೃಹತ್ ಲಾರಿಗಳು ನಗರದಲ್ಲಿ ಸಂಚರಿಸದಂತೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಆದರೆ, ಈ ಆದೇಶ ಉಲ್ಲಂಘಿಸಿ ಲಾರಿಗಳು ಒರವೇಶಿಸಿದರೂ ಪೊಲೀಸರು ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರತಿದಿನ ಬೆಳಗ್ಗೆ 9 ರಿಂದ 11, ಸಂಜೆ 4ರಿಂದ 6ರವರೆಗೆ ಶಾಲಾ ಸಮಯದ ಅವಧಿಯಲ್ಲಿ ಬೃಹತ್ ಲಾರಿಗಳ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದರೂ, ಲಾಯರ್ ರಸ್ತೆ, ಪಿಬಿ ರಸ್ತೆ, ಜಯದೇವ ಸರ್ಕಲ್ ಸೇರಿದಂತೆ ಹಲವೆಡೆ ಬೃಹತ್ ಲಾರಿಗಳು ಸಂಚರಿಸುತ್ತಿವೆ. ಆದೇಶದ ಪ್ರಕಾರ ನಗರದ ಯಾವ ಕಡೆ ಬೃಹತ್ ಲಾರಿಗಳು ಓಡಾಡುವ ಆಗಿಲ್ಲ. ದಾವಣಗೆರೆ ವರ್ತಕರು, ಲಾರಿ ಮಾಲೀಕರು, ಎಂ.ಸ್ಯಾಂಡ್ ಲಾರಿಗಳ ಮಾಲೀಕರು ಶಾಲಾ ಸಮಯದಲ್ಲಿ ಬೃಹತ್ ವಾಹನಗಳು ಓಡಾಡಬಾರದೆಂದು ತಿಳಿ ಹೇಳಬೇಕು. ಇಲ್ಲದೇ ಹೋದರೆ ಮುಂದೆ ಆಗುವ ದುರಂತಗಳಿಗೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ