ಚಿತ್ರದುರ್ಗ
ಸರ್ಕಾರದ ವಿವಿಧ ಸವಲತ್ತುಗಳನ್ನು ಅರ್ಹ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಒದಗಿಸುವ ನಿಟ್ಟಿನಲ್ಲಿ ವಕೀಲರ ಸಹಕಾರ ಪಡೆಯುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಸಲಹೆ ನೀಡಿದರು.
ಬುಧವಾರ ವಕೀಲರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತಿತರ ಸಂಘ-ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರಿಗೆ ಹಾಗೂ ಇತರೆ ಕಟ್ಟಡ ಕಾರ್ಮಿಕರಿಗೆ ಸವಲತ್ತುಗಳು ವಿಭಿನ್ನವಾಗಿವೆ. ಇತರೆ 144 ವರ್ಗದ ಕಾರ್ಮಿಕರಿಗೆ 60 ವರ್ಷವಾದ ಬಳಿಕ 3000 ಪಿಂಚಣಿ ದೊರೆಯಲಿದೆ. ಇದಕ್ಕಾಗಿ ಅವರು 100 ರೂ.ಪಾವತಿಸಿ, ಇಲಾಖೆಯಲ್ಲಿ ಹೆಸರು ನೋಂದಾಯಿಸಿ ಕಾರ್ಡ್ ಮಾಡಿಸಿಕೊಳ್ಳಬೇಕು. ಅರ್ಹರಿಗೆ ಕಾರ್ಡ್ ವಿತರಿಸಿ, ಸಿಬ್ಬಂದಿ ಕೊರತೆ ಸಬೂಬು ಹೇಳಬೇಡಿ. ಅರ್ಹರಿಗೆ ಕಾರ್ಡ್ ಒದಗಿಸಲು ಅಗತ್ಯ ಸಮೀಕ್ಷೆಗೆ ವಕೀಲರು ತಮ್ಮೊಂದಿಗೆ ಸಹಕರಿಸಲು ಸಿದ್ಧರಿದ್ದಾರೆಂದ ಅವರು, ಎಲ್ಲ ಕಾರ್ಮಿಕರಿಗೆ ದೊರೆಯುವಂಥ ಸವಲತ್ತುಗಳ ಕುರಿತು ಜಾಗೃತಿ ಮೂಡಿಸಬೇಕು. ಕಾರ್ಮಿಕ ದಿನ ಆಚರಿಸಿ, ಕೈ ತೊಳೆದುಕೊಳ್ಳ ಬೇಡಿ ಎಂದು ಕಾರ್ಮಿಕ ಇಲಾಖೆ ಹೊಣೆಗಾಗರಿಕೆಯನ್ನು ಪ್ರಧಾನ ನ್ಯಾಯಾಧೀಶರು ನೆನಪಿಸಿದರು.
ರಸ್ತೆ ಸುರಕ್ಷತೆ ಕುರಿತಂತೆ ಉಪನ್ಯಾಸ ನೀಡಿದ ಆರ್‍ಟಿಒ ಇನ್ಸ್‍ಫೆಕ್ಟರ್ ಮಹಾಂತೇಶ್, ಭಾರತದಲ್ಲಿ ಎಲ್ಲರೂ ಚಾಲಕರೇ, ಆದರೆ ಯಾರೊಬ್ಬರಿಗೆ ಸುರಕ್ಷತೆ ಚಾಲನೆ ಅರಿವಿಲ್ಲ. ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರಿಗೆ ಅವಕಾಶ ಕೊಡಬಾರದು. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಕಾರ್ಮಿಕ ಇಲಾಖೆ ಅಧಿಕಾರಿ ಡಿ.ರಾಜಣ್ಣ ಮತ್ತಿತರರು ಮಾತನಾಡಿದರು. ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ, ಡಿ.ವೀರಣ್ಣ,ಶಿವಣ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ವಿಜಯ ಕುಮಾರ್ ಮೊದಲಾದವರು ಇದ್ದರು.