ಬೆಂಗಳೂರು:
ಬೆಂಗಳೂರನ್ನು ಉಗ್ರರ ತಾಣ ಎಂದಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕನ್ನಡಿಗರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ, ಬೆಂಗಳೂರು ನಗರ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಹಿರಿಯ ಮುಖಂಡ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದರು. ಜತೆಗೆ ತೇಜಸ್ವಿ ಸೂರ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮನೋಹರ್ ಮಾತನಾಡಿ, ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ನಗರದಲ್ಲಿ ಎನ್‍ಐಎ ಸ್ಥಾಪನೆಗೆ ಮುಂದಾಗಿದ್ದು, ಬೆಂಗಳೂರು ನಗರದಲ್ಲಿ ಉಗ್ರಗಾಮಿಗಳ ಚಟುವಟಿಕೆ ಇದೆ, ಬೆಂಗಳೂರು ನಗರ ಉಗ್ರಗಾಮಿಗಳ ಕೇಂದ್ರ ಎಂದು ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರು ನಗರ ಇಡೀ ವಿಶ್ವಕ್ಕೆ ಮಾದರಿ ನಗರವಾಗಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಕಾಳಜಿ ವಹಿಸದ ಸೂರ್ಯ ಕೇವಲ ಪ್ರಚಾರಕ್ಕಾಗಿ ಹಾಗೂ ರಾಷ್ಟ್ರಮಟ್ಟದಲ್ಲಿ ತನ್ನ ಹೆಸರನ್ನು ಬಿಂಬಿಸಿಕೊಳ್ಳಲು ಬೆಂಗಳೂರು ಹಾಗೂ ಕರ್ನಾಟಕವನ್ನು ಅವಮಾನಿಸಿದ್ದಾನೆ. ಕೂಡಲೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಹಾಗೂ ಬೆಂಗಳೂರು ನಗರದ ಜನರ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
