ವಿ.ವಿ.ಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಒತ್ತು : ಜಿ.ಬಿ.ಜ್ಯೋತಿ ಗಣೇಶ್

ತುಮಕೂರು
   ತುಮಕೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನ ನಡೆಸಲಾಗುವುದೆಂದು ಶಾಸಕ ಜಿ.ಬಿ. ಜ್ಯೋತಿ ಗಣೇಶ್ ತಿಳಿಸಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಬಾಲಭವನದಲ್ಲಿಂದು ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಾಲ್ಮೀಕಿ ರಚಿಸಿರುವ ದೇಶದ ಮಹಾಕಾವ್ಯಗಳಲ್ಲೊಂದಾದ ರಾಮಾಯಣ ಕೃತಿಗೆ 7000 ವರ್ಷಗಳ ಇತಿಹಾಸವಿದೆ.  ವಾಲ್ಮೀಕಿ ಹಾಗೂ ಇವರ ರಾಮಾಯಣ ಕೃತಿಯ ಬಗ್ಗೆ ಇತಿಹಾಸಕಾರರು ಇನ್ನೂ ಅಧ್ಯಯನಗಳನ್ನು ನಡೆಸಬೇಕು.  
    ಅವರು ನಡೆದ ಬಂದ ದಾರಿ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರದು.  ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರಲ್ಲದೆ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಹೋರಾಡಿದ ಮಹನೀಯರ ಹಾಗೂ ಸಮುದಾಯದ ಬಗ್ಗೆ ಉಲ್ಲೇಖವಿರುವ ಜಿಲ್ಲೆಯಲ್ಲಿರುವ   ಶಿಲಾನ್ಯಾಸ, ಸ್ಥಳ, ಐತಿಹ್ಯಗಳನ್ನು ಕ್ರೋಢೀಕರಿಸಿ ಪುಸ್ತಕದ ರೂಪದಲ್ಲಿ ಹೊರತರಲಾಗುವುದೆಂದು ತಿಳಿಸಿದರು.
    ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು   ಯುಪಿಎಸ್‍ಸಿ ಹಾಗೂ ಕೆಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದು,   ವಿದ್ಯಾರ್ಥಿಗಳು  ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. 
    ಅಧ್ಯಕ್ಷತೆವಹಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು   ಆದಿಕವಿ, ಮಾನವತಾವಾದಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ಪ್ರಪಂಚಕ್ಕೆ ಪ್ರಪ್ರಥಮವಾಗಿ ಭಾರತದ ಸಂಸ್ಕøತಿಯನ್ನು ಪರಿಚಯಿಸಿದ ಮಹಾ ದಾರ್ಶನಿಕರಾಗಿದ್ದರು.  ವಾಲ್ಮೀಕಿ ಮಹರ್ಷಿಯು   ಎಲ್ಲಾ ಸಮುದಾಯದಕ್ಕೂ ಸೇರಿದ ಆದರ್ಶ ವ್ಯಕಿಯಾಗಿದ್ದರು.  ಮಹರ್ಷಿ ವಾಲ್ಮೀಕಿಯು ಹುಟ್ಟು ಸನ್ಯಾಸಿಯಲ್ಲ.  
     ತನ್ನ ಸಂಸಾರ ಪೋಷಣೆಗಾಗಿ ಸಮಾಜದ ವಿರೋಧಿಯಾಗಿದ್ದ ವಾಲ್ಮೀಕಿಯು ನಾರದ ಮಹರ್ಷಿಗಳ ಆಶೀರ್ವಾದದಿಂದ ಅರಿವಿನ ದಾರಿ ಪಡೆದು ಸನ್ಯಾಸಿಯಾಗಿ ಕಠಿಣ ತಪಸ್ಸು ಮಾಡಿ ಮಹಾಕವಿಯಾಗಿ ಪರಿವರ್ತನೆಯಾದ ಬಗ್ಗೆ ಚಿತ್ರಣ ನೀಡಿದರಲ್ಲದೆ   ಶೋಷಿತವರ್ಗ ವಾಲ್ಮೀಕಿ ಸಮುದಾಯದರು ಸಂಘಟತ್ವ ಗುಣ ಬೆಳೆಸಿಕೊಳ್ಳಬೇಕು.  ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಿದಾಗ ಮಾತ್ರ   ಜನಾಂಘ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ  ಎಂದು   ತಿಳಿಸಿದರು.
     ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ ವಾಲ್ಮೀಕಿ ರಾಮಾಯಣ ಕೃತಿಯು ಕ್ರಿಸ್ತಪೂರ್ವ 5000ರಲ್ಲಿ ರಚಿತವಾಗಿದೆ ಎಂದು ಸಂಶೋಧನಕಾರರು, ಇತಿಹಾಸಕಾರರು  ಉಲ್ಲೇಖಿಸಿದ್ದಾರೆ.  ಈ ಕೃತಿಯಲ್ಲಿರುವ ವಿಚಾರಧಾರೆ, ತತ್ವಾದರ್ಶಗಳು ಇಂದಿಗೂ ಕೂಡ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ, ಕೌಟುಂಬಿಕ ಅಂಶಗಳಿಗೆ ಆದರ್ಶಪ್ರಾಯವಾಗಿವೆ.    ಮಹರ್ಷಿ ವಾಲ್ಮೀಕಿ  ರಾಮಾಯಣ ಕೃತಿಯಲ್ಲಿ ಮೂಡಿರುವ ಪಾತ್ರಗಳು ಇಂದಿಗೂ ಪ್ರಸ್ತುತವಾಗಿವೆ.  
      ಆದರ್ಶ ಪುರುಷನಿಗೆ ರಾಮ,  ಆದರ್ಶ ದಂಪತಿಗೆ ರಾಮ-ಸೀತಾ, ಆದರ್ಶ ಸೋದರತ್ವಕ್ಕೆ ರಾಮ-ಲಕ್ಷ್ಮಣ, ಉತ್ತಮ ಸೇವಾ ಮನೋಭಾವ ಹಾಗೂ ಭಕ್ತಿಗೆ ಆಂಜನೇಯ,  ಸುಭಿಕ್ಷ ರಾಜ್ಯಕ್ಕೆ ರಾಮರಾಜ್ಯ ಎಂದು ಇಂದಿಗೂ ಜನರು ತಮ್ಮ ಆಡುಮಾತಿನಲ್ಲಿ ಉದಾಹರಿಸುವುದು ಇದಕ್ಕೆ ಸಾಕ್ಷಿಯಾಗಿದೆ. ವಾಲ್ಮೀಕಿ ಮಹರ್ಷಿಯು ರಾಮಾಯಣ ಕೃತಿಯನ್ನು ರಚಿಸಿದ ಸಂದರ್ಭವನ್ನು ಕ್ರೌಂಚ ಪಕ್ಷಿಗಳ ಮಿಥುನ ದೃಷ್ಟಾಂತದ ಮೂಲಕ ವಿವರಣೆ ನೀಡಿದರು.
      ಜಿಲ್ಲಾ ಪಂಚಾಯತಿ ಸದಸ್ಯೆ ಶಾಂತಲಾ ರಾಜಣ್ಣ ಮಾತನಾಡಿ ಪ್ರತೀ ವರ್ಷ ನಾವೆಲ್ಲ ವಾಲ್ಮೀಕಿ ಚರಿತ್ರೆ, ಗುಣಗಾನ ಮಾಡುವ ಮೂಲಕ ದಿನಾಚರಣೆಯನ್ನು ಆಚರಿಸುತ್ತಿದ್ದರೂ   ವಾಲ್ಮೀಕಿ ಸಮುದಾಯದ ಅಭಿವೃದ್ಧಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲದಿರುವುದು ನೋವಿನ ಸಂಗತಿಯಾಗಿದೆ.  ಕೇಂದ್ರ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣಕ್ಕೆ ನೀಡಿರುವ ಶೇ.7.5ರ ಮೀಸಲಾತಿಯನ್ನು ರಾಜ್ಯದಲ್ಲಿಯೂ ಕಲ್ಪಿಸಿದಾಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯಾಗುವುದಲ್ಲದೆ ದಿನಾಚರಣೆ ಅರ್ಥಪೂರ್ಣವಾಗುತ್ತದೆ.
      ವಾಲ್ಮೀಕಿ ಸಮುದಾಯದವರಿಗೆ ಶೇ. 7.5ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ಜಿಲ್ಲೆಯ ಶಾಸಕರು, ಸಂಸದರು ಸರ್ಕಾರದ ಗಮನಕ್ಕೆ ತರಬೇಕು ಎಂದರಲ್ಲದೆ ನಗರದ ಮರಳೂರು ದಿಣ್ಣೆಯಲ್ಲಿ ನಿರ್ಮಿಸಲಾಗುತ್ತಿರುವ ವಾಲ್ಮೀಕಿ ಸಮುದಾಯಭವನವನ್ನು ಪೂರ್ಣಗೊಳಿಸಲು ಅನುದಾನದ ಅಗತ್ಯವಿದ್ದು, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಕೊರತೆಯಾಗಿರುವ ಹಣವನ್ನು ಒದಗಿಸಬೇಕೆಂದು ಸಂಸದರಿಗೆ ಮನವಿ ಮಾಡಿದರು.
     ತುಮಕೂರು ವಿ.ವಿ. ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|| ಎಂ. ಕೊಟ್ರೇಶ್ ಮಹರ್ಷಿ ವಾಲ್ಮೀಕಿಯವರ ಆದರ್ಶ, ಅವರು ರಚಿಸಿದ ರಾಮಾಯಣ ಕೃತಿ ಕುರಿತು ಉಪನ್ಯಾಸ ನೀಡಿದರು.
     ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಣಾಧಿಕಾರಿ ಟಿ.ಎಲ್.ಎಸ್. ಪ್ರೇಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ, ಟಿ. ಅಶ್ವತ್ಥ ನಾರಾಯಣ,  ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಯಜಮಾನ್ ಭೀಮಣ್ಣ, ಜಿಲ್ಲಾ ನಾಯಕ ಸಮುದಾಯದ ಮುಖಂಡರಾದ ದೊಡ್ಡಯ್ಯ, ಸಿ. ಕೆಂಪಹನುಮಯ್ಯ,  ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು. 
     ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.  ಶಿಕ್ಷಣ ಕ್ಷೇತ್ರದಲ್ಲಿ ಸೋಮಶೇಖರಯ್ಯ, ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಎಸ್. ರಾಮಚಂದ್ರಯ್ಯ, ಕೃಷಿ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ದೊಡ್ಡ ಓಬಳಯ್ಯ, ಸಮಾಜಸೇವೆ ಹಾಗೂ ಸಂಘಟನೆ ಹೋರಾಟದಲ್ಲಿ ಪರಮೇಶ್ವರಯ್ಯ(ಪ್ರತಾಪ್ ಮದಕರಿ),  ವಾಲ್ಮೀಕಿ ಐಟಿಐ ಕಾಲೇಜಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಗಂಗರಾಮಯ್ಯ, ಧಾರ್ಮಿಕ ಸೇವಾ ಕ್ಷೇತ್ರದಲ್ಲಿ ಎಸ್. ಮಹದೇವಯ್ಯ, ಕೃಷಿ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಮಂಜುಳ ಮಹಿಮರಂಗಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾದ ಹೆಚ್.ಆರ್. ಹರಿಪ್ರಸಾದ್, ಆರ್. ಪವಿತ್ರ, ನಿತ್ಯಾನಂದ, ತರುಣ್ ಅವರನ್ನು ಗೌರವಿಸಲಾಯಿತು ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಕೊಡಮಾಡುವ ವಿವಿಧ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಲಾಯಿತು.  ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಂತರ್ಜಾತಿ ವಿವಾಹವಾದ ರಮೇಶ್ ಮತ್ತು ಲತಾ ಹಾಗೂ ಮದನ್ ಕುಮಾರ್ ಮತ್ತು ಮೇಘನಾ ದಂಪತಿಗಳಿಗೆ ಪ್ರೋತ್ಸಾಹಧನ ಚೆಕ್ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link