ಶರಣರ ಬರೆದಿಟ್ಟ ವಚನ ಸಾಹಿತ್ಯವೇ ಸಮಕಾಲೀನ ಸತ್ಯ: ತಾಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ

ಬ್ಯಾಡಗಿ

       ಶರಣರ ವಚನ ಸಾಹಿತ್ಯವೇ ನಿಜವಾದ ಸಂವಿಧಾನ ಹಾಗೂ ಸಮಕಾಲೀನ ಸತ್ಯ, ಅವರ ವಚನಗಳಲ್ಲಿ ಪ್ರಶ್ನಸಿದಂತಹ ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆ ಅಂಶಗಳು ಪ್ರಸ್ತುತ ದಿನಗಳಲ್ಲಿ ವಂಚಿತರಾಗಿರುವುದು ವಿಪರ್ಯಾಸದ ಸಂಗತಿ ಎಂದು ತಾಲೂಕು ಪಂಚಾಯತ ಅಧ್ಯಕ್ಷೆ ಸವಿತಾ ರಮೇಶ ಸುತ್ತಕೋಟಿ ಖೇದ ವ್ಯಕ್ತಪಡಿಸಿದರು.

        ತಾಲೂಕಾಡಳಿತ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗಂಗಾಮತ ಸಮಾಜ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡ ಯ್ಯ ಜಯಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಚನ ಸಾಹಿತ್ಯವನ್ನು ಒಪ್ಪಿಕೊಳ್ಳದೇ ಹೋದರೇ ಸಾಮಾಜಿಕ ನ್ಯಾಯಕ್ಕೆ ಖಂಡಿತ ಧಕ್ಕೆಯಾಗಲಿದೆ, ಮಹಾ ಪುರುಷರ ಜಯಂತಿ ಆಚರಿಸುವುದು ಸಮಾಜಗಳನ್ನು ತೃಪ್ತಿಪಡಿಸುವುದಕ್ಕಲ್ಲ, ಮಹಾತ್ಮರ ಹಾಗೂ ದಾರ್ಶನಿಕರ ನಡೆಸಿದ ಆದರ್ಶ ಜೀವನ ಹಾಗೂ ಬದುಕಿನ ಅನುಭವಗಳು, ಮುಂದಿನ ಪೀಳಿಗೆಗೂ ತಲುಪಿಸುವ ಉದ್ದೇಶದಿಂದ ಆಚರಿಸಲಾಗುತ್ತಿದೆ ಎಂದರು.

        ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಟುವಾದ ಟೀಕೆಗಳನ್ನು ಕಾಣಬಹುದಾಗಿದೆ, ‘ಕೇಳಿರಯ್ಯ ಮಾನವರೇ ಶೀಲದಲ್ಲಿ ಸಂಪನ್ನರೇ ಕೇಳಿರೋ ನನಗೊಬ್ಬರೆಂಜಲು ಸೇರದೆಂದು ಶುಚಿತನದಲ್ಲಿ ಬದುಕುವ ಬರೀ ಮಾತಿನ ಭುಂಜಕರೇ ಕೇಳಿರೋ, ಪರಪುರುಷಾರ್ಥವನರಿಯದೇ ಕೆಟ್ಟ ನರಕುರಿಗಳು ನೀವು ಕಾಣಿರೋ’ ಎಂದು ಹೇಳುವ ಮೂಲಕ ಪೌರೋಹಿತ್ಯ ವರ್ಗದ ದಬ್ಬಾಳಿಕೆ ಮತ್ತು ಸಮಾಜದಲ್ಲಿ ಜೀವಂತವಾಗಿದ್ದ ಮೌಢ್ಯಗಳನ್ನು ಟೀಕಿಸಿದ ಪರಿ ಕಾಣುತ್ತಿದೆ ಎಂದರು.

        ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಮಹಾಶರಣರನ್ನು ಯಾವುದೇ ಸಮಾಜಕ್ಕೆ ಸೀಮಿತಗೊಳಿಸಿ ಅವರ ವ್ಯಕ್ತಿತ್ವಕ್ಕೆ ದಕ್ಕೆ ಬಾರದಂತೆ ಸಮಾಜ ನಡೆದುಕೊಳ್ಳ ಬೇಕಿದೆ, 12ನೇ ಶತಮಾನದಿಂದ ನಿಜಶರಣ ಅಂಬಿಗರ ಚೌಡಯ್ಯ ಸೇರಿದಂತೆ ನಾಡಿನ ಅನೇಕ ಸಂತರು ಶರಣರು ಸಾಮಾಜಿಕ ಮೌಡ್ಯಗಳನ್ನು ಅಳಿಸಿ, ನ್ಯೂನ್ಯತೆಗಳನ್ನು ತಿದ್ದಿತೀಡಲು ಸಮಾಜಕ್ಕೆ ತಮ್ಮ ವಚನಗಳ ಮೂಲಕ ಸಾಕಷ್ಟು ಸೇವೆಯನ್ನು ಅರ್ಪಿಸಿದ್ದಾರೆ. ಸಾಕಷ್ಟು ಜನರ ಜೀವನಕ್ಕೆ ಇಂತಹ ವಚನಗಳು ಆದರ್ಶವಾಗಿದ್ದು, ಅದರ ತತ್ವಸಿದ್ದಾಂತ ಹಾಗೂ ಸಂದೇಶಗಳು ಬದುಕಿಗೆ ಅಗತ್ಯವಾಗಿದೆ, ಪ್ರತಿಯೊಬ್ಬರ ಮನೆಮನೆಗಳಲ್ಲಿ ವಚನ ಸಾಹಿತ್ಯವನ್ನು ಓದುವಂತಹ ಕೆಲಸವಾಗಬೇಕಾಗಿದೆ ಎಂದರು.

          ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಪುರಸಭೆ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ ಪಾಟೀಲ, ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ, ತಾಲೂಕು ಅಧ್ಯಕ್ಷ ಜಿತೇಂದ್ರ ಸುಣಗಾರ, ಸಂಚಾಲಕ ಚಂದ್ರು ಮುಳಗುಂದ, ಮುಖಂಡರಾದ ಮಲ್ಲಿಕಾರ್ಜುನ ಕರಲಿಂಗಪ್ಪನವರ, ರವೀಂದ್ರ ಪಟ್ಟಣಶೆಟ್ಟಿ, ಸಮಾಜದ ಮುಖಂಡರಾದ ಚಂದ್ರಪ್ಪ ದೊಡ್ಡಮನಿ, ನಿಂಗಪ್ಪ ಹೆಗ್ಗಣ್ಣನವರ, ಚಂದ್ರಪ್ಪ ಬಾರ್ಕಿ, ಶೇಖಪ್ಪ ಬಾರ್ಕಿ, ಮಂಜಪ್ಪ ಬಾರ್ಕಿ, ಜಯಪ್ಪ ಸುಣಗಾರ, ಶಿವರಾಯಪ್ಪ ಹೂಳ್ಳೇರ, ಗುತ್ತೆಪ್ಪ ಬಾರ್ಕಿ, ಮಲ್ಲಪ್ಪ ಸಣ್ಣಬಾರ್ಕಿ, ನಾಗಪ್ಪ ಜಾಡರ, ಯಲ್ಲಪ್ಪ ಓಲೇಕಾರ, ಸಂಜೀವಪ್ಪ ಹೂಲಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಪಟ್ಟಣದೆಲ್ಲೆಡೆ ಮೆರವಣಿಗೆ ನಡೆಸುವ ಮೂಲಕ ವೀರಭದ್ರೇಶ್ವರ ಕಲ್ಯಾಣ ಮಂಟಪಕ್ಕೆ ಕರೆ ತರಲಾಯಿತು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link