ದಾವಣಗೆರೆ
ಕ್ಷುಲ್ಲಕ ಕಾರಣಕ್ಕೆ ಮಕ್ಕಳನ್ನು ಅನಾಥರನ್ನಾಗಿ ಮಾಡುವ ದಂಪತಿಗಳಿಗೆ, ಮಾನಸಿಕ ಧೈರ್ಯ ತುಂಬುವ ಮೂಲಕ ಅವರ ಆಲೋಚನೆಯನ್ನು ಬದಲಾಯಿಸುವ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಕರೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ‘ಮಕ್ಕಳ ದತ್ತು ಕಾರ್ಯಕ್ರಮ’ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಜನರಲ್ಲಿ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕಾಗಿದೆ. ಕ್ಷುಲ್ಲಕ ಕಾರಣಕ್ಕೆ ಮಕ್ಕಳನ್ನು ದೂರಮಾಡುವ ದಂಪತಿಗಳಿಗೆ ಮಕ್ಕಳನ್ನು ಅನಾಥ ಮಾಡುವುದು ತಪ್ಪು ಹಾಗೂ ಅಕಸ್ಮಾತ್ ಮಕ್ಕಳನ್ನು ದೂರ ಮಾಡುವುದರಿಂದ ಅವರು ಅನುಭವಿಸಬೇಕಾದ ಶಿಕ್ಷೆಯ ಬಗ್ಗೆ ತಿಳಿಹೇಳಿ, ಅವರಲ್ಲಿ ಮಾನಸಿಕ ಧೈರ್ಯ ತುಂಬುವ ಮೂಲಕ ಅವರ ಆಲೋಚನೆಯನ್ನು ಬದಲಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಮಹಿಳೆಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೂ ಸಹ ಹಲವು ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಲಿವೆ. ಅಲ್ಲದೇ, ಮಕ್ಕಳಿಲ್ಲದ ಮಹಿಳೆಯರು ಸಾಮಾಜಿಕ ಕಾರಣಗಳಿಂದಾಗಿ ಹಲವು ರೀತಿಯ ನಿಂದನೆಗೆ ಗುರಿಯಾಗುತ್ತಾರೆ. ಅದೇರೀತಿ ಅನಾಥ ಮಕ್ಕಳೂ ಸಹ ಹಲವು ರೀತಿಯ ಅವಮಾನವನ್ನು ಅನುಭವಿಸುತ್ತಾರೆ. ದತ್ತು ಪಡೆಯುವ ಕುರಿತು ಸರಿಯಾದ ಮಾಹಿತಿಯನ್ನು ಪೋಷಕರಿಗೆ ನೀಡಿದರೆ, ಅನಾಥ ಮಕ್ಕಳಿಗೆ ಅನುಕೂಲವಾಗಿ, ಅನಾಥರ ಸಂಖ್ಯೆ ಕಡಿಮೆ ಮಾಡಬಹುದಾಗಿದೆ ಎಂದರು.
ಮಕ್ಕಳು ಅಮೂಲ್ಯ ಸಂಪನ್ಮೂಲವಾಗಿದ್ದು, ಮಾನವ ಈ ಸಂಪನ್ಮೂಲವನ್ನು ಸೂಕ್ಷ್ಮತೆ ಮತ್ತು ಜವಾಬ್ದಾರಿಯಿಂದ ನಿರ್ವಹಣೆ ಮಾಡುವ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಯೋಜನೆಗಳ ಮೂಲಕ ಮಹಿಳೆ ಮತ್ತು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಪೊಲೀಸ್ ಇಲಾಖೆಯು ಮಕ್ಕಳ ರಕ್ಷಣಾ ಘಟಕದ ಮೂಲಕ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಶ್ರಮಿಸುತ್ತಿದೆ ಎಂದ ಅವರು, ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳನ್ನು ತಾಯಂದಿರು ಪೋಷಿಸಲು ಸಾಧ್ಯವಾಗದೇ ಇರುವಾಗ, ಬೀದಿ ಬದಿಯ ಕಸದ ತೊಟ್ಟಿಗಳಲ್ಲಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳನ್ನು ರಕ್ಷಿಸುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಎಲ್ಲರಿಗೂ ಮಕ್ಕಳು ಬೇಕು ಎಂಬ ಆಸೆ ಇರುತ್ತದೆ ಅದರಲ್ಲೂ ತಮ್ಮದೇ ಮಗು ಬೇಕು ಎಂಬ ಕನಸು ಇರುತ್ತದೆ. ಈ ಕನಸು ಸಾಧ್ಯವಾಗದಿದ್ದಾಗ ಕಾನೂನಿನ್ವಯ ದತ್ತು ಪಡೆಯುವುದರ ಮೂಲಕ ಸಂತೋಷದಾಯಕ ಜೀವನ ನಡೆಸಬಹುದಾಗಿದೆ ಎಂದರು.
ಇಂದಿನ ಪುರುಷ ಪ್ರಾಧಾನ ಸಮಾಜದಲ್ಲಿ ಪುರಷರ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ. ಮಹಿಳೆಯರು ಕಾನೂನಾತ್ಮಕ ಸಮಸ್ಯೆಯನ್ನು ಎದುರಿಸಲು ಸಿದ್ದರಿರಬೇಕು. ಕಾನೂನಿನ ಅರಿವನ್ನು ಆಶಾ ಕಾರ್ಯಕರ್ತೆಯರು ಮಹಿಳೆಯರಿಗೆ ತಿಳಿಸಬೇಕು. ಶಿಕ್ಷಣದಿಂದ ಇಂದು ನಾವು ಸಮಾಜದ ಭಾಗವಾಗಿದ್ದೇವೆ. ಆದ್ದರಿಂದ ನಮಗೆ ಇತರ ಮಕ್ಕಳ ಬಗ್ಗೆಯೂ ಕಾಳಜಿ ಇರಬೇಕು. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅನಾಥ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ನಾವೆಲ್ಲ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಅತ್ತೆ-ಸೊಸೆ ಜಗಳ, ಬುದ್ಧಿಮಾಂದ್ಯ ಮಕ್ಕಳ ಜನಿಸುವಿಕೆ ಮತ್ತು ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳು, ಹೆಣ್ಣು ಮಗು ಎಂಬ ಕಾರಣಗಳಿಂದ ಮಕ್ಕಳನ್ನು ಅನಾಥರನ್ನಾಗಿಸಲಾಗುತ್ತಿದೆ. ಕಸದ ಬುಟ್ಟಿಯಲ್ಲಿ ಬಿಡುವ ಕೆಲಸವನ್ನೂ ಹಲವರು ಮಾಡುತ್ತಾರೆ. ಇಂತಹ ವಿಷಯಗಳ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತಿಳುವಳಿಕೆ ಇರಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಶೃತಿ ಮಾತನಾಡಿ, ದಾವಣಗೆರೆ ನಗರದಲ್ಲಿ 81 ಸರ್ಕಾರಿ ಆಸ್ಪತ್ರೆಗಳು ಮತ್ತು 84 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 165 ಆಸ್ಪತ್ರೆಗಳಿವೆ. ಎಲ್ಲಾ ಆಸ್ಪತ್ರೆಗಳಲ್ಲಿಯೂ ಮಕ್ಕಳನ್ನು ದತ್ತು ನೀಡುವುದಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳು ಮತ್ತು ಅನಧಿಕೃತ ದತ್ತು ನೀಡುವಿಕೆಗೆ ಇರುವ ಶಿಕ್ಷೆಯ ಪ್ರಕಟಣೆ ಸೇರಿದಂತೆ ಎರಡು ರೀತಿಯ ಪ್ರಕಟಣೆಯನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಹೊನ್ನಾಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ, ಜಗಳೂರು ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಎಲ್ಲಾ ತಾಲ್ಲೂಕುಗಳ ಆಶಾ ಕಾರ್ಯಕರ್ತೆಯರು, ಜಿಲ್ಲಾ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ