ಚಿತ್ರದುರ್ಗ :
ಜಲಕ್ಷಾಮ ಎದುರಿಸುತ್ತಿರುವ ಇಂದಿನ ಸ್ಥಿತಿಗತಿಯಲ್ಲಿ ಅತ್ಯಮೂಲ್ಯವಾಗಿರುವ ನೀರಿನ ಸದ್ಬಳಕೆ, ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಯಶಸ್ವಿಗೆ ಸರ್ಕಾರಿ ಯಂತ್ರದ ಜೊತೆಗೆ ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಜೊತೆಗೆ ಸಹಕಾರ ಅತ್ಯಗತ್ಯವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಜಲಶಕ್ತಿ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ರವಿಶಂಕರ್ ಪ್ರಸಾದ್ ತಿಳಿಸಿದರು.
ಜಲಶಕ್ತಿ ಅಭಿಯಾನವನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಹಿರಿಯೂರು ತಾಲ್ಲೂಕಿನ ಐಮಂಗಲ, ಮೇಟಿಕುರ್ಕೆ ಮುಂತಾದ ಪ್ರದೇಶಗಳ ಕ್ಷೇತ್ರಗಳಿಗೆ ಭೇಟಿ ನೀಡಿ, ಬಳಿಕ ಮೇಟಿಕುರ್ಕೆಯ ಸಾಲು ಮರದ ತಿಮ್ಮಕ್ಕ ವೃಕ್ಷೋಧ್ಯಾನ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭಾರತ ಸರ್ಕಾರವು ಜಲಭದ್ರತೆಗಾಗಿ ‘ಜಲಶಕ್ತಿ ಅಭಿಯಾನ’ ಎಂಬ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜು. 01 ರಿಂದ ಸೆ. 15 ರವರೆಗೆ ಮೊದಲ ಹಂತದಲ್ಲಿ ಹಮ್ಮಿಕೊಂಡಿದೆ. ರಾಜ್ಯದ ಹಲವು ಭಾಗಗಳಲ್ಲಿ ನೀರಿನ ತೀವ್ರ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಲಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು
ಕರ್ನಾಟಕ ರಾಜ್ಯದ 53 ತಾಲ್ಲೂಕುಗಳನ್ನು ಅಂತರ್ಜಲದ ಅತಿಯಾದ ಬಳಕೆಯ ಕಾರಣದಿಂದ, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿರುವ ತಾಲ್ಲೂಕುಗಳೆಂದು ಭಾರತ ಸರ್ಕಾರ ಗುರುತಿಸಿದೆ. ಈ ಪೈಕಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹಿರಿಯೂರು, ಹೊಸದುರ್ಗ, ಚಳ್ಳಕೆರೆ, ಹಾಗೂ ಚಿತ್ರದುರ್ಗ ತಾಲ್ಲೂಕುಗಳು ಸೇರಿವೆ.
ಜಲದ ಮೂಲ, ಜಲ ಪುನರ್ ಬಳಕೆ, ಜಲ ಸಂರಕ್ಷಣೆ, ಮಳೆ ನೀರಿನ ಕೊಯ್ಲು, ಕೆರೆ ಕಟ್ಟೆಗಳ ಪುನಶ್ಚೇತನ, ಇಂಗುಗುಂಡಿಗಳ ತಯಾರಿಕೆ, ಜಲಾನಯನ ಅಭಿವೃದ್ಧಿ, ತ್ಯಾಜ್ಯ ನೀರಿನ ಪುನರ್‍ಬಳಕೆ ಹಾಗೂ ಹಸಿರೀಕರಣ ಬಗ್ಗೆ ತಳ ಮಟ್ಟದಿಂದ ಅಂದರೆ ಗ್ರಾಮೀಣ ದಿಂದ ನಗರ, ಪಟ್ಟಣ ಪ್ರದೇಶದವರೆಗೂ ಎಲ್ಲ ಹಂತಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು
ನೀರಿನ ಸಮಸ್ಯೆ, ಅಂತರ್ಜಲ ಕುಸಿತ, ಕುಡಿಯುವ ನೀರಿನ ಅಭಾವ ನಿವಾರಿಸುವ ದಿಸೆಯಲ್ಲಿ ಇದೊಂದು ದೀರ್ಘಕಾಲಿಕ, ಶಾಶ್ವತ ಪರಿಹಾರ, ಮಾರ್ಗೋಪಾಯ ಕಂಡುಕೊಳ್ಳಬಹುದಾದ ಅಭಿಯಾನವಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಇದಕ್ಕಾಗಿ ಜಲಶಕ್ತಿ ಅಭಿಯಾನ ಎಂಬ ಹೆಸರಿನಲ್ಲಿ ವಿನೂತನ ಮಾದರಿಯಲ್ಲಿ ಕಾರ್ಯಕ್ರಮ ರೂಪಿಸಿದೆ ಎಂದು ಮಾಹಿತಿ ನೀಡಿದರು
ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಪ್ರತಿವರ್ಷ ಬರಗಾಲಕ್ಕೆ ತುತ್ತಾಗುತ್ತಿವೆ. ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನ ಕಾರ್ಯಕ್ರಮದಡಿ ರಾಜ್ಯ ಸರ್ಕಾರದ ಜಲಾಮೃತ ಯೋಜನೆಯನ್ನೂ ತೊಡಗಿಸಿಕೊಂಡು, ನೀರಿನ ಸಂರಕ್ಷಣೆ ಮತ್ತು ಸದ್ಬಳಕೆಗೆ ಜನಜಾಗೃತಿ ಮೂಡಿಸಲಾಗುವುದು ಎಂದರು
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನ, ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ಸದ್ಯ ಲಭ್ಯವಿರುವ ನೀರಿನ ಪ್ರಮಾಣ, ಹಾಗೂ ಅಗತ್ಯವಿರುವ ನೀರಿನ ಪ್ರಮಾಣ ಕುರಿತು ನಿಖರವಾಗಿ ಅಂಕಿ-ಅಂಶ ಸಂಗ್ರಹಿಸಿ, ಜಲ ಬಜೆಟ್ ರೂಪಿಸಲಾಗುವುದು. ನೀರನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡುವುದು ಹಾಗೂ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆ ತಯಾರಿಸಲಾಗುವುದು. ಜಿಲ್ಲೆಯ ಪ್ರತಿಯೊಂದು ಹಳ್ಳಿ, ಹಳ್ಳಿಗಳಿಂದಲೂ ಜನರಲ್ಲಿ ಜಾಗೃತಿ ಮೂಡಿಸಲಾ ಗುವುದು. ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದೆ.
ವಾಡಿಕೆಗಿಂತಲೂ ಅತ್ಯಂತ ಕಡಿಮೆ ಮಳೆಯಾದರೂ, ಜಲಸಂರಕ್ಷಣೆ, ಮಳೆ ನೀರು ಕೊಯ್ಲು ಹಾಗೂ ನೀರಿನ ಮಿತ ಬಳಕೆಯ ನಡುವೆಯೂ ಯಶಸ್ಸು ಕಂಡಿರುವ ಮಹಾರಾಷ್ಟ್ರ ರಾಜ್ಯದ ಕಡುವಂಚಿ ಪ್ರದೇಶವನ್ನು ನಾವು ಆದರ್ಶವಾಗಿ ತೆಗೆದುಕೊಳ್ಳಬೇಕಿದೆ. ಜಲಶಕ್ತಿ ಅಭಿಯಾನವನ್ನು ಜಿಲ್ಲೆಯಲ್ಲಿ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಸತ್ಯಭಾಮ ಅವರು ಮಾತನಾಡಿ, ಈ ಬಾರಿ ಜಲಾಮೃತ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಮೇಟಿಕುರ್ಕೆ ಕೆರೆಯನು 2.23 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಯೋಜನೆಯಡಿ ಹೂಳೆತ್ತಿಸಿದ್ದು, ಮಳೆಯಿಂದಾಗಿ ಮೇಟಿಕುರ್ಕೆ ಕೆರೆಯಲ್ಲಿ ಈ ಬಾರಿ ಹೆಚ್ಚಿನ ನೀರು ಸಂಗ್ರಹಣೆಯಾಗಿದೆ ಎಂದರು.
ಜಲಶಕ್ತಿ ಅಭಿಯಾನ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ಕೇಂದ್ರದ ಉಪ ಕಾರ್ಯದರ್ಶಿಗಳಾದ ಸುಪ್ರಿಯ ಸಹಾಯ್, ದಯಾ ಶಂಕರ್, ತಾಂತ್ರಿಕ ಸಲಹೆಗಾರರಾದ ಶಿವಕೃಷ್ಣನ್ ಹಾಗೂ ಹರೇಂದ್ರಸಿಂಗ್, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.