ನಿರಂತರವಾಗಿ ಕುಸಿಯುತ್ತಿರುವ ಕೊಬರಿ ಧಾರಣೆ: ಆತಂಕದಲ್ಲಿ ತೆಂಗು ಬೆಳೆಗಾರರು

ತುಮಕೂರು:

ವಿಶೇಷ ವರದಿ:-ಸಾ.ಚಿ.ರಾಜಕುಮಾರ

    ಕೊಬರಿ ಧಾರಣೆ ನಿರಂತರ ಕುಸಿತ ಕಂಡಿದ್ದು, ಇದರಿಂದ ತೆಂಗು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರದ ಹರಾಜಿನಂತೆ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬರಿ 11,000 ರೂ.ಗಳಿಂದ 11,726 ರೂ.ಗಳಿಗೆ ಹರಾಜಾಗಿದೆ.

     ನವೆಂಬರ್ 28 ರಂದು 11,200 ರಿಂದ 12,000 ರೂ.ಗಳವರೆಗೆ ಕೊಬರಿ ಹರಾಜಾಗಿತ್ತು. ಇದಕ್ಕೂ ಹಿಂದೆ ಅಂದರೆ, ನವೆಂಬರ್ ತಿಂಗಳ ಆರಂಭದಲ್ಲಿ 12,500 ರೂ.ಗಳಿಗೆ ಮಾರಾಟವಾಗಿತ್ತು. ದಿನ ಕಳೆದಂತೆ ಕೊಬರಿ ಧಾರಣೆ ಇಳಿಮುಖವಾಗುತ್ತಲೇ ಇದ್ದು, ಧಾರಣೆ ಹೆಚ್ಚಳವಾಗಬಹುದು ಎಂದು ಕಾದು ಕುಳಿತಿರುವ ತೆಂಗು ಬೆಳೆಗಾರರಲ್ಲಿ ಆತಂಕ ಉಂಟು ಮಾಡಿದೆ.

     ಕುಸಿತ ಕಂಡಿದ್ದ ಕೊಬರಿ ಧಾರಣೆ ಈ ವರ್ಷದ ಆರಂಭದ ಕೆಲವು ತಿಂಗಳಿನಲ್ಲಿ ಏರಿಕೆಯಾಗತೊಡಗಿತು. ಏಪ್ರಿಲ್-ಮೇ ತಿಂಗಳ ವೇಳೆಗೆ 17,500 ರೂ.ಗಳವರೆಗೂ ಕ್ವಿಂಟಾಲ್ ಕೊಬರಿಗೆ ಧಾರಣೆ ಸಿಕ್ಕಿತು. ಮೇ ತಿಂಗಳಿನಲ್ಲಿ 16,500 ರೂ.ಗಳಷ್ಟಿತ್ತು .ಆನಂತರದ ದಿನಗಳಲ್ಲಿ ಹಂತ ಹಂತವಾಗಿ ಇಳಿಮುಖ ಕಾಣುತ್ತಿದೆ. ಪ್ರತಿ ಹರಾಜಿಗೂ 200 ರೂ.ಗಳಷ್ಟು ದರ ಇಳಿಕೆಯಾಗುತ್ತಿದ್ದು, ಇದರ ಪರಿಣಾಮ ಧಾರಣೆ ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗ ಮುಂದೇನು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.

     ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರ ಬರಗಾಲದ ಪರಿಣಾಮ ತೆಂಗು ಉಳಿಸಿಕೊಳ್ಳುವುದೇ ಕಷ್ಟವಾಗಿತ್ತು. ಕಳೆದ ಸಾಲಿನಲ್ಲಿ ವಿಪರೀತ ಬರಗಾಲ ಎದುರಾದ ಕಾರಣ ಬಹಳಷ್ಟು ಕಡೆ ತೆಂಗಿನ ಮರಗಳು ಹಾನಿಗೊಳಗಾದವು. ಆದರೂ ಬೋರ್‍ವೆಲ್‍ಗಳ ಸಹಾಯದಿಂದ ಕಷ್ಟಪಟ್ಟು ತೆಂಗಿನ ಮರಗಳನ್ನು ಉಳಿಸಿಕೊಂಡಿದ್ದರು.

      ತೆಂಗು ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ಬೇಡಿಕೆ ಹೆಚ್ಚಾದ ಪರಿಣಾಮ 12,000 ರೂ.ಗಳ ಆಸುಪಾಸಿನಲ್ಲಿದ್ದ ಧಾರಣೆ 17,500 ರೂ.ಗಳವರೆಗೂ ತಲುಪಿತು. ಬರಗಾಲದ ಬವಣೆಯಿಂದ ತತ್ತರಿಸಿದ್ದ ರೈತರಿಗೆ ಹೊಸದೊಂದು ಚಿಗುರೊಡೆದಂತೆ ಕೊಬರಿ ಧಾರಣೆ ಕೈ ಹಿಡಿಯಿತು. ಆದರೆ ಕೆಲವೇ ತಿಂಗಳು ಈ ಆಸೆ ಮತ್ತೆ ಕಮರುವಂತಾಯಿತು.

      ಧಾರಣೆ ಮತ್ತಷ್ಟು ಹೆಚ್ಚಳವಾಗಬಹುದೆಂಬ ಆಸೆಗಳು ಭಗ್ನವಾದವು. ಕುಸಿಯುತ್ತಾ ಬಂದ ಧಾರಣೆ ಮೇಲೇಳಲೇ ಇಲ್ಲ. ಹೀಗಾಗಿ ತೆಂಗು ಬೆಳೆಗಾರರು ತಮ್ಮ ಮನೆಗಳ ಅಟ್ಟದಲ್ಲಿ, ಮನೆಯ ಮುಂದಿನ ಅಟ್ಟಗಳಲ್ಲಿ ಕೊಬರಿ ಸಂಗ್ರಹಿಸುತ್ತಾ ಬಂದಿದ್ದಾರೆ. ದಿನೆ ದಿನೇ ಕೊಬರಿ ಧಾರಣೆ ಕುಸಿಯುತ್ತಿರುವುದು ಆತಂಕ ಮೂಡಿಸುತ್ತಿದ್ದು, ಧಾರಣೆ ಮತ್ತಷ್ಟು ಇಳಿಕೆಯಾಗುವ ಆತಂಕ ಇವರೆಲ್ಲರನ್ನೂ ಕಾಡುತ್ತಿದೆ. ದರ ಏರಿಕೆಯಾಗುವ ಸೂಚನೆಗಳನ್ನು ಯಾರೂ ನೀಡುತ್ತಿಲ್ಲ. ಈವರೆಗೆ ಸಂಗ್ರಹಿಸಿ ಇಟ್ಟುಕೊಂಡಿರುವ ಮಾಲನ್ನು ಕಡಿಮೆ ಧಾರಣೆಗೆ ಬಿಡಬೇಕಲ್ಲ ಎಂಬ ಚಿಂತೆ ತೆಂಗು ಬೆಳೆಗಾರರದ್ದು.

     ಜಿಲ್ಲೆ ಮಾತ್ರವಲ್ಲದೆ, ರಾಷ್ಟ್ರದಲ್ಲಿಯೇ ತಿಪಟೂರು ಕೊಬರಿ ಮಾರುಕಟ್ಟೆ ಅತ್ಯಂತ ಹೆಸರುವಾಸಿ. ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ ತಾಲ್ಲೂಕುಗಳ ರೈತರು ತಿಪಟೂರು ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ. ಈ ಭಾಗದಲ್ಲಿ ತೆಂಗು ಪ್ರಮುಖ ಬೆಳೆ. ಈ ತಾಲ್ಲೂಕುಗಳು ಮಾತ್ರವಲ್ಲದೆ, ಹೊರಗಿನ ಜಿಲ್ಲೆಯಿಂದಲೂ ತಿಪಟೂರು ಮಾರುಕಟ್ಟೆಗೆ ಕೊಬರಿ ರವಾನೆಯಾಗುತ್ತದೆ. ಆದರೆ ಇದೀಗ ಧಾರಣೆ ಕುಸಿತದಿಂದ ಸಂಗ್ರಹಿಸಿರುವ ಮಾಲನ್ನು ಎಷ್ಟು ದಿನ ಇಟ್ಟುಕೊಳ್ಳುವುದು ಎಂಬ ಚಿಂತೆ ಎದುರಾಗಿದೆ.

     ಈ ಬಾರಿ ಆಗಸ್ಟ್‍ನಿಂದ ಉತ್ತಮ ಮಳೆ ಆರಂಭವಾಯಿತು. ಇದರಿಂದಾಗಿ ತೆಂಗಿನ ತೋಟಗಳು ಮತ್ತೆ ಹಸಿರಿನಿಂದ ಕಂಗೊಳಿಸುತ್ತಿವೆ. ಮುಂದೆ ಉತ್ತಮ ಇಳುವರಿಯ ನಿರೀಕ್ಷೆಯೂ ಇದೆ. ಇಂತಹ ಸಂದರ್ಭದಲ್ಲಿಯೇ ಕೊಬರಿ ಧಾರಣೆ ಇಳಿಮುಖ ವಾಗಿರುವುದು ಇದನ್ನೇ ಪ್ರಮುಖ ಬೆಳೆಯನ್ನಾಗಿ ನಂಬಿಕೊಂಡಿರುವ ರೈತರಿಗೆ ಸಂಕಷ್ಟ ಎದುರಾಗಿದೆ.

     ಕೊಬರಿ ಧಾರಣೆಯಲ್ಲಿ ಕುಸಿತ ಉಂಟಾಗಲು ಹಲವು ವ್ಯಾಖ್ಯಾನಗಳನ್ನು ನೀಡಲಾಗುತ್ತಿದೆ. ಮುಕ್ತ ಆಮದು ನೀತಿ ಇರುವ ಕಾರಣ ನೆರೆಯ ಶ್ರೀಲಂಕಾ ದೇಶದ ವರ್ತಕರು ಮಲೇಷಿಯಾ, ಥೈಲ್ಯಾಂಡ್, ಫಿಲಿಫೈನ್ಸ್ ದೇಶಗಳಿಂದ ತೆಂಗು, ಅಡಿಕೆ ತಂದು ಭಾರತಕ್ಕೆ ರಫ್ತು ಮಾಡುತ್ತಿದ್ದಾರೆ. ಇದರ ಜೊತೆಗೆ ಬಾಂಗ್ಲಾ, ನೇಪಾಳ ಮೂಲಕ ತೆಂಗು ಮತ್ತು ಅಡಿಕೆಯನ್ನು ಕಳ್ಳ ಮಾರ್ಗದಲ್ಲಿ ಭಾರತದ ಮಾರುಕಟ್ಟೆ ಸೇರುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುತ್ತಾರೆ ಸಂಸದ ಜಿ.ಎಸ್.ಬಸವರಾಜು.

     ಈಗ ಬೇಡಿಕೆ ಕಡಿಮೆಯಾಗಿದೆ. ಇಲ್ಲಿ ಲೈಸೆನ್ಸ್ ಹೊಂದಿರುವವರು ಕಡಿಮೆ ಧಾರಣೆಗೆ ಕೊಬರಿ ಖರೀದಿಸಿ ಹೆಚ್ಚಿನ ಧಾರಣೆಗೆ ಹೊರಗಡೆ ಕಳುಹಿಸುತ್ತಾರೆ. ಅವರು ಹಣ ಮಾಡಿಕೊಳ್ಳುತ್ತಾರೆ. ಸೆಕೆಂಡ್ಸ್ ದಂಧೆ ಇನ್ನೂ ಮುಂದುವರೆದಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇದರ ಜೊತೆಗೆ ಕೆಲವು ಕಾರಣಗಳಿಂದ ಗುಣಮಟ್ಟ ಕಡಿಮೆಯಾಗುತ್ತಿದೆ. ಮನೆಯ ಮೇಲಿನ ಅಟ್ಟಗಳಲ್ಲಿ ಬರುವಂತಹ ಗುಣಮಟ್ಟ ನೆಲ ಅಟ್ಟಗಳಲ್ಲಿ ಬರಲಾಗದು.

     ಎಪಿಎಂಸಿಗಳಲ್ಲಿ ಗ್ರೇಡಿಂಗ್ ಮಾಡಿ ಆ ಗುಣಮಟ್ಟಕ್ಕೆ ತಕ್ಕಂತೆ ಧಾರಣೆ ನೀಡಬೇಕು. ಆದರೆ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ನಿರ್ಧಾರ ಮಾಡಲಾಗುತ್ತಿದೆ. ಗ್ರೇಡಿಂಗ್ ಮಾಡುವತ್ತ ಹೆಚ್ಚು ಗಮನ ಹರಿಸಬೇಕು. ಹಿಂದೆ ಮಾರುಕಟ್ಟೆಯನ್ನು ಸುಸ್ಥಿತಿಗೆ ತಂದಿದ್ದ ನ್ಯಾಮೇಗೌಡ ಅವರು ಇಲ್ಲಿಗೆ ಎಪಿಎಂಸಿ ಕಾರ್ಯದರ್ಶಿಯಾಗಿ ಮತ್ತೆ ಬಂದಿದ್ದಾರೆ. ಆದರೆ ಅವರಿಗೆ ಮೂರು ಕಡೆ ಪ್ರಭಾರ ಇರುವುದರಿಂದ ಎಲ್ಲವನ್ನೂ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವರಾಜು.

      ಬೇಡಿಕೆ ಈಗ ಕಡಿಮೆಯಾಗಿರಬಹುದು. ಇದಕ್ಕೆ ಪ್ರವಾಹ ಮತ್ತಿತರ ಕಾರಣಗಳನ್ನು ಕೊಡಬಹುದು. ಆದರೆ ಮುಖ್ಯವಾಗಿ ಗಮನಿಸಬಹುದಾದ ಕೆಲವು ಸಮಸ್ಯೆಗಳಿವೆ. ಇವುಗಳನ್ನು ನಿವಾರಣೆ ಮಾಡಿದರೆ ತೆಂಗು ಬೆಳೆಗಾರರ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಬಹುದು. ಬಾಂಗ್ಲಾ, ನೇಪಾಳ ಮೂಲಕ ಕಳ್ಳ ಮಾರ್ಗದಲ್ಲಿ ತೆಂಗು, ಅಡಿಕೆ ಭಾರತದ ಮಾರುಕಟ್ಟೆ ಸೇರ್ಪಡೆಯಾಗುತ್ತಿದೆ.

      ಅಷ್ಟೇ ಅಲ್ಲ, ಇಲ್ಲಿನ ಕೊಬರಿಯನ್ನೇ ಹೊರ ರಾಷ್ಟ್ರಗಳಲ್ಲಿ ಕಡಿಮೆ ದರಕ್ಕೆ ಖರೀದಿಸಿ ಪೌಡರ್ ಮಿಶ್ರಣವನ್ನು ಈ ದೇಶಕ್ಕೆ ರವಾನಿಸುತ್ತಾರೆ. ಇಂತಹ ಅಕ್ರಮ ವ್ಯಾಪಾರ ವಹಿವಾಟುಗಳಿಗೆ ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ಸ್ಥಳೀಯ ಕಾರ್ಖಾನೆಗಳು ಮುಚ್ಚಿ ಹೋಗಲಿವೆ. 63 ತೆಂಗಿನ ಪೌಡರ್ ಉತ್ಪಾದನಾ ಕಾರ್ಖಾನೆಗಳ ಪೈಕಿ ಈಗಾಗಲೇ ಸಾಕಷ್ಟು ಮುಚ್ಚಿ ಹೋಗಿದ್ದು, ಕೆಲವೇ ಕಾರ್ಖಾನೆಗಳು ಮಾತ್ರ ಚಾಲನೆಯಲ್ಲಿವೆ.

       ಕೃಷಿ ಬೆಲೆ ಆಯೋಗವೇ ಹೇಳುವಂತೆ ಒಂದು ಕ್ವಿಂಟಾಲ್ ಕೊಬರಿ ಉತ್ಪಾದನೆಗೆ 11,000 ರೂ.ಗಳು ಖರ್ಚು ಬರುತ್ತದೆ. ನೀರು, ಗೊಬ್ಬರ, ಕೊಬರಿ ಮಾಡುವ ಪ್ರಕ್ರಿಯೆ, ಸಾಗಾಣಿಕೆ ಇವೆಲ್ಲವನ್ನೂ ಒಳಗೊಂಡಂತೆ ಇಷ್ಟು ವೆಚ್ಚ ತಗುಲಲಿದ್ದು, ರೈತನಿಗೆ ಖರ್ಚಿನ ಮೇಲ್ಪಟ್ಟು ಕನಿಷ್ಠ ನಾಲ್ಕೈದು ಸಾವಿರ ರೂ.ಗಳಾದರೂ ಸಿಗಬೇಕು.

       ಇಲ್ಲದೆ ಹೋದರೆ ನಷ್ಟವೇ ಅವನ ಬದುಕಾಗಲಿದೆ. ಧಾರಣೆ ಹೆಚ್ಚಿದಾಗ ರೈತರು ಸಂತಸಪಡುತ್ತಾರೆ. ಇಳಿಕೆಯಾದಾಗ ಕೊರಗುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣ ಹುಡುಕಿ ಧಾರಣೆ ಕುಸಿಯದಂತೆ ಏನು ಮಾಡಬೇಕು ಎಂಬ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಸರ್ಕಾರಗಳು ಅನಗತ್ಯ ಕೆಲವು ವಿಷಯಗಳ ಬಗ್ಗೆ ಹೆಚ್ಚು ಆದ್ಯತೆ ಕೊಡುವ ಬದಲು ರೈತರ ಜೀವನಾಡಿಯಾಗಿರುವ ಇಂತಹ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದು ಒಳಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link