ಆರೋಗ್ಯ ಭಾಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆ ಅತ್ಯಗತ್ಯ

ಹಾವೇರಿ

       ಆರೋಗ್ಯ ಭಾಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆ ಇಂದು ಅತ್ಯಗತ್ಯವಾಗಿದೆ. ರೈತರು ಅಧಿಕ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಮುಂದೆಬರಬೇಕು ಎಂದು ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಇಲಾಖೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್‍ಖಾನ್ ಅವರು ಜಿಲ್ಲಾ ಆಡಳಿತ , ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಧಾರವಾಡ, ಕೃಷಿ ವಿಶ್ವವಿದ್ಯಾಲಯ, ಹನುಮನಮಟ್ಟಿ ಐ.ಸಿ.ಎ.ಆರ್.ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಿರೇಕೆರೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ಸಾವಯವ ಮತ್ತು ಸಿರಿಧಾನ್ಯಗಳ ಕೃಷಿ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

        ಸಿರಿಧಾನ್ಯ ಬೆಳೆದ ರೈತರಿಗೆ ಲಾಭ ದೊರೆಯುತ್ತಿಲ್ಲ, ಮಧ್ಯವರ್ತಿಗಳ ಪಾಲಾಗುತ್ತಿದೆ. ಕಾರಣ ಅಧಿಕಾರಿಗಳು ರೈತರು ಆರ್ಥಿಕವಾಗಿ ಸದೃಢರಾಗಲು ಸರಿಯಾದ ಮಾರ್ಗದರ್ಶನ ನೀಡಬೇಕು. ಪಡಿತರ ಆಹಾರದಲ್ಲಿ ವಿತರಿಸಲಾಗುತ್ತಿರುವ ಏಳು ಕೆ.ಜಿ.ಅಕ್ಕಿಯಲ್ಲಿ ಐದು ಕೆ.ಜಿ. ಕೇಂದ್ರದಿಂದ ಹಾಗೂ ಎರಡು ಕೆ.ಜಿ. ರಾಜ್ಯದಿಂದ ವಿತರಿಸಲಾಗುತ್ತಿದೆ. 3 ಲಕ್ಷ ಟನ್ ಆಹಾರಧಾನ್ಯ ಬೇಕಾಗುತ್ತಿದೆ. ಸಿರಿಧಾನ್ಯಗಳನ್ನು ಪೂರೈಸುವುದಾದರೆ ಆಯಾ ಪ್ರದೇಶಕ್ಕೆ ತಕ್ಕಂತೆ ಸಿರಿಧಾನ್ಯಗಳನ್ನು ಖರೀದಿಸಿ ವಿತರಿಸಲಾಗುವುದು ಎಂದು ಹೇಳಿದರು.

       ಈಗಾಗಲೇ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಆರಂಭಕ್ಕೆ ಅಗತ್ಯ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಿಷ್ಠ ಐದು ಕೋಟಿ ರೂ. ನೀಡುವ ಭರವಸೆ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸಮಾಡೋಣ ಎಂದು ಹೇಳಿದರು.

        ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರು ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಂಸ್ಕರಣಾ ಘಟಕ ಹಾಗೂ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸಿರಿಧಾನ್ಯಗಳನ್ನು ಬೆಳೆದ ರೈತರು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಸಂಸ್ಕರಣಾ ಘಟಕ ಸ್ಥಾಪನೆಗೆ ಸಹಾಯಧನ ಸಹ ಒದಗಿಸಲಾಗುವುದು ಎಂದು ಹೇಳಿದರು.

         ಆರೋಗ್ಯದ ಹಿದೃಷ್ಟಿಯಿಂದ ಗ್ರಾಮಗಳಲ್ಲಿ ಮಾತ್ರವಲ್ಲದೇ ಪಟ್ಟಣ ಪ್ರದೇಶದಲ್ಲಿಯೂ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ. ಹಾಗಾಗಿ ಪಡಿತರ ವಿತರಣೆಯಲ್ಲಿ ವಿತರಿಸುವ ಏಳು ಕೆ.ಜಿ. ಅಕ್ಕಿ ಬದಲಾಗಿ ಎರಡು ಕೆ.ಜಿ. ಸಿರಿಧಾನ್ಯಗಳನ್ನು ಆಯಾ ಪ್ರದೇಶದ ಊಟದಲ್ಲಿ ಬಳಸುವ ಆಹಾರ ಪದ್ಧತಿಯಂತೆ ಜೋಳ, ರಾಗಿ, ಸಜ್ಜೆ ವಿತರಿಸಲು ಆಹಾರ ಸಚಿವರು ಮುಂದಾಗಬೇಕು. ಎಲ್ಲ ಹಾಸ್ಟೇಲ್‍ಗಳಲ್ಲಿ ಹಾಗೂ ಶಾಲಾ ಮಕ್ಕಳಿಗೆ ಒಂದು ದಿನ ಸಿರಿಧಾನ್ಯಗಳ ಊಟದ ಕೊಡಲು ಚಿಂತನೆ ಮಾಡಲಾಗುತ್ತಿದೆ ಎಂದರು.

      ರೈತರಿಗೆ ಬೆಳೆವಿಮೆ ಜೊತೆಗೆ ರೂ.ಐದು ಲಕ್ಷ ಮೊತ್ತದ ಜೀವವಿಮೆ ಯೋಜನೆ ಜಾರಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಹಾಗೂ ರೈತರ ಸಂಪೂರ್ಣ ಮಾಹಿತಿಹೊಂದಿದ ಗುರುತಿನ ಚೀಟಿ ನೀಡುವ ಯೋಜನೆಯನ್ನು ಮುಂಬರುವ ಬಜೆಟ್‍ನಲ್ಲಿ ಘೋಷಣೆ ಮಾಡಲಾಗುವುದು. ಕೃಷಿ ಇಲಾಖೆ ಉಪಕರಣಗಳನ್ನು ಪಡೆಯಲು ಸಾಮಾನ್ಯ ವರ್ಗದ ರೈತರಿಗೂ ಸಹ ಶೇ.75 ರಷ್ಟು ಸಬ್ಸಿಡಿ ಜಾರಿಗೆ ತರಲಾಗುವುದು.

         ರೈತರು ಆಧುನಿಕ ಬೇಸಾಯ ಪದ್ಧತಿಗೆ ಉಪಯೋಗಿಸುವ ಉಪಕರಣಗಳಿಗೆ ಬಳಸುವ ಡಿಸೈಲ್‍ನ್ನು ಸಬ್ಸಿಡಿದರದಲ್ಲಿ ವಿತರಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಕೃಷಿ ಇಲಾಖೆ ಮೂಲಕ ಕೃಷಿಹೊಂಡ, ಹನಿನೀರಾವರಿ, ತುಂತುನೀರವಾರಿ ಹೀಗೆ ಅನೇಕ ಯೋಜನೆಗಳ ಸೌಲಭ್ಯ ಪಡೆದುಕೊಂಡು ಉತ್ತಮ ಬೇಸಾಯ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು

       ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ಸಾವಯವ ಪದ್ಧತಿ ನಮ್ಮ ಮೂಲ ಉದ್ಯೋಗವಾಗಿತ್ತು. ದ್ವಿದಳ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ರಫ್ತು ಮಾಡಲಾಗುತ್ತಿತ್ತು. ಆಧುನಿಕ ಆಹಾರ ಪದ್ಧತಿಯಿಂದ ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆಗಳು ಬರುತ್ತಿವೆ. ಸಿರಿಧಾನ್ಯಗಳಲ್ಲಿ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಭತ್ತ ಹಾಗೂ ಗೋದಿಯಲ್ಲಿ ನಾರಿನಾಂಶ ಹಾಗೂ ಪೋಷಕಾಂಶಗಳು ಕಡಿಮೆ ಇರುತ್ತವೆ. ರೈತರು ಸಿರಿಧಾನ್ಯಗಳನ್ನು ಬೆಳೆಯಬೇಕು ಹಾಗೂ ಉಪಯೋಗಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅಧಿಕಾರಿಗಳು ಸಿರಿಧಾನ್ಯ ಬೆಳೆಯಲು ಹೆಚ್ಚು ಉತ್ತೇಜನ ನೀಡಬೇಕು ಎಂದು ಹೇಳಿದರು.

        ಜಿಲ್ಲೆಯಲ್ಲಿ ಪ್ರಸ್ತುತ ಮೆಡಿಕಲ್ ಕಾಲೇಜು ಆರಂಭಕ್ಕೆ ಜಿಲ್ಲಾ ಉಸ್ತುವಾರಿ ರೂ.10 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು ಹಾಗೂ ಜಿಲ್ಲೆಯ ರೈತರಿಗೆ ತಾಡಪಲ್ ವಿತರಣೆ ಹಾಗೂ ಕೃಷಿ ಉಪಕರಣಗಳ ಸಮಸ್ಯೆಯನ್ನು ಬಗೆಹರಿಸುವಂತೆ ಕೃಷಿ ಸಚಿವರಿಗೆ ಮನವಿ ಮಾಡಿಕೊಂಡರು.

        ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಬಿ.ಸಿ.ಪಾಟೀಲ ಅವರು ಮಾತನಾಡಿ, ಸಿರಿಧಾನ್ಯಗಳು ಶ್ರೀಮಂತ ಧಾನ್ಯಗಳು. ಈ ಧಾನ್ಯಗಳನ್ನು ಸೇವಿಸಿದವರು 80-90 ವರ್ಷಗಳ ಕಾಲ ಜೀವಿಸುತ್ತಿದ್ದರು. ಇಂದು ಮೂರು ತಿಂಗಳಿಗೆ ಬರುವ ಹೈಬ್ರೀಡ್ ಆಹಾರ ಸೇವಿಸಿ 50 ವರ್ಷಗಳಿಗೆ ಜೀವನ ಮುಗಿಸುತ್ತಾರೆ. ಸಿರಿಧಾನ್ಯಗಳ ಬಳಕೆ ಹಾಗೂ ತಿಳುವಳಿಕೆ ಮೂಡಿಸಲು ಇಂತಹ ಮೇಳಗಳು ಸಹಕಾರಿಯಾಗಿವೆ. ರೈತರು ಮಾರಾಟಕ್ಕೆ ಜೋಳ ಬೆಳೆಯಿರಿ ಆದರೆ ಮನೆ ಊಟಕ್ಕೆ ಸಿರಿಧಾನ್ಯಗಳನ್ನು ಬೆಳೆಯಿರಿ ಎಂದರು.

        ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಮೆಡಿಕಲ್ ಕಾಲೇಜ್ ಆರಂಭಕ್ಕೆ ಹಾಗೂ ಜಿಲ್ಲೆಯ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಅನುದಾನ ಮಂಜೂರು ಮಾಡಬೇಕು. ಕೃಷಿ ಸಚಿವರು ಸಾಮಾನ್ಯ ವರ್ಗದ ರೈತರಿಗೂ ಸಹ ಹೆಚ್ಚಿನ ಸಬ್ಸಿಡಿ ನೀಡಬೇಕು. ಜಿಲ್ಲೆಯಲ್ಲಿ ಕೃಷಿ ಯಂತ್ರೋಪಕರಣ ಉಪಯೋಗಿಸುವ ರೈತರಿಗೆ ಸಬ್ಸಿಡಿ ದರದರಲ್ಲಿ ಡಿಸೈಲ್ ವಿತರಿಸಬೇಕು ಎಂದು ಮನವಿ ಮಾಡಿಕೊಂಡರು.

          ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಬಿ. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಹಿರೇಕೆರೂರು ತಾ.ಪಂ.ಅಧ್ಯಕ್ಷ ಹೇಮಣ್ಣ ಮುದಿರೆಡ್ಡಿ, ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ನೀಲವ್ವ ಚವ್ಹಾಣ, ಜಿ.ಪಂ.ಸದಸ್ಯರಾದ ಶ್ರಿಮತಿ ಸುಮಿತ್ರಾ ಪಾಟೀಲ, ನೀಲಪ್ಪ ಈಟೇರ, ಪ್ರಕಾಶ ಬನ್ನಿಕೋಡ, ಶ್ರೀಮತಿ ಮಹದೇವಕ್ಕ ಗೊಪಕ್ಕಳಿ, ತಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಕವಿತಾ ಬಿದರಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಚ್.ಪಾಟೀಲ, ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಶಿವನಗೌಡ್ರ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಲೀಲಾವತಿ ಇತರರು ಉಪಸ್ಥಿತರಿದ್ದರು.

        ವಿವಿಧ ಕಟ್ಟಡಗಳ ಉದ್ಘಾಟನೆ: ಇದೇ ಸಂದರ್ಭದಲ್ಲಿ ಹಿರೇಕೆರೂರು ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ, ವಿದ್ಯಾರ್ಥಿ ನಿಲಯದ ನೂತನ ಕಟ್ಟಡ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮತ್ತು ಚಿನ್ನಮುಳಗುಂದ ಹಾಗೂ ಮೆಟ್ರಿಕ್ ಪೂರ್ವ ಹಾಗೂ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಹಿರೇಕೆರೂರು ವಿದ್ಯಾರ್ಥಿ ನಿಲಯಗಳ ನೂತನ ಗಣಕ ಯಂತ್ರ ಕೊಠಡಿಗಳ ಹಾಗೂ ರಟ್ಟೀಹಳ್ಳಿ ತಾಲೂಕು ಯಡಗೋಡ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಭವನದ ಉದ್ಘಾಟನೆಯನ್ನು ಕೃಷಿ ಸಚಿವರು ನೆರವೇರಿಸಿದರು.

        ಆಕರ್ಷಕ ಮೆರವಣಿಗೆ: ಸಾವಯವ ಮತ್ತು ಸಿರಿಧಾನ್ಯಗಳ ಕೃಷಿ ಮೇಳದ ಅಂಗವಾಗಿ ಆಯೋಜಿಸಲಾದ ಪೂರ್ಣಕುಂಭ ಹಾಗೂ ಶೃಂಗರಿಸಿದ ಎತ್ತಿನಗಾಡಿ ಆಕರ್ಷಕ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ವಿವಿಧ ಮಳಿಗೆಗಳು: ಕೃಷಿ ಮೇಳದ ಅಂಗವಾಗಿ ಹಿರೇಕೆರೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸ್ಥಾಪಿಸಿದ ಸಿರಿಧಾನ್ಯಗಳ ಬೆಳೆ ಮಾಹಿತಿ ಮಳಿಗೆಗಳು ಹಾಗೂ ವಿವಿಧ ಕೃಷಿ ಯಂತ್ರೋಪಕರಣಗಳ ಮಳಿಗೆಗಳು ರೈತರ ಆಕರ್ಷಣೆಯ ಕೇಂದ್ರಗಳಾಗಿದ್ದು ಸಾಮಾನ್ಯವಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link