ಬಳ್ಳಾರಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗಿತ್ವದಲ್ಲಿ ರಾಜ್ಯದಲ್ಲಿ ಜಾರಿಗೆ ಬಂದಿರುವ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಆಯುಷ್ಮಾನ್ ಭಾರತ ಯೋಜನೆಯ ಜಿಲ್ಲಾ ಸಂಯೋಜಕ ಹೊನ್ನುರುಸಾಬ್ ಅವರು ಕರೆ ನೀಡಿದರು.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಪಂ, ತಾಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕೋಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರರಂದು ಕೋಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಒಂದು ಕುಟುಂಬದ ವರ್ಷಕ್ಕೆ 5 ಲಕ್ಷ ರೂ.ವರೆಗೆ ನೊಂದಾಯಿತ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಹಾಗೂ ಎ.ಪಿ.ಲ್ ಕಾರ್ಡ್ ಹೊಂದಿದವರು 1 ಲಕ್ಷ 50 ಸಾವಿರ ರೂ. ವರೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್.ಟಿ ಅವರು ಮಾತನಾಡಿ ಕ್ಷಯರೋಗ, ಮಲೇರಿಯಾ, ಕುಷ್ಠರೊಗದ ತೀವ್ರತೆ ಮಾನಸಿಕ ರೋಗ, ಡೆಂಗ್ಯೂ, ಚಿಕನ್ ಗುನ್ಯಾ ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಕಾರ್ಯಕ್ರಮವನ್ನು ಕೋಳೂರು ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಅವರು ಉದ್ಘಾಟಿಸಿದರು.
ಕ್ಷೇತ್ರ ಜನ ಸಂಪರ್ಕ ಕಾರ್ಯಲಯದ ಉಪನಿರ್ದೇಶಕರು ಜೆ.ಡಿ.ಹಳ್ಳಿಕೇರಿ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ರಾಮಕೃಷ್ಣ ಅವರು ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಕೋಳೂರಿನ ವೈದ್ಯಾಧಿಕಾರಿ ಡಾ.ಮಹಮ್ಮದ್ ನಿಜಾಮುದ್ದೀನ್, ಗ್ರಾಪಂ ಸದಸ್ಯರಾದ ರಾಮಚಂದ್ರಪ್ಪ, ನಾಗಪ್ಪ ಶರೀ ಹನುಮಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗೋವಿಂದಪ್ಪ, ಶಿಶು ಅಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಅರುಣಾ ಪವಾರ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಈ ಜಾಥಾದಲ್ಲಿ ಜಾನಪದ ಕಲಾವಿದರಿಂದ ಕೋಳೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಯೋಜನೆಯ ಕುರಿತು ಜಾಗೃತಿ ಮೂಡಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
