ಜ್ಞಾನಾರ್ಜನೆಯ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ : ಸಿ.ಎಂ.ಉದಾಸಿ

ಹಾನಗಲ್ಲ :

     ಜ್ಞಾನಾರ್ಜನೆಯ ಸಮಯವನ್ನು ಸದುಪಯೋಗ ಮಾಡಿಕೊಂಡು ಜೀವನ ನಡೆಸುವ ಛಲ ವಿದ್ಯಾರ್ಥಿಗಳಲ್ಲಿದ್ದರೆ ಮಾತ್ರ ಉದಾತ್ತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.

       ಸೋಮವಾರ ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಈಗ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯಗಳಿಗೆ. ಆದರೆ ವಿದ್ಯಾರ್ಥಿಗಳು ತಮ್ಮ ಓದಿಗಾಗಿ ಒಳ್ಳೆಯ ಅವಕಾಶಗಳನ್ನು ಆಯ್ದುಕೊಳ್ಳಬೇಕಾಗಿದೆ. ಯಾವುದೇ ಕೋರ್ಸಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ಮೊದಲು ಅದರಲ್ಲಿ ಪ್ರಾವಿಣ್ಯತೆ ಪಡೆಯುವ ಛಲ ಅತ್ಯಂತ ಮುಖ್ಯ. ಬದುಕಿನ ವಿಕಾಸಕ್ಕೆ ವಿವೇಕವೂ ಬೇಕು.

         ನಮ್ಮ ಸಾಧನೆಯೇ ನಮಗೆ ಉತ್ತಮ ಜೀವನ ನೀಡಬಲ್ಲದು. ವಿದ್ಯಾರ್ಥಿ ಜೀವನದ ಅವಧಿಯನ್ನು ಸದುಪಯೋಗ ಮಾಡಿಕೊಳ್ಳಿ. ಕಳೆದ ಕಾಲ ಮರಳಿ ಬಾರದು. ಪಠ್ಯದ ಅಧ್ಯಯನದೊಂದಿಗೆ ವೃತ್ತ ಪತ್ರಿಕೆಗಳನ್ನು ಓದುವ ಹವ್ಯಾಸವಿರಲಿ. ಜಗತ್ತಿನ ಆಗುಹೋಗುಗಳ ಜ್ಞಾನ ನಮಗೆ ಬೇಕೇ ಬೇಕು. ಪಡೆದ ಪದವಿಗಿಂತ ಕೆಲಸದ ಪ್ರಾವಿಣ್ಯತೆ ಹೆಚ್ಚು ಕೆಲಸ ಮಾಡಬಲ್ಲದು ಎಂದರು.

         ಅಧ್ಯಕ್ಷತೆವಹಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕ ಎಸ್.ಸಿ.ಪೀರಜಾದೆ, ಸ್ವಾಮಿ ವಿವೇಕಾನಂದರಾದಿ ಯಾಗಿ ಮಹಾತ್ಮರ ಸಂದೇಶಗಳು ನಮ್ಮ ನಡೆ ನುಡಿಯನ್ನು ತಿದ್ದಬಲ್ಲವು. ಮಾತಾ ಪಿತೃಗಳನ್ನು ಗೌರವಿಸುವ, ಹಿರಿಯರು ಗುರುಗಳ ಸಂದೇಶಗಳನ್ನು ಪಾಲಿಸುವ ಮನಸ್ಸು ಯುವಕರದ್ದಾಗಬೇಕು. ಉತ್ತಮ ಗುಣಗಳೇ ನಮ್ಮ ಆಸ್ತಿ ಎಂದ ಅವರು, ನಿಮ್ಮ ಅಂಕ ಪಟ್ಟಿಯ ಅಂಕಕ್ಕಿಂತ ನಿಮ್ಮ ಬದುಕಿನ ಗುಣಗಳಗೇ ನಿಜವಾದ ಅಂಕಗಳು ಎಂದರು.

         ಮುಖ್ಯ ಅತಿಥಿಯಾಗಿ ಮಾತನಾಡಿದ ಹಾವೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ರಮೇಶ ತೆವರಿ, ನಮ್ಮ ಕನ್ನಡ ನಾಡಿನ ಸಂಸ್ಕತಿಗೆ ಮೇರು ಸದೃಶ್ಯ ಶಕ್ತಿ ಇದೆ. ನಮ್ಮೊಳಗೆ ಸದ್ವಿಚಾರಗಳನ್ನು ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳುವ ಯತ್ನ ವಿದ್ಯಾರ್ಥಿಗಳಿಂದಾಗಬೇಕು. ನಾಡು ನುಡಿ ಸಂಸ್ಕತಿಯ ಅರಿವು ನಮಗೆ ಬೇಕು. ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ. ಅದನ್ನು ಮೀರಿದ ಜೀವನ ಪಾಠ. ಇಡೀ ಜಗತ್ತು ಈಗ ಸ್ಪರ್ಧಾತ್ಮಕ ಓಟದಲ್ಲಿದೆ. ಇದರಲ್ಲಿ ಗೆಲ್ಲಬಲ್ಲವನೇ ಎಲ್ಲವನ್ನೂ ಗೆಲ್ಲಬಲ್ಲ. ನಾಳೆಗಾಗಿ ಇಂದಿನ ದಿನವನ್ನು ಸಾರ್ಥಕಗೊಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳದ್ದಾಗಲಿ ಎಂದರು.

        ಪ್ರಾಚಾರ್ಯ ಪ್ರೊ.ಮಾರುತಿ ಶಿಡ್ಲಾಪೂರ ಪ್ರಾಸ್ತಾವಿ ಮಾತನಾಡಿದರು. ಕ್ರೀಡಾ ವಿಭಾಗದ ಮುಖ್ಯಸ್ಥ ಎಸ್.ಎಸ್.ನಿಸ್ಸೀಮಗೌಡರ, ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ಎಚ್.ಎಸ್.ಬಾರ್ಕಿ, ಪ್ರೊ.ಸುಮಂಗಲಾ ನಾಯನೇಗಿಲ, ಪ್ರೊ.ಸಿ.ಸಿ.ಪಾಟೀಲ, ಪ್ರೊ.ಎಸ್.ಬಿ.ಕಮಾಟಿ, ಪ್ರೊ.ವೀಣಾ ದೇವರಗುಡಿ, ಪ್ರೊ.ಮೂಕಂಬಿಕಾ ನಾಯಕ, ಪ್ರೊ.ಆಯಿಷಾ, ಪ್ರೊ.ಮರಡಿ, ಗಿರೇಶ ದೇಶಪಾಂಡೆ, ಕುಮಾರ ಹತ್ತಿಕಾಳ ವೇದಿಕೆಯಲ್ಲಿದ್ದರು.

        ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಶ್ವನಾಥ ನೀಲಪ್ಪನವರಿಗೆ ಆದರ್ಶ ವಿದ್ಯಾರ್ಥಿ, ಭಾನುಪ್ರಿಯಾ ಬುಡ್ಡನವರ ಅವರಿಗೆ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ನೀಡಲಾಯಿತು. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಅಕ್ಕಮ್ಮ ಮೂಶಣ್ಣನವರ, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶೃತಿ ನೆಗಳೂರ ಅವರಿಗೆ ಬಹುಮಾನಗಳನ್ನು ನೀಡಲಾಯಿತು. ಅತ್ಯುತ್ತಮ ವಿದ್ಯಾರ್ಥಿಗಳಾದ ಕಾವ್ಯಾ ಮಲಗುಂದ, ಹಾಲೇಶ ಇಂಗಳಗಿ, ಸಂತೋಷ ಬಳಿಗೇರ, ಬೀಬಿ ಆಯಿಷಾ ಹಸನಾಬಾದಿ, ದೇವರಾಜ ಅಡವಿ, ವಿದ್ಯಾ ಹಳ್ಳಕ್ಕನವರ ಅವರಿಗೆ ಬಹುಮಾನಗಳನ್ನು ನೀಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link