ಹಾವೇರಿ
ನದಿಪಾತ್ರದ ಪ್ರತಿ ಗ್ರಾಮಗಳಿಗೆ ಓರ್ವ ತಾಲೂಕು ಮಟ್ಟದ ಅಧಿಕಾರಿಗೆ ಜವಾಬ್ದಾರಿ ನೀಡಿ ಪ್ರವಾಹ ಮತ್ತು ಅತಿವೃಷ್ಠಿ ಪರಿಹಾರ ತುರ್ತು ಕ್ರಮ ವಹಿಸಲು ತಹಶೀಲ್ದಾರಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚನೆ ನೀಡಿದರು.
ಗುರುವಾರ ಮುಂಜಾನೆ ತಾಲೂಕಾ ಆಡಳಿತದೊಂದಿಗೆ ವಿಡಿಯೋ ಸಂವಾದ ನಡೆಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಅತಿವೃಷ್ಠಿ ಹಾಗೂ ಪ್ರವಾಹ ಪರಿಸ್ಥಿತಿ ಕುರಿತಂತೆ ಮಾಹಿತಿಪಡೆದ ಅವರು ಸಂತ್ರಸ್ಥರಿಗೆ ತ್ವರಿತವಾಗಿ ಸ್ಪಂದಿಸಿ ಸ್ಥಳಾಂತರ, ಪರಿಹಾರ ಕಾರ್ಯ, ತಾತ್ಕಾಲಿಕ ವಸತಿ ಹಾಗೂ ಊಟ- ಉಪಹಾರದ ವ್ಯವಸ್ಥೆಯನ್ನು ವಿಳಂಬಕ್ಕೆ ಅವಕಾಶವಿಲ್ಲದೆ ತತ್ವರಿತವಾಗಿ ಕೈಗೊಳ್ಳುವಂತೆ ತಹಶೀಲ್ದಾರ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹ ಹಾಗೂ ಅತಿವೃಷ್ಠಿಯಿಂದ ಗ್ರಾಮಗಳಿಗೆ ನೀರು ನುಗ್ಗಿ ವಾಸಕ್ಕೆ ಅನಾನುಕೂಲವಾದರೆ ಜನರ ಜೊತೆಗೆ ಅಗತ್ಯ ಕಂಡುಬಂದರೆ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಜನ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ವೈದ್ಯಕೀಯ ಔಷೋಧಪಚಾರ, ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕು, ಔಷಧೀಯ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ಫಾಗಿಂಗ್ ವ್ಯವಸ್ಥೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ಅಗತ್ಯವಿದ್ದೆಡೆ ವಿಳಂಬಕ್ಕೆ ಅವಕಾಶವಿಲ್ಲದೆ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಬೇಕು. ಕೇಂದ್ರದಲ್ಲಿ ಯಾರೇ ಬಂದರೂ ಊಟ ನೀಡಲು ನಿರಾಕರಿಸಬಾರದು. ಆಹಾರದ ಗುಣಮಟ್ಟ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು.ಹರವಿ, ನದಿನೀರಲಗಿ, ಚಿಕ್ಕನಲ್ಲೂರ, ತಿಪ್ಪಾಗೊಂಡ, ಕುಪ್ಪೇಲೂರ, ಬಸಾಪುರ, ಅಲ್ಲಿಪುರ, ಹೆರೂರ, ಹಾನಗಲ್, ಶಿಗ್ಗಾಂವ, ತೆರವಮೆಳ್ಳಳ್ಳಿ, ನರೇಗಲ್ ಸೇರಿದಂತೆ ಕೆಲ ಗ್ರಾಮಗಳಲ್ಲಿ ತೀವ್ರ ತೊಂದರೆ ಉಂಟಾಗಿದೆ.
ಕೆಲವೆಡೆ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ, ಇನ್ನು ಕೆಲವೆಡೆ ಕೆರೆ, ಕಾಲುವೆ, ಬಾಂದಾರ ಹಾಗೂ ನದಿ ತುಂಬಿ ಗ್ರಾಮಗಳಿಗೆ ನೀರು ಹರಿಯುತ್ತಿವೆ. ಪ್ರತಿ ಗ್ರಾಮದ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮದ ಕೆರೆ ದಡಗಳ ಭದ್ರತೆ ಕುರಿತಂತೆ ಸ್ಥಳಪರಿಶೀಲಿಸಿ ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳಿರಿ. ಸಣ್ಣ ನೀರಾವರಿ ಹಾಗೂ ಜಿ.ಪಂ.ಕಿರಿಯ ಇಂಜನೀಯರಗಳಿಂದ ಎಲ್ಲ ಕೆರೆ ಬಾಂದಾರಗಳಿಗೆ ನಿಯಮಿತವಾಗಿ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಕುರಿತಂತೆ ವರದಿ ಪಡೆದುಕೊಳ್ಳುವಂತೆ ಸೂಚಿಸಿದರು.
ಕುಡಿಯುವ ನೀರಿನ ಸರಬರಾಜು ಪೈಪುಗಳು ಒಡೆದುಹೋಗಿ ಗಟಾರ ಹಾಗೂ ಮಳೆ ನೀಡು ಮಿಶ್ರವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದೊಮ್ಮೆ ಪೈಪ್‍ಗಳು ಒಡೆದುಹೋದರೆ ತಕ್ಷಣವೇ ಬದಲಾಯಿಸಲು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಕ್ರಮ ತೆಗೆದುಕೊಳ್ಳಬೇಕು. ಈ ಕುರಿತಂತೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಅಭಿಯಂತರರ ಉಸ್ತುವಾರಿಗೆ ಸೂಚಿಸಿದರು.
ರಸ್ತೆಯಲ್ಲಿ ನೀರು ಹರಿದು ರಸ್ತೆ ಹಾಗೂ ಸೇತುವೆ ಕುಸಿದು ಸಂಪರ್ಕ ಕಡಿತಗೊಂಡರೆ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗದ ಅಧಿಕಾರಗಳು ತಕ್ಷಣ ದುರಸ್ಥಿಗೊಳಿಸಬೇಕು. ಪ್ರವಾಹ ತುಂಬಿದ ನದಿಗಳಲ್ಲಿ ತೆಪ್ಪದ ಮೇಲೆ ಜನಸಂಚಾರ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುವಂತೆ ತಹಶೀಲ್ದಾರಗಳಿಗೆ ಸೂಚನೆ ನೀಡಿದರು.
ಶಿಥಿಲವಾದ ಶಾಲಾ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠಮಾಡಬಾರದು, ಮಳೆ ಕಡಿಮೆಯಾದನಂತರ ಶಿಥಿಲ ಶಾಲಾ ಕಟ್ಟಡಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.ಮನೆಹಾನಿ, ಜೀವಹಾನಿ ಸಂಭವಿಸಿದ ತಕ್ಷಣವೇ ಸ್ಥಳ ಪರಿಶೀಲನೆ ಹಾಗೂ ಮಹಜರ್ ನಡೆಸಿ ವಿಪತ್ತು ಮಾರ್ಗಸೂಚಿಯಂತೆ ಪರಿಹಾರ ನೀಡಬೇಕು. ಶಿಥಿಲಗೊಂಡ ಮನೆಗಳಲ್ಲಿ ವಾಸಿಸುವ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದರು.
ಬೆಳೆಹಾನಿ ಸಮೀಕ್ಷೆ:
ತೋಟಗಾರಿಕೆ ಹಾಗೂ ಕೃಷಿ ಜಮೀನಿನಲ್ಲಿ ಮಳೆ ಅಥವಾ ಪ್ರವಾಹದ ನೀರು ನುಗ್ಗಿ ಬೆಲೆ ಹಾನಿ ಕುರಿತಂತೆ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಪಿ.ಡಿ.ಓ., ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸರ್ವೇಯರ ತಂಡಗಳನ್ನು ರಚಿಸಿ ಪ್ರತಿ ಗ್ರಾಮದ ಪ್ಲಾಟ್‍ಗಳ ಛಾಯಾ ಚಿತ್ರ ಸಂಗ್ರಹಿಸಬೇಕು. ಸಾಧ್ಯವಾದರೆ ಡ್ರೋನ್ ಕ್ಯಾಮರಾ ಬಳಸಿ ಏರಿಯಲ್ ಸರ್ವೇ ಮೂಲಕ ಬೆಳೆಹಾನಿ ವಿಡಿಯೋ ಚಿತ್ರೀಕರಣಗೊಳಿಸಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಪರಿಸ್ಥಿತಿಯ ನಿಭಾಯಿಸಲು ಅಗ್ನಿಶಾಮಕ ತಂಡ ಅಗತ್ಯ ವಿಪತ್ತು ನಿರ್ವಹಣಾ ಪರಿಕರಗಳೊಂದಿಗೆ ಸಜ್ಜಾಗುವಂತೆ ಸೂಚಿಸಿದರು. ಹಾಗೂ ಅಗತ್ಯ ಬೋಟ್‍ಗಳನ್ನು ಸಿದ್ಧಪಡಿಸಿಕೊಳ್ಳಲು ಸೂಚಿಸಿದರು.
ಹಾವೇರಿ ತಾಲೂಕಿಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಚೈತ್ರ (08375-249292/ 9480843036), ರಾಣೇಬೆನ್ನೂರು ತಾಲೂಕಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ (08375-234505/8748067302), ಬ್ಯಾಡಗಿ ತಾಲೂಕಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸಿದ್ಧರಾಜು (08375-249029/6362665903) ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿಗೆ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಅಭೀದ್ ಗದ್ಯಾಳ್( 08376-297331/9008690039), ಸವಣೂರು ತಾಲೂಕಿಗೆ ಉಪ ವಿಭಾಧಿಕಾರಿ ಹರ್ಷಲ್ ಬೋಯಾರ್ ನಾರಾಯಣರಾವ್(08378-241646/9622633744), ಶಿಗ್ಗಾಂವ ತಾಲೂಕಿಗೆ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಶಶಿಕಲಾ ಪಾಳೇದ( 08375-249297/9449778640) ಹಾಗೂ ಹಾನಗಲ್ ತಾಲೂಕಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ (08375-249008/9448694627) ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಕೃಷ್ಣಭಾಜಪೇಯಿ ಅವರು ಆದೇಶ ಹೊರಡಿಸಿದ್ದಾರೆ.
ಹಾನಿ ವಿವರ:
ಅತಿವೃಷ್ಠಿ ಹಾಗೂ ಪ್ರವಾಹದಿಂದ ಈವರೆಗೆ ಜಿಲ್ಲೆಯಲ್ಲಿ 18 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 907 ಮನೆಗಳು ಹಾನಿಯಾಗಿವೆ. ಎರಡು ಜಾನುವಾರುಗಳ ಜೀವಹಾನಿಗಿವೆ, 27 ಕಿ.ಮೀ.ರಸ್ತೆ ಹಾಗೂ 27 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಹಾಗೂ ಅಂದಾಜು 205 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿಯಾಗಿರುವ ಪ್ರಾಥಮಿಕ ವರದಿಗಳು ಬಂದಿವೆ.
ಹಾವೇರಿ ತಾಲೂಕಿನಲ್ಲಿ ನಾಗೇಂದ್ರನಮಟ್ಟಿ, ಕೋಡಬಾಳ, ಹೊಸಕಿತ್ತೂರ, ಕರ್ಜಗಿ, ನಾಗನೂರ, ಕೆಸರಳ್ಳಿ, ಕೋಣನತಂಬಗಿ ಹಾಗೂ ಹಾನಗಲ್ ತಾಲೂಕಿನ ಹೊಸಳ್ಳಿ, ಅಲ್ಲಾಪುರ, ಹರವಿ, ಕೂಡ್ಲ, ಹಿರೇಹಳ್ಳಿಹಾಳ ಹಾಗೂ ಹಾನಗಲ್ ನಗರ ಹಾಗೂ ಸವಣೂರಿನ ಕುಣಿಮೆಳ್ಳಿಹಳ್ಳಿ, ಹಳೆಮಳ್ಳಳ್ಳಿ, ಹಲಸೂರ, ಶಿಗ್ಗಾಂವ ನಗರ, ರಾಣೇಬೆನ್ನೂರ ನಗರದಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ತಾಲೂಕುವಾರು ವಿವರಂತೆ ಮಳೆಯಿಂದ ಹಾವೇರಿ ತಾಲೂಕಿನಲ್ಲಿ 391 ಮನೆ, ರಾಣೇಬೆನ್ನೂರಿನಲ್ಲಿ 89- ಮನೆ, ಬ್ಯಾಡಗಿಯಲ್ಲಿ 37ಮನೆ, ಹಿರೇಕೆರೂರಲ್ಲಿ 94 ಮನೆ, ಸವಣೂರಿನಲ್ಲಿ 183 ಮನೆ, ಶಿಗ್ಗಾಂವಿಯಲ್ಲಿ 11 ಮನೆ, ಹಾನಗಲ್‍ನಲ್ಲಿ 102 ಮನೆ ಸೇರಿದಂತೆ 907ಮನೆಗಳು ಹಾನಿಯಾಗಿವೆ.
ವಿವಿಧ ಸ್ಥಳಗಳಿಗೆ ಡಿಸಿ ಭೇಟಿ:
ಹಾವೇರಿ, ಶಿಗ್ಗಾಂವ, ಸವಣೂರ ಹಾಗೂ ಹಾನಗಲ್ ತಾಲೂಕಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಿವಿಧ ಗ್ರಾಮಗಳ ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಹಾಗೂ ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ಪರಿಹಾರ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.ನದಿ ಪ್ರವಾಹ ಹೆಚ್ಚಾಗುವ ಗ್ರಾಮಗಳಲ್ಲಿ ಬೋಟ್‍ಗಳ ವ್ಯವಸ್ಥೆ ಹಾಗೂ ವಿಪತ್ತು ನಿರ್ವಹಣಾ ಮುಂಜಾಗ್ರತಾ ಪರಿಕರಗಳೊಂದಿಗೆ ಸಜ್ಜಾಗುವಂತೆ ಅಗ್ನಿಶಾಮಕದಳದ ಅಧಿಕಾರಿಗಳಿಗೆ ಸೂಚನೆ ನೀಡಿದರು.