ಹೆಚ್ಚಿನ ಮೀಸಲಾತಿ ನೀಡಲು ವಾಲ್ಮೀಕಿ ಜಾತ್ರೆ : ಸತೀಶ್‍ ಜಾರಕಿಹೊಳಿ.

ಬೆಂಗಳೂರು

      ರಾಜ್ಯದಲ್ಲಿ ಇತ್ತೀಚಿಗೆ ನಾಯಕ ಸಮುದಾಯದ ಕೆಲವು ಮುಖಂಡರು ನಡೆಸಿದ ಔಪಚಾರಿಕ ಸಮೀಕ್ಷೆಯಲ್ಲಿ ಸುಮಾರು ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಾಯಕ ಸಮುದಾಯ ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಪಡೆಯಲು ಸರ್ಕಾರದ ಮೇಲೆ ಸ್ವಾಮೀಜಿಯವರ ನೇತೃತ್ವದಲ್ಲಿ ಒತ್ತಡ ಹೇರಲಿದೆ ಎಂದು ಮಾಜಿ ಸಚಿವ, ಯಮಕನ ಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ಧಾರೆ.

      ಅವರು, ಗುರುವಾರ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ನಂತರ ಇಲ್ಲಿನ ಪ್ರವಾಸಿ ಮಂದಿರ ಬಳಿ ಸ್ಥಳೀಯ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ, ಈಗಾಗಲೇ ಕಳೆದ ವರ್ಷ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸುವ ಕುರಿತು ಭರವಸೆ ನೀಡಿದ್ದರು. ಆದರೆ, ಭರವಸೆಯ ಮುನ್ನವೇ ಅಂದಿನ ಸರ್ಕಾರ ರಾಜಕೀಯ ಕಾರಣಾಂತರದಿಂದ ಪತನಗೊಂಡಿತು.

    ಪ್ರಸ್ತ್ತುತ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರವಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ನಮ್ಮ ಸಮುದಾಯದ ಹಿರಿಯ ನಾಯಕರಾದ ಬಿ.ಶ್ರೀರಾಮುಲು ನೇತೃತ್ವ, ಸ್ವಾಮೀಜಿ ಸಮಾಕ್ಷಮದಲ್ಲಿ ರಾಜ್ಯದ ಎಲ್ಲಾ ವಾಲ್ಮೀಕಿ ಸಮಾಜದ ಶಾಸಕರು ಕಳೆದ ಡಿಸೆಂಬರ್ ಮಾಹೆಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದು, ರಾಜ್ಯದ ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಬೇಕೆಂಬ ಒತ್ತಾಯವನ್ನು ಮತ್ತೊಮ್ಮೆ ಸರ್ಕಾರದ ಮೇಲೆ ಮಾಡಲಾಗುವುದು.

    ಈ ಹಿನ್ನೆಲೆಯಲ್ಲಿ ಫೆ.8 ಮತ್ತು 9 ಎರಡು ದಿನಗಳ ಕಾಲ ರಾಜನಹಳ್ಳಿಯ ಶ್ರೀವಾಲ್ಮೀಕಿ ಗುರುಪೀಠದಲ್ಲಿ ಶ್ರೀವಾಲ್ಮೀಕಿ ಜಾತ್ರೆ ನಡೆಯಲಿದ್ದು, ಈ ಜಾತ್ರೆಯಲ್ಲಿ ಮತ್ತೊಮ್ಮೆ ಇಡೀ ಸಮುದಾಯ ಮೀಸಲಾತಿ ಕುರಿತಂತೆ ಚರ್ಚಿಸಿ ಸರ್ಕಾರ ಮೇಲೆ ಹೆಚ್ಚಿನ ಒತ್ತಡ ತರಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಜಾತ್ರೆ ಕಾರ್ಯಕ್ರಮಕ್ಕೆ ಚಳ್ಳಕೆರೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಲ್ಮೀಕಿ ಸಮುದಾಯದ ಬಂಧುಗಳು ಭಾಗವಹಿಸಬೇಕಿದೆ.

    ಕೇವಲ ರಾಜಕೀಯ ಶಕ್ತಿಗಳಿಂದ ಮೀಸಲಾತಿ ಹೆಚ್ಚಳ ಸಾಧ್ಯವಾಗದು. ಬದಲಾಗಿ ಇಡೀ ಸಮುದಾಯವೇ ಒಕ್ಕೊರಳಿನಿಂದ ಸರ್ಕಾರದ ಮೇಲೆ ಪ್ರಭಾವ ಬೀರಿ ಒತ್ತಡ ಹೇರಿ ಮೀಸಲಾತಿ ಪಡೆಯಬೇಕು. ರಾಜ್ಯದ ವಾಲ್ಮೀಕಿ ಸಮುದಾಯದ ಸರ್ವತೋಮುಖ ಬೆಳವಣಿಗೆ ಸಮುದಾಯದ ಯುವ ಜನಾಂಗಕ್ಕೆ ಉದ್ಯೋಗ ಮೀಸಲಾತಿ, ಮಹಿಳಾ ಸಮುದಾಯಕ್ಕೂ ಸಹ ಅನೇಕ ಸೌಲಭ್ಯಗಳ ಅವಶ್ಯಕತೆ ಇದ್ದು, ಇಲ್ಲಿನ ವಾಲ್ಮೀಕಿ ಸಮುದಾಯದ ಎಲ್ಲಾ ಬಂಧುಗಳು ವಾಲ್ಮೀಕಿ ಜಾತ್ರೆಗೆ ಆಗಮಿಸುವಂತೆ ಅವರು ಮನವಿ ಮಾಡಿದರು.

    ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಲೋಕೇಶ್‍ನಾಯಕ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ನಗರಸಭಾ ಸದಸ್ಯರಾದ ರಮೇಶ್‍ಗೌಡ, ಕೆ.ಪಿ.ಭೂತಯ್ಯ, ಎಲ್‍ಐಸಿ ಅಧಿಕಾರಿ ಬಿ.ತಿಪ್ಪೇಸ್ವಾಮಿ, ಸೌಭಾಗ್ಯ ಮುಂತಾದವರು ಉಪಸ್ಥಿತರಿದ್ದರು. .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap