ಹಾನಗಲ್ಲ :
ವಿಶ್ವದ ದಾರಿದ್ರ್ಯ ಕಳೆದು ಅಮೃತಮಯ ಜೀವನಕ್ಕೆ ಮಾರ್ಗದರ್ಶಕ ಶಕ್ತಿ ಶರಣರ ವಚನ ಸಾಹಿತ್ಯಕ್ಕಿರುವಾಗಲೂ ಅದನ್ನು ಸ್ವಿಕರಿಸುವಲ್ಲಿ ಮನುಷ್ಯ ನಿರಾಸಕ್ತಿ ತೋರುತ್ತಿರುವುದು ವಿಷಾದದ ಸಂಗತಿ ಎಂದು ಪ್ರೊ. ಎಚ್.ಎಸ್.ಬಾರ್ಕಿ ಖೇದ ವ್ಯಕ್ತಪಡಿಸಿದರು.
ಹಾನಗಲ್ಲಿನ ಶ್ರೀವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾನಗಲ್ಲ ಘಟಕ ಆಯೋಜಿಸಿದ ವಾರ್ಷಿಕ ಕಾರ್ಯ ಚಟುವಟಿಕೆ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಚನಕಾರರದು ನಿಜವಾದ ದಾಸೋಹ ಜೀವನವಾಗಿತ್ತು. ಅಂತರಂಗದ ಕಲ್ಮಶ ಕಳೆದು ಧನಾತ್ಮ ಚಿಂತನಗೆ ಇಂಬು ನೀಡಿದವರು ವಚನಕಾರರರು. ವಚನಕಾರರು ಇತಿಹಾಸ ಕಾಲದ ಮಾರ್ಗದರ್ಶಕರು ಮಾತ್ರವಲ್ಲ, ಭವಿಷ್ಯದ ಎಲ್ಲ ಕಾಲಕ್ಕೂ ಜೀವನ ದರ್ಶ ನೀಡುವ ಶಕ್ತಿ ವಚನ ಸಾಹಿತ್ಯಕ್ಕಿದೆ. ಬದುಕಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ವಚನಗಳಿಗಿದೆ. ಜೀವನ ಎಂದರೆ ಮನರಂಜನೆ ಅಲ್ಲ. ಮಾನವೀಯತೆಯ ಬದುಕು. ನಮ್ಮ ವಿಚಾರಗಳಿಗೆ ಶಕ್ತಿ ಇರಬೇಕು. ಅವು ಜೀವನದ ಸಾಕ್ಷಾತ್ಕಾರಕ್ಕೆ ಮುನ್ನುಡಿಯಾಗಬೇಕು. ಈಗ ವಚನಗಳನ್ನು ಮನೆ ಮನಗಳಿಗೆ ತಲುಪಿಸುವಲ್ಲಿ ಸೋಲಬಾರದು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಹಾನಗಲ್ಲ ಘಟಕದ ಅಧ್ಯಕ್ಷ ಪ್ರೊ.ಸಿ.ಮಂಜುನಾಥ, ಜಾಗತಿಕವಾಗಿ ವಚನಗಳು ಮಾನ್ಯತೆ ಪಡೆದಿವೆ. ಈಗ ನಮ್ಮ ಮುಂದಿರುವುದು ವಚನಗಳನ್ನು ಜನ ಮಾನಸಕ್ಕೆ ತಲುಪಿಸುವ ಸವಾಲು. ಎಲ್ಲ ಕಾಲಕ್ಕೂ ಬೇಕಾಗಿರುವ ವಚನ ಸಾಹಿತ್ಯವನ್ನು ಪುಸ್ತಕಗಳಿಗೆ ಸೀಮಿತಗೊಳಿಸದೇ ಸಮಾಜಮುಖಿಯಾದ ಚಿಂತನೆಗೆ ಒಳಪಡಿಸಬೇಕಾಗಿದೆ. ಇದು ಅಗ್ನಿಪರೀಕ್ಷೆಯ ಕಾಲ. ಸಾಮಾಜಿಕ ಬದಲಾವಣೆ ಎಂಬುದು ಸಕಾರಾತ್ಮಕವಾಗಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪುರ, ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಮೂಲಕ ಒಂದು ಹೊಸ ಚಿಂತನೆಗೆ ಇಂಬು ನೀಡಲಾಗುತ್ತಿದೆ. ನಾಗರಿಕತೆಯ ಹೆಸರಿನಲ್ಲಿ ಅನಾಗರಿಕತೆಯ ತುತ್ತು ತುದಿಗೆ ತಲುಪುತ್ತಿರುವ ಈ ಸಾಮಾಜಿಕ ವ್ಯವಸ್ಥೆಗೆ ಬದಲಾವಣೆಯ ಅಸ್ತ್ರ ಬೇಕಾಗಿದೆ ಎಂದರು.
ಆಶಯ ಮಾತುಗಳನ್ನಾಡಿದ ಪರಿಷತ್ತಿನ ಉಪಾಧ್ಯಕ್ಷ ರಾಘವೇಂದ್ರ ಮಾಡಳ್ಳಿ, ಹಾನಗಲ್ಲ ತಾಲೂಕಿನಲ್ಲಿ ಮನೆ ಮನೆಯಲ್ಲಿ ಮಹಾಮನೆ ಹಾಗೂ ಶಾಲಾ ಕಾಲೇಜುಗಳಲ್ಲಿ ವಚನ ಪ್ರಚಾರ ಪ್ರಸಾರಕ್ಕೆ ಆದ್ಯತೆ ನೀಡಿ ಕಾರ್ಯಕ್ರಮ ಸಂಯೋಜಿಸಲಾಗುತ್ತಿದೆ. ವಚನಗಳನ್ನು ಮಕ್ಕಳ ಮನಸ್ಸಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡಿಸಿದ್ದೇವೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ಕದಳಿ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಅಧ್ಯಕ್ಷೆ ಅಕ್ಕಮ್ಮ ಕುಂಬಾರಿ, ಕಾರ್ಯದರ್ಶಿ ರೇಖಾ ಶೆಟ್ಟರ, ಡಾ.ಪ್ರಕಾಶ ಹೊಳೇರ, ಎಸ್.ಪಿ.ಅರಮನಿಮಠ, ಮಹೇಶ ಹೊನಕೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಜಯಾ ಕಬ್ಬೂರ, ಲತಾ ಬಂಕನಾ ಅಕ್ಕಮ್ಮ ಸುಗಾವಿ ವಚನಗಳನ್ನು ಹಾಡಿದರು. ಎಸ್.ವಿ.ಹೊಸಮನಿ ಸ್ವಾಗತಿಸಿದರು. ಪ್ರೊ.ರಾಘವೇಂದ್ರ ಮಾಡಳ್ಳಿ ಆಶಯ ಮಾತುಗಳನ್ನಾಡಿದರು. ಶ್ರೀನಿವಾಸ ದೀಕ್ಷೀತ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಬಿ.ಹೊನ್ನಪ್ಪ ವಂದಿಸಿದರು.
ಪದಾಧಿಕಾರಿಗಳು :
ಹಾನಗಲ್ಲ ನಗರ ಘಟಕವನ್ನು ಪುನರ್ರಚಿಸಲಾಗಿದ್ದು ರವಿಬಾಬು ಪೂಜಾರ ಗೌರವಾಧ್ಯಕ್ಷ, ಪ್ರೊ.ಸಿ.ಮಂಜುನಾಥ ಅಧ್ಯಕ್ಷ, ಶ್ರೀನಿವಾಸ ದೀಕ್ಷಿತ್, ರಾಘವೇಂದ್ರ ಮಾಡಳ್ಳಿ ಉಪಾಧ್ಯಕ್ಷ, ಪ್ರವೀಣ ಬ್ಯಾತನಾಳ, ಸಂತೋಷ ದೊಡ್ಡಮನಿ ಕಾರ್ಯದರ್ಶಿ, ಎಸ್.ವಿ.ಹೊಸಮನಿ ಕೋಶಾಧ್ಯಕ್ಷ, ಸುನಿತಾ ಉಪ್ಪಿನ, ಭುವನೇಶ್ವರಿ ಚೊಗಚಿಕೊಪ್ಪ ಮಹಿಳಾ ಪ್ರತಿನಿಧಿ, ಶಂಭುಲಿಂಗ ಹೇರೂರ, ಹೊನ್ನಪ್ಪ ಭೋವಿ ಸಂಘಟನಾ ಕಾರ್ಯದರ್ಶಿ, ಅಶೋಕ ದಾಸರ್, ಎಂ.ಎಸ್.ಅಮರದ, ನಂದೆಪ್ಪ ಲಮಾಣಿ, ಎಸ್.ಸಿ.ಚಿಕ್ಕಮಠ, ಎಂ.ಎಸ್.ಕೊಟ್ರಣ್ಣನವರ, ಸಂತೋಷ ಬಿದರಗಡ್ಡಿ, ಆರ್.ಬಿ.ರೆಡ್ಡಿ, ದಾವಲಮಲಿಕ್ ಇಂಗಳಗಿ, ಗೀತಾ ಚಕ್ರಸಾಲಿ, ಶ್ರೀದೇವಿ ಹಿರೇಮಠ, ಎಸ್.ಎಚ್.ಗಾಳಮ್ಮನವರ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ