ವಿಜ್ಞಾನಕ್ಕೆ ಸವಾಲು ಎಸೆದಿರುವ ವಚನ ಸಾಹಿತ್ಯ

ದಾವಣಗೆರೆ:

        ವಚನ ಸಾಹಿತ್ಯ ವಿಜ್ಞಾನ ಕ್ಷೇತ್ರಕ್ಕೆ ಸವಾಲು ಎಸೆದಿದ್ದು, ವಚನ ಸಾಹಿತ್ಯದ ಸವಾಲನ್ನು ಎದುರಿಸಲು ವಿಜ್ಞಾನ ಕ್ಷೇತ್ರಕ್ಕೆ ಇನ್ನೂ ಆಗಿಲ್ಲ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಕೆ.ಬಸವರಾಜ್ ತಿಳಿಸಿದರು.

         ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ನಗರದ ಅಶೋಕ ರಸ್ತೆಯಲ್ಲಿರುವ ಟಿ.ಎಂ.ಚಿನ್ನಮ್ಮ ಮಹೇಶ್ವರಯ್ಯ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಹಾಗೂ ಮಹಿಳಾ ಸೇವಾ ಸಮಾಜ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಹಾಗೂ ವಚನ ಕಮ್ಮಟದಲ್ಲಿ ವಚನ ಸಾಹಿತ್ಯ ಮತ್ತು ಸಮಕಾಲೀನತೆ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

         ಎಲ್ಲಾ ಸಮಯಕ್ಕೂ ಉತ್ತಮ ಸಂದೇಶ ನೀಡುವ ವಚನ ಸಾಹಿತ್ಯವು ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ವಚನ ಸಾಹಿತ್ಯವು ವಿಜ್ಞಾನ ಕ್ಷೇತ್ರಕ್ಕೆ ಸವಾಲು ಹಾಕಿದ್ದು, ವಿಜ್ಞಾನ ಕ್ಷೇತ್ರ ವಚನ ಸಾಹಿತ್ಯದ ಸವಾಲನ್ನು ಇನ್ನೂ ಎದುರಿಸಲಾಗಿಲ್ಲ. ಏಕೆಂದರೆ, ವಚನ ಸಾಹಿತ್ಯ ಅಷ್ಟರ ಮಟ್ಟಿಗೆ ಕಠಿಣವಾಗಿದೆ ಎಂದರು.

        ವಚನ ಸಾಹಿತ್ಯ ಎಂದಾಕ್ಷಣ, ಎಲ್ಲರನ್ನೂ ಅನುಭವ ಮಂಟಪದಲ್ಲಿ ಕಲೆ ಹಾಕಿದ್ದ 12ನೇ ಶತಮಾನದ ಬಸವಣ್ಣನವರು ನೆನಪಾಗುತ್ತಾರೆ. ಅನಕ್ಷರಸ್ಥರು, ಜನಪದರು, ತಮ್ಮ ಆಡುಭಾಷೆಯ ಮೂಲಕ ವಚನ ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ. ಆಡುವ ಮಾತುಗಳು ವಚನವಾಗಿದ್ದು, ಬರವಣಿಗೆಯ ರೂಪದಲ್ಲಿ ದೊರೆತಿರುವುದು ಸಾಹಿತ್ಯವಾಗಿದೆ. ಹೀಗಾಗಿ ವಚನ ಸಾಹಿತ್ಯವು ಯಾವುದೇ ಒಂದು ವರ್ಗ, ಜಾತಿಗೆ ಸೀಮಿತವಾಗಿಲ್ಲ. ಆದರೆ, ವಚನ ಸಾಹಿತ್ಯಕ್ಕೆ ಕೇವಲ ಒಂದು ಚೌಕಟ್ಟಿಗೆ ಸೀಮಿತ ಮಾಡುತ್ತಿರುವುದು ಸರಿಯಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

       ಪ್ರಸ್ತುತ ವಿದ್ಯಾರ್ಥಿಗಳು ವಚನ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡದೆ, ಕೇವಲ ಮೊಬೈಲ್, ವಾಟ್ಸಪ್, ಫೇಸ್‍ಬುಕ್‍ನಂಥಹ ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಹಳೆಯ ವಚನ ಸಾಹಿತ್ಯವನ್ನು ಏಕೆ ಓದಬೇಕೆಂಬ ತಾತ್ಸಾರದ ಮನೋಭಾವವೇ ಒದಕ್ಕೆ ಕಾರಣವಾಗಿದೆ. ಇಂಥಹ ಮನಸ್ಥಿತಿಯಿಂದ ಹೊರ ಬಂದು ವಿದ್ಯಾರ್ಥಿಗಳು ವಚನ ಸಾಹಿತ್ಯ ಅಧ್ಯಯನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

      ಗ್ರಾಮಾಂತರ ಡಿವೈಎಸ್ ಪಿ. ಮಂಜುನಾಥ್ ಕೆ ಗಂಗಲ್ ಮಾತನಾಡಿ, ವಚನ ಸಾಹಿತ್ಯದ ಬಗ್ಗೆ ಪ್ರತಿಯೊಬ್ಬರು ಅಧ್ಯಯನ ಮಾಡುವುದು ಅತ್ಯವಶ್ಯವಾಗಿದೆ. ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ, ಅದರಲ್ಲಿರುವ ಪ್ರಮುಖ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಹೇಳಿದರು.

     ಕೇವಲ ಪದವಿಗಾಗಿ ವ್ಯಾಸಂಗ ಮಾಡಿದರೆ ಏನೂ ಸಾಧನೆ ಮಾಡಲಾಗದು. ಶಿಕ್ಷಣದ ಜೊತೆ, ಜೊತೆಗೆ ತಮ್ಮ ಕೈಲಾಗುವ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿ, ಅಸಹಾಯಕರಿಗೆ, ಅವಿದ್ಯಾವಂತರಿಗೆ ಬೆಳಕು ಆದಾಗ ಮಾತ್ರ ನಿಜವಾದ ಸಾಧನೆ ಮಾಡಿದಂತಾಗಲಿದೆ. ಹೀಗಾಗಿ ಸಹಾಯ ಮಾಡಲು ಸಿಗುವ ಸಣ್ಣ ಅವಕಾಶಗಳನ್ನು ಬಳಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ನಿಮ್ಮಿಂದ ಸಹಾಯ ಪಡೆದವರು ನಿಮ್ಮನ್ನು ಹರಸಿ, ಹಾರೈಸುತ್ತಾರೆ. ಅಂತಹ ಹಾರೈಕೆಗಳು ಜೀವನಕ್ಕೆ ಶ್ರೀರಕ್ಷೆಯಾಗಲಿವೆ ಎಂದರು.

      ಪ್ರಶಸ್ತಿಗಳನ್ನು ನೀವಾಗಿ ಹುಡುಕಿಕೊಂಡು ಹೋಗಬೇಡಿ. ಬದಲಿಗೆ ನಾವು ಮಾಡುವ ಸತ್ಕಾರ್ಯಗಳಿಂದ ಪ್ರಶಸ್ತಿ, ಗೌರವಗಳೇ ನಮ್ಮನ್ನು ಹುಡುಕಿಕೊಂಡು ಬರುವಂತಾಗಬೇಕು. ಆಗ ಆ ಪ್ರಶಸ್ತಿಗೂ ಒಂದು ಮೌಲ್ಯ ದೊರೆಯಲಿದೆ. ಬುದ್ದಿವಂತರಾದರು ಸಹ ಕಠಿಣ ಪರಿಶ್ರಮವಿದ್ದಾಗ ಮಾತ್ರ ಮುಂದೆ ಬರಲು ಸಾಧ್ಯವಾಗಲಿದೆ. ಪ್ರಾಮಾಣಿಕೆಯ ಜೊತೆಗೆ ಬುದ್ದಿ ಬಳಸಿಕೊಂಡು ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

      ಹಿಂದೆ ಶಾಲೆಗಳು ಉತ್ತಮವಾಗಿರಲಿಲ್ಲ ಹಾಗೂ ಸೌಲಭ್ಯಗಳಿರಲಿಲ್ಲ. ಹೀಗಾಗಿ ಶೈಕ್ಷಣಿಕ ಪ್ರಗತಿ ಕುಂಠಿತವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಸೌಲಭ್ಯ ದೊರೆಯುತ್ತಿವೆ. ಈ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

        ಶರಣರ ಚಳುವಳಿಗಳ ವಿಶ್ಲೇಷಣೆ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ದೊಡ್ಡಗೌಡರ ಉಪನ್ಯಾಸ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಪುಟ್ಟಮ್ಮ ಮಹಾರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಪ್ರಾಸ್ತಾವನೆ ಮಂಡಿಸಿದರು. ವೇದಿಕೆಯಲ್ಲಿ ಭಾರತಿ, ಜಯಮ್ಮ ನೀಲಗುಂದ ಮತ್ತಿತರರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link