ವೇದಾಗಮ ಜಗತ್ತಿನ ಜ್ಞಾನ ಭಂಡಾರ

ದಾವಣಗೆರೆ

    ವೇದ-ಆಗಮಗಳಲ್ಲಿ ಅಪಾರವಾದ ಜ್ಞಾನ ಸಂಪತ್ತು ಅಡಿಗಿದ್ದು, ಇವು ವಿಜ್ಞಾನಕ್ಕೂ ಮಾರ್ಗದರ್ಶನ ಮಾಡಬಲ್ಲ ಶಕ್ತಿ ಹೊಂದಿವೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

     ನಗರದ ಶ್ರೀಶೈಲ ಮಠದಲ್ಲಿ ಮಂಗಳವಾರ ನಡೆದ ಶ್ರೀಜಗದ್ಗುರು ಪಂಡಿತಾರಾಧ್ಯ ವೇದಾಗಮ ಸಂಸ್ಕೃತ ಪಾಠ ಶಾಲೆಯ ಪ್ರಾರಂಭೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಜ್ಞಾನದ ಸಂಶೋಧನೆಯ ಮೂಲ ಸಲೆ ವೇದ-ಆಗಮಗಳಲ್ಲಿ ಇದೆ. ಇದಕ್ಕೆ ಯಾವುದೇ ಉಪಕರಣ ಬಳಸದೇ ತಮ್ಮ ಬುದ್ಧಿ ಹಾಗೂ ಗಣಿತ ಶಾಸ್ತ್ರದ ಆಧಾರದಲ್ಲಿಯೇ ಬಾಹ್ಯಾಕಾಶದಲ್ಲಿ ಸಂಭವಿಸುವ ಸೂರ್ಯೋದಯ, ಸೂರ್ಯಾಸ್ತಮ, ಚಂದ್ರ ಗ್ರಹಣ, ಸೂರ್ಯ ಗ್ರಹಣಗಳ ಹೀಗೆ ದಿನಾಂಕ, ಸಮಯವನ್ನು ನಿಮಿಷದ ಲೆಕ್ಕದಲ್ಲಿ ನಮ್ಮ ಋಷಿಮುನಿಗಳು, ಆಚಾರ್ಯರು ಹೇಳಿರುವುದೇ ಸಾಕ್ಷಿಯಾಗಿದೆ ಎಂದರು.

     ಸಂಸ್ಕೃತ ಭಾಷೆ ಎಂದಾಕ್ಷಣ ಕೆಲವು ತಾತ್ಸಾರ ಮನೋಭಾವದಿಂದ ಮೂಢ ನಂಬಿಕೆ, ಯಾವುದೇ ಹುರುಳಿಲ್ಲ, ಚಲಾವಣೆ ಇಲ್ಲದ ಭಾಷೆ, ಮೃತ ಭಾಷೆ ಎಂದೆಲ್ಲಾ ಅಲ್ಲಗೆಳೆಯುತ್ತಾರೆ. ಆದರೆ, ಸಂಸ್ಕೃತ ಎಲ್ಲ ಭಾಷೆಗಳಿಗೂ ಮಾತೃ, ಪಿತೃ ಭಾಷೆಯಾಗಿದ್ದು, ಇಂಗ್ಲೀಷ್ ಭಾಷೆಯ ಕೆಲ ಪದಗಳು ಸಹ ಸಂಸ್ಕೃತದಿಂದ ಬಂದಿವೆ. ಸಂಸ್ಕೃತದ ಮಾತೃ ಪದದಿಂದ ಮದರ್, ಪಿತೃ ಪದದಿಂದ ಫಾದರ್, ಭಾತೃ ಪದದಿಂದ ಬ್ರದರ್ ಎಂಬ ಆಂಗ್ಲ ಶಬ್ದಗಳು ಹುಟ್ಟಿಕೊಂಡಿವೆ. ಹೀಗಾಗಿ ಅಮೃತ ಕೊಡುವ ಅಮೃತ ಭಾಷೆಯ ಬಗ್ಗೆ ಯಾರೂ ಸಹ ಹಗುರವಾಗಿ ಮಾತನಾಡಬಾರದು ಎಂದು ಸೂಚ್ಯವಾಗಿ ಎಚ್ಚರಿಸಿದರು.

      ದೇವ ಭಾಷೆಯಾಗಿರುವ ಸಂಸ್ಕೃತವನ್ನು ಪ್ರಚಾರ ಮಾಡುವ ಮೂಲಕ ಜನರಿಗೆ ತಲುಪಿಸುವುದು ಮಠಗಳ ಹಾಗೂ ಧಾರ್ಮಿಕ ಸಂಸ್ಥೆಗಳ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ದೇವನಗರಿಯಲ್ಲಿ ವೇದಾಗಮ ಅಧ್ಯಯನ ಸಂಸ್ಕೃತ ಪಾಠ ಶಾಲೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಹಿಂದೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಸ್ಥಗಿತವಾದಂತೆ, ಈಗಲೂ ಆಗಬಾರದೆಂಬ ಕಾರಣಕ್ಕೆ ಶಾಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಿ ಹಾಗೂ ಆರ್ಥಿಕ ಭದ್ರತೆ ಒದಗಿಸಿ, ಈ ಶಾಲೆ ಆರಂಭಿಸಲಾಗಿದ್ದು, ಮುಂದೆ ಯಾವ ಕೊರತೆ, ತೊಂದರೆ ಎದುರಾದರೂ ಶಾಲೆ ಮಾತ್ರ ನಿಲ್ಲುವುದಿಲ್ಲ ಎಂದರು.

      ಜನತೆಗೆ ಜಂಗಮ ವಟುಗಳೆಂದರೆ, ಬಹಳಷ್ಟು ಪ್ರೀತಿ. ಎಲ್ಲ ಕಾರ್ಯಕ್ರಮಗಳಿಗೂ ಅವರನ್ನು ಕರೆದುಕೊಂಡು ಹೋಗುತ್ತಾರೆ. ಆದರೆ, ಪಾಠ ಶಾಲೆಯಲ್ಲಿ ಶಿಸ್ತು, ಬದ್ಧತೆ ಕಾಪಾಡಬೇಕೆಂಬ ಉದ್ದೇಶದಿಂದ ಕೆಲ ಕಟ್ಟಲೆಗಳನ್ನು ವಿಧಿಸಿದ್ದು, ಈ ಪಾಠ ಶಾಲೆಯ ವಟುಗಳನ್ನು ಭಕ್ತರು ಕಾರ್ಯಕ್ರಮಕ್ಕೆ ಕರೆದೊಯ್ಯುವ ಮುನ್ನ ಗುರುಗಳ ಅನುಮತಿ ಪಡೆಯಬೇಕು. ಹಾಗೂ ಅವರನ್ನೂ ನೀವೇ ಕರೆದೊಯ್ದು, ಕರೆ ತರಬೇಕು ಎಂದು ಹೇಳಿದರು.

      ಮಕ್ಕಳ ಪಾಲಕರು ಪದೇ, ಪದೇ ಇಲ್ಲಿಗೆ ಬರುವಂತಿಲ್ಲ. ಬಂದರೂ ಗುರುಗಳ ಅನುಮತಿ ಪಡೆದು ಬಂದು ಮಕ್ಕಳನ್ನು ಮಾತನಾಡಿಸಿಕೊಂಡು ಹೋಗಬೇಕು. ಇಲ್ಲಿಗೆ ಬರುವ ಪಾಲಕರಿಗೆ ಉಳಿದುಕೊಳ್ಳಲು ಅವಕಾಶವಿಲ್ಲ. ಏಕೆಂದರೆ, ನೀವು ಇಲ್ಲೇ ಮೊಕ್ಕಂ ಹೂಡಿದರೆ, ಮಕ್ಕಳ ಮಮಕಾರ ಹೆಚ್ಚಾಗಿ, ವೇದ ಅಭ್ಯಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿ, ಮಕ್ಕಳು ಮನೆಗೆ ಬಂದು ಬಿಡುವ ಸಾಧ್ಯತೆ ಇದೆ. ಅಲ್ಲದೇ, ಪದೇ, ಪದೇ ಮಕ್ಕಳಿಗೆ ಫೋನ್ ಮಾಡಬಾರದು ಎಂದು ಕಿವಿಮಾತು ಹೇಳಿದರು.

      ಈ ಪಾಠ ಶಾಲೆಯಲ್ಲಿ ವೇದ-ಆಗಮ ಹಾಗೂ ಜ್ಯೋತಿಷ್ಯ ಶಾಸ್ತ್ರ ಅಧ್ಯಯನಕ್ಕೂ ವ್ಯವಸ್ಥೆ ಕಲ್ಪಿಸಲಾಗಿದ್ದು, ಹದಿನೈದು ದಿನಗಳಿಗೊಮ್ಮೆ ಸಂಸ್ಕೃತ ಸಂಭಾಷಣ ಶಿಬಿರವನ್ನು ಆಯೋಜಿಸಲಾಗುವುದು. ಅಲ್ಲದೆ, ಈ ವಾರದಿಂದಲೇ ಮಹಿಳೆಯರಿಗೂ ವೇದ-ಆಗಮ ಸಂಸ್ಕೃತ ಪಾಠ ಕಲಿಸುವುದನ್ನು ಆರಂಭಿಸಲಾಗುವುದು ಎಂದರು.

      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷರು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹಿಂದೆ ಸಂಸ್ಕೃತ ಭಾಷೆಯು ಮನುವಾದಿಗಳ ಕೈಯಲ್ಲಿ ಇತ್ತು. ಆಗ ಸಾಮಾನ್ಯ ಜನರು ಆ ಭಾಷೆಯನ್ನು ಕಲಿಯಲು ಆಸ್ಪದವೇ ಇರಲಿಲ್ಲ. ಆದರೆ, ಈಗ ಎಲ್ಲರೂ ಸಂಸ್ಕೃತ ಕಲಿಯಬಹುದಾಗಿದೆ ಎಂದರು.

       ದಾವಣಗೆರೆಯಲ್ಲಿ ವೇದಾಧ್ಯಯನ ಪಾಠ ಶಾಲೆಯ ಕೊರತೆ ಇತ್ತು. ಆದರೆ, ಈ ಕೊರತೆಯನ್ನು ಶ್ರೀಶೈಲ ಜಗದ್ಗುರುಗಳು ನೀಗಿಸಿದ್ದಾರೆ. ಆದ್ದರಿಂದ ಈ ಪಾಠ ಶಾಲೆಯ ಸದುಪಯೋಗ ಪಡೆದುಕೊಂಡು, ಉತ್ತಮವಾಗಿ ಸಂಸ್ಕೃತ, ವೇದ-ಆಗಮಗಳನ್ನು ಕಲಿತು, ಪಂಡಿತರಾಗಿ ಹೊರಹೊಮ್ಮಬೇಕೆಂದು ವಟುಗಳಿಗೆ ಕಿವಿಮಾತು ಹೇಳಿದರು.

      ಷಾಹಪೂರದ ಶ್ರೀಸೂಗೂರೇಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ-ಲಿಂಗಾಯತರು ಬೇರೆ, ಬೇರೆ ಎಂಬ ಗೊಂದಲದ ವಾತಾವರಣ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪನವರು ಇರದಿದ್ದರೆ, ನಮ್ಮಗಳ ಸ್ಥಿತಿ ಏನಾಗುತಿತ್ತೋ? ಎಂತಾಗುತಿತ್ತೋ? ಎರಡೂ ಬೇರೆ, ಬೇರೆ ಎಂದು ಹೇಳಿ, ಮೀಸೆ ತಿರುವಿದವರಿಗೆ ದಿಟ್ಟ ಉತ್ತರವನ್ನು ಅವರು ನೀಡಿದ್ದಾರೆ ಎಂದರು.

        ಯಂತ್ರದಿಂದ ಇಡೀ ಜಗತ್ತು ವಿನಾಶದಂಚಿಗೆ ತಲುಪುತ್ತಿದೆ. ಇದು ಉಳಿಯುವುದು ಮಂತ್ರದಿಂದ ಮಾತ್ರ. ಮಂತ್ರ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕೆಂಬ ಉದ್ದೇಶದಿಂದ ಇಲ್ಲಿ ವೇದಾಧ್ಯಯನ ಸಂಸ್ಕೃತ ಪಾಠ ಶಾಲೆ ಆರಂಭಿಸಲಾಗಿದೆ. ಅನಕ್ಷರಸ್ಥರಿಗೂ ಬದುಕಿನ ಪಾಠ ಹೇಳಿ ಕೊಡಿವ ಶಕ್ತಿ ಈ ಮಂತ್ರಕ್ಕಿದೆ ಎಂದು ಪ್ರತಿಪಾದಿಸಿದರು.

      ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂಗೈಕ ವಾಗೀಶ ಪಂಡಿತಾರಾಧ್ಯ ಶ್ರೀಗಳ ಕಾಲದಲ್ಲೂ ಇಲ್ಲಿ ವೇದ ಪಾಠ ಶಾಲೆ ಇತ್ತು. ಲಿಂ.ಉಮಾಪತಿ ಪಂಡಿತಾರಾಧ್ಯ ಶ್ರೀಗಳು ಸಹ 1996ರಿಂದ 2000ದ ವರೆಗೂ ಶಾಲೆ ನಡೆಸಿದ್ದರು. ಆದರೆ, ಇವು ಕಾರಣಾಂತರದಿಂದ ಮುಚ್ಚಿ ಹೋಗಿದ್ದವು. ಆದರೆ, ಆ ಶಾಲೆಯನ್ನು ಇಂದಿನ ಶ್ರೀಶೈಲ ಜಗದ್ಗುರುಗಳು ಪುನಶ್ಚೇತನಗೊಳಿಸಿದ್ದಾರೆ. ವೈದಿಕ ಪದ್ಧತಿ ಕೇವಲ ಜಂಗಮರಿಗೆ ಮಾತ್ರ ಸೀಮಿತವಲ್ಲ. ಆಸಕ್ತಿ ಇರುವ ಎಲ್ಲರೂ ಕಲಿಯಬಹುದು ಎಂದರು.
ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

         ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಅಥಣಿ ಎಸ್. ವೀರಣ್ಣ, ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ್, ದೇವರಮನೆ ಶಿವಕುಮಾರ್, ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಯಡೂರು ಪಾಠ ಶಾಲೆ ಪ್ರಾಧ್ಯಾಪಕ ಶ್ರೀಶೈಲ ಶಾಸ್ತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.. ಕುಮಾರ ಪ್ರಭಯ್ಯ ಶಾಸ್ತ್ರೀ ವೇದಘೋಷ ನಡೆಸಿಕೊಟ್ಟರು. ವಾಗೀಶಯ್ಯ ಸ್ವಾಗತಿಸಿದರು. ಮಂಜುನಾಥ ದೇವರು ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap