ತುಮಕೂರು
ಪ್ರಧಾನಿ ಮೋದಿ ನೇತೃತ್ವದ ಎನ್‍ಡಿಎ ಸರಕಾರ ಎರಡನೇ ಅವಧಿಗೆ ಅಧಿಕಾರ ಹಿಡಿದ ಮೇಲೂ ಬೇರೆ ಪಕ್ಷಗಳನ್ನು ಟೀಕಿಸುವುದು ಬಿಟ್ಟು ಈ ಹಿಂದೆ ನೀಡಿದ ವಾಗ್ದಾನದಂತೆ ರೈತರು ಮಾಡಿದ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡಬೇಕು ಎಂದು ಕರ್ನಾಕಟಕ ಪ್ರಾಂತ ರೈತ ಸಂಘದ ಸಹಸಂಚಾಲಕ ಬಿ.ಉಮೇಶ್ ಒತ್ತಾಯಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘ, ಬಗರ್‍ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿದ್ದ ಬರಪರಿಹಾರ ಮತ್ತು ಬಗರ್‍ಹುಕುಂ ಸಾಗುವಳಿ ಭೂಮಿಯ ಸಮಸ್ಯೆಗಳ ಇತ್ಯರ್ಥಕ್ಕಾಗಿ ರೈತರು ಮತ್ತು ಕೃಷಿ ಕೂಲಿಕಾರರ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಇದಕ್ಕೂ ಮೊದಲು ರೈತರು ಪೂರ್ವಭಾವಿಯಾಗಿ ಹೋರಾಟ ಮಾಡಿ ಮನವಿ ಸಲ್ಲಿಸಿದ್ದು ಆ ಮನವಿಗಳನ್ನು ಪರಿಶೀಲಿಸಿ ಗ್ರಾಮ ವಾಸ್ತವ್ಯ ಮಾಡುವ ಸಂದರ್ಭದಲ್ಲಿ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು. ಅದು ಬಿಟ್ಟು ಕೇವಲ ಪ್ರಚಾರಕ್ಕೆ ಗ್ರಾಮ ವಾಸ್ತವ್ಯ ಮಾಡಬಾರದು ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಉಜ್ಜಪ್ಪ ಮಾತನಾಡಿ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಬರಗಾಲ ಮುಂದುವರಿದಿದೆ. ಹೀಗಾಗಿ ಜನರಿಗೆ ಕುಡಿಯುವ ನೀರು, ದನಕರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಬೇಕು. ಅವೈಜ್ಞಾನಿಕ ಮೇವು ಬ್ಯಾಂಕ್ ಬದಲಿಗೆ ಹಾಲು ಡೈರಿಗಳ ಮೂಲಕ ರೈತರಿಗೆ ಮೇವು ಸಿಗಬೇಕು ಹಾಗೂ ಕೂಡಲೇ 1 ಲೀಟರ್ ಹಾಲಿನ ದರ 10 ರೂ ಹೆಚ್ಚಳ ಮಾಡಿ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಬಗರ್‍ಹುಕುಂ ಸಾಗುವಳಿದಾರರು ಹಾಲಿ ನಮೂನೆ 57ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಕೆಲವು ದಾಖಲೆಗಳನ್ನು ಕೇಳುವ ಮೂಲಕ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಅರ್ಜಿ ಹಾಕುವುದನ್ನು ತಪ್ಪಿಸಿದೆ. ಸಾಗುವಳಿದಾರರು ನೀಡುವ ಅರ್ಜಿಗಳನ್ನು ಸ್ವೀಕರಿಸಿ ಸ್ವೀಕೃತಿ ನೀಡಬೇಕು.
ಹಿಂದೆ ಸಲ್ಲಿಸಿದ್ದ ನಮೂನೆ 53 ಮತ್ತು 52 ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ತಾಲ್ಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಬಗರ್‍ಹುಕುಂ ಸಾಗುವಳಿ ಸಮಿತಿಯನ್ನು ರಚಿಸಿ ಸಾಗುವಳಿ ಚೀಟಿ ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯಬೇಕು. ಹೊಸದಾಗಿ ಸಲ್ಲಿಸಿರುವ ಅರ್ಜಿಗಳು ಮತ್ತು ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗುಬ್ಬಿಯ ದೊಡ್ಡನಂಜಯ್ಯ, ಶಿರಾದ ಬಾದಪ್ಪ ಮತ್ತು ಚಿಕ್ಕತಾಯಮ್ಮ, ತುಮಕೂರಿನ ಮಂಜುನಾಥ್ ಮತ್ತು ರಂಗಧಾಮಯ್ಯ, ಚಿ.ನಾ.ಹಳ್ಳಿಯ ಶಿವಣ್ಣ ಮೊದಲಾದ ಮುಖಂಡರು ಭಾಗವಹಿಸಿದ್ದರು.