ಕೊರೊನಾ ಪರೀಕ್ಷೆಗೆ ಪ್ರಯೋಗಾಲಯ ಸ್ಥಾಪಿಸಿ

ದಾವಣಗೆರೆ :

   ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದ ರಕ್ತದ ಮಾದರಿಯನ್ನು ಪರೀಕ್ಷಿಸಲು ಪ್ರಯೋಗಾಲಯ ಸ್ಥಾಪಿಸಬೇಕೆಂದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕರು ಆದ ಎಂ.ಪಿ.ರೇಣುಕಾಚಾರ್ಯ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

    ನಗರದ ಹೊರ ವಲಯದಲ್ಲಿರುವ ಸಕ್ರ್ಯೂಟ್‍ಹೌಸ್‍ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವದ 198 ರಾಷ್ಟ್ರಗಳಲ್ಲಿ ಮಿಂಚಿನಂತೆ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದ ರಕ್ತದ ಮಾದರಿ ಪರೀಕ್ಷಿಸಲು ಜಿಲ್ಲೆಯಲ್ಲಿ ಪ್ರಯೋಗಾಲಯ ಸ್ಥಾಪಿಸುವುದರ ಜೊತೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

     ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್ ಖರೀದಿಗೆ ಈಗಾಗಲೇ ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಎಂದ ಅವರು, ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕೆಂದು ನಾವು ಮತ್ತು ಸಂಸದರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

     ಜಗತ್ತಿನ 198 ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಮಿಂಚಿನಂತೆ ಹರಡುತ್ತಿದ್ದು, ಕರ್ನಾಟಕದಲ್ಲಿ 55 ಜನರು ಸೇರಿದಂತೆ ದೇಶದಾದ್ಯಂತ 727 ಜನರಿಗೆ ಈ ಸೋಂಕು ತಗಲಿದ್ದು, ಈ ವರೆಗೂ ರಾಜ್ಯದಲ್ಲಿ ಮೂವರು ಸೇರಿದಂತೆ ದೇಶದಲ್ಲಿ 18 ಜನರು ಸಾವನಪ್ಪಿದ್ದಾರೆ. ಆದರೆ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ ಕಡಿಮೆ ಇದೆ ಎಂದು ಹೇಳಿದರು.

      ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರ ವರೆಗೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಸಿಎಂ ಯಡಿಯೂರಪ್ಪನವರು ಜಿಲ್ಲಾಧಿಕಾರಿಗಳು, ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೊರಾನಾ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಆದರೆ, ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಸರಿಯಲ್ಲ ಎಂದರು.

    ಆರ್ಥಿಕವಾಗಿ ಬಲಿಷ್ಠವಾಗಿರುವ ಮತ್ತು ಆರೋಗ್ಯ ಸೇವೆಯಲ್ಲಿ ಜಗತ್ತಿನ ಮೂರನೇ ಸ್ಥಾನದಲ್ಲಿರುವ ಇಟಲಿ ಅಂತಹ ದೇಶದಲ್ಲಿಯೇ ಸಹಾಸ್ರಾರು ಜನರು ಸಾವನಪ್ಪಿದ್ದಾರೆ. ಇದಕ್ಕೆ ಅಲ್ಲಿಯ ಜನರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದ ಅವರು, ನಮ್ಮ ಭಾರತ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ರಾಷ್ಟ್ರವಾಗಿದೆ. ಆದ್ದರಿಂದ ಯಾರೂ ಸಹ ನಿರ್ಲಕ್ಷ್ಯ ವಹಿಸದೆ ಏ.14ರ ವರೆಗೆ ಮನೆಯಲ್ಲಿಯೇ ಉಳಿದುಕೊಂಡು ಸ್ವಯಂ ಗೃಹ ಬಂಧನದಲ್ಲಿ ಇರಬೇಕೆಂದು ಕಿವಿಮಾತು ಹೇಳಿದರು.

    ವೈದ್ಯರು, ದಾದಿಯರು, ರಕ್ಷಣಾ ಇಲಾಖೆಯವರು(ಪೊಲೀಸರು), ಪೌರ ಕಾರ್ಮಿಕರು ಹಾಗೂ ಮಾಧ್ಯಮದವರು ತಮ್ಮ ವೈಯಕ್ತಿಕ ಬದುಕು ಮರೆತು ಸೇವಾ ಮನೋಭಾವದಿಂದ ಬೀದಿಗೆ ಇಳಿದು ಕೆಲಸ ಮಾಡುತ್ತಿದ್ದು, ಕೆಲ ಸಂದರ್ಭದಲ್ಲಿ ಅನಿವಾರ್ಯವಾಗಿ ಲಾಠಿ ಚಾರ್ಜ್ ಸಹ ನಡೆಸುತ್ತಿದ್ದಾರೆ. ಅದರೆ, ಮೊನ್ನೆ ಬೆಂಗಳೂರಿನಲ್ಲಿ ಇಬ್ಬರು ದೇಶದ್ರೋಹಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

    ನಾವು ಬದುಕಿದ್ದರೆ ತಾನೇ ಸಾಮೂಹಿಕ ಪ್ರಾರ್ಥನೆ ಮಾಡಲು, ಹಬ್ಬ ಹರಿದಿನಗಳನ್ನು ಆಚರಿಸಲು ಸಾಧ್ಯ ಎಂದ ಅವರು, ಜೀವನದಲ್ಲಿ ಏನು ಬೇಕಾದರೂ ಸಂಪಾದನೆ ಮಾಡಬಹುದು. ಅದರೆ, ಆರೋಗ್ಯ ಸಂಪಾದನೆ ಮಾಡಲಾಗುವುದಿಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತು ಉಭಯ ಸರ್ಕಾರಗಳು ಜನರ ರಕ್ಷಣೆಗಾಗಿ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಗೆ ಸ್ಪಂದಿಸಿ, 21 ದಿನಗಳ ಕಾಲ ಮನೆಯಿಂದ ಯಾರೂ ಸಹ ಅನಾವಶ್ಯಕವಾಗಿ ಹೊರ ಬರಬಾರದು ಎಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಪಿ.ಸಿ.ಶ್ರೀನಿವಾಸ್, ರಾಜು ವೀರಣ್ಣ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ