ಹಾನಿಗೊಳಗಾದ ಮನೆಗಳ ವಿವರ ತಂತ್ರಾಂಶಕ್ಕೆ ಅಪ್‍ಲೋಡ್‍ ಮಾಡಿ: ಡಿಸಿ

ಹಾವೇರಿ

   ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ಮನೆಗಳ ಮಾಲಿಕತ್ವದ ದಾಖಲೆಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ ಮನೆಗಳ ಭಾವಚಿತ್ರದೊಂದಿಗೆ ಜಿಯೋ ಟ್ಯಾಗ್ ಮಾಡಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದ್ದಾರೆ.

   ನೆರೆ ಪರಿಹಾರ ಹಾಗೂ ಸಮೀಕ್ಷೆ ಕಾರ್ಯಗಳ ಕುರಿತಂತೆ ತಾಲೂಕಾ ಆಡಳಿತದೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮೊದಲ ಕಂತಾಗಿ ಸಂತ್ರಸ್ತರಿಗೆ ಪರಿಹಾರ ಹಣ ಜಮಾವಣೆ ಹಾಗೂ ಸರ್ವೇ ಕಾರ್ಯದ ಮಾಹಿತಿ ಪಡೆದರು.

    ಮನೆ ನಿರ್ಮಾಣಕ್ಕೆ ಪರಿಹಾರ ಒದಗಿಸಲು ಸರ್ಕಾರಕ್ಕೆ ಗ್ರಾಮವಾರು ಫಲಾನುಭವಿಗಳವಾರು ವಿವರಗಳನ್ನು ಸಲ್ಲಿಸಬೇಕಾಗಿದೆ. ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಹಾನಿಗೊಳಗಾದ ಮನೆಗಳ ನೈಜ ಮಾಲಿಕತ್ವದ ವಿವರ ದೃಢೀಕರಿಸಿ ಹಾನಿಗೊಳಗಾದ ಮನೆಗಳ ಭಾವಚಿತ್ರದೊಂದಿಗೆ ಜಿಯೋ ಟ್ಯಾಗ್ ಮಾಡಿ ರಾಜೀವಗಾಂಧಿ ವಸತಿ ನಿಗಮದ ಅಂತರ್ಜಾಲ ತಂತ್ರಾಂಶದಲಿ ಅಪ್‍ಲೋಡ್ ಮಾಡಬೇಕು.

   ಈ ಹಿನ್ನೆಲೆಯಲ್ಲಿ ನಿಯೋಜಿತ ಅಧಿಕಾರಿಗಳು ನಿಖರವಾದ ಮಾಹಿತಿಯನ್ನು ದೃಢೀಕರಿಸಿ ಸಲ್ಲಿಸಲು ಅವರು ಸೂಚಿಸಿದರು.
ಹಾನಿಗೊಳಗಾದ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ಪರಿಹಾರಕ್ಕೆ ಅರ್ಹರಾದ ಕುಟುಂಬಗಳಿಗೆ ತಿಂಗಳ ಅವಧಿಗೆ ಸಿಮೀತಗೊಳಿಸಿ ಮಾಸಿಕ ಐದು ಸಾವಿರ ರೂ.ಗಳನ್ನು ಶಾಶ್ವತ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವವರೆಗೂ ಸೀಮಿತಗೊಳಿಸಿ ಮಾಸಿಕ ಐದು ಸಾವಿರ ರೂ.ಗಳನ್ನು ನೀಡಲಾಗುವುದು. ಒಂದು ವೇಳೆ ಕುಟುಂಬವು 10 ತಿಂಗಳ ಅವಧಿಗೆ ಮುನ್ನವೇ ಮನೆಯನ್ನು ನಿರ್ಮಿಸಿದಲ್ಲಿ ಬಾಕಿ ಅವಧಿಯ ಬಾಡಿಗೆ ಮೊತ್ತವನ್ನು ಒಂದೇ ಕಂತಿನಲ್ಲಿ ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದು.

     ಪರ್ಯಾಯವಾಗಿ ಸಂತ್ರಸ್ತರು ವಸತಿಗಾಗಿ ತಾತ್ಕಾಲಿಕ ಶೆಡ್ ಹಾಕಿಕೊಂಡಲ್ಲಿ ಅವರಿಗೆ 50 ಸಾವಿರ ರೂ. ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸಂಪೂರ್ಣ ಹಾನಿಗೊಳಗಾದ ಅಥವಾ ತೀವ್ರವಾಗಿ ಹಾನಿಗೊಳಗಾದ ಸಂತ್ರಸ್ತರನ್ನು ಭೇಟಿಯಾಗಿ ಸಂತ್ರಸ್ತರ ಇಚ್ಛೆಯನ್ನು ಲಿಖಿತವಾಗಿ ಪಡೆದು ತಹಶೀಲ್ದಾರಗೆ ವರದಿ ಸಲ್ಲಿಸಬೇಕು. ಈ ವರದಿಯನ್ನು ಜಿಲ್ಲಾಧಿಕಾರಿಗಳಿಂದ ತಹಶೀಲ್ದಾರ ಅನುಮೋದನೆ ಪಡೆಯಲು ಸೂಚಿಸಲಾಯಿತು.

    ಸಂಪೂರ್ಣ ಅಥವಾ ತೀವ್ರವಾಗಿ ಹಾನಿಗೊಳಗಾದ ಮನೆಗಳನ್ನು ಸಂತ್ರಸ್ತರ ಇಚ್ಛೆಯಂತೆ ಅದೇ ಸ್ಥಳದಲ್ಲಿ ಅಥವಾ ಹೊಸದಾಗಿ ಗುರುತಿಸಲಾದ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿದ್ದಲ್ಲಿ ತಹಶೀಲ್ದಾರರು ಸಂತ್ರಸ್ತರ ಇಚ್ಛೆಯನ್ನು ಲಿಖಿತವಾಗಿ ಪಡೆದು ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆಯುವಂತೆ ಸೂಚಿಸಗಿದೆ.

ಸಮಿತಿ ರಚನೆ:

    ನೆರೆಯಿಂದ ಮನೆ ಕಳೆದುಕೊಂಡು ಕುಟುಂಬಗಳಿಗೆ ಈಗಾಗಲೇ ಶೆಡ್‍ಗಳ ನಿರ್ಮಾಣ ಮಾಡಲಾಗಿದೆ. ಬಾಡಿಗೆ ಮನೆಗೆ ತೆರಳುವವರಿಗೆ ಸರ್ಕಾರದ ಮಾರ್ಗಸೂಚಿಯಂತೆ ಮನೆ ಬಾಡಿಗೆ ಸಹ ನೀಡಲಾಗುವುದು. ಶೆಡ್‍ನಲ್ಲಿ ವಾಸಿಸುವ ಕುಟುಂಬಗಳ ಮೂಲಭೂತ ಸೌಕರ್ಯ ಹಾಗೂ ನಿರಂತರವಾದ ಆರೋಗ್ಯ ತಪಾಸಣೆ ಇತರ ಕಾರ್ಯಗಳಿಗಾಗಿ ನಿಯಮಿತವಾಗಿ ಪರಿಶೀಲನೆಗೆ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರ ನೇತೃತ್ವದಲ್ಲಿ ತಾಲೂಕಾ ಹಂತದಲ್ಲಿ ಹಾಗೂ ಸಂತ್ರಸ್ತ ಪ್ರತಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ:

      ಸಂತ್ರಸ್ತ ಗ್ರಾಮದ ಜನತೆಗೆ ಯಾವುದೇ ಕಾರಣಕ್ಕೂ ಅಶುದ್ಧವಾದ ನೀರು ಪೂರೈಕೆಯಾಗಬಾರದು ಹಾಗೂ ವಿದ್ಯುತ್ ಕುಡಿಯುವ ನೀರಿನ ಸರಬರಾಜು ಮೋಟರ್ ದುರಸ್ತಿ ಕಾರಣಗಳಿಗಾಗಿ ನೀರು ಪೂರೈಕೆಯಾಗಿಲ್ಲ ಎಂಬ ಸಬೂಬು ಹೇಳಬಾರದು. ಹೆಸ್ಕಾಂ ಹಾಗೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖಾ ಅಧಿಕಾರಿಗಳು ಆದ್ಯತೆ ಮೇಲೆ ಕುಡಿಯುವ ನೀರು ಹಾಗೂ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಬೆಳೆಹಾನಿ ಸಮೀಕ್ಷೆ:

 ಬೆಳೆ ಹಾನಿಯ ಸಮೀಕ್ಷೆಯನ್ನು ತ್ವರಿತವಾಗಿ ಪೂರೈಸಿ ನಿಖರವಾದ ವರದಿಯನ್ನು ಸಲ್ಲಿಸುವಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap