ಬೆಂಗಳೂರು
ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಊಟಿ- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.ಚಿಕ್ಕಯ್ಯನಛತ್ರ ಗ್ರಾಮದ ಬಳಿ ಬ್ಯಾರಿಕೇಡ್ ಹಾಗೂ ಮಲ್ಲಯ್ಯನಮೂಲೆ ಮಠದ ಸಮೀಪ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮೈಸೂರು- ನಂಜನಗೂಡಿಗೆ ತೆರಳುವ ಎಲ್ಲ ವಾಹನಗಳು ಕೆಂಪಿಸಿದ್ದನಹುಂಡಿ, ಬಸವಾಪುರ ಮಾರ್ಗವಾಗಿ ಸಂಚರಿಸುತ್ತಿವೆ.
ಕೇರಳದ ವೈನಾಡು ಮತ್ತಿತರ ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ಒಳ ಹರಿವು ಸಹ ತಗ್ಗಿದೆ. ಜಲಾಶಯದ ಹೊರ ಹರಿವಿನ ಪ್ರಮಾಣದಲ್ಲೂ ಇಳಿಕೆಯಾಗಿದೆ. ನಿನ್ನೆವರೆಗೂ 76 ಸಾವಿರ ಕ್ಯೂಸೆಕ್ ಇದ್ದ ಹೊರಹರಿವು ಈಗ 30 ಸಾವಿರ ಕ್ಯೂಸೆಕ್‍ಗೆ ಕಡಿಮೆಯಾಗಿದೆ.
ಕೇರಳದ ವೈನಾಡು ಹಾಗೂ ಕರ್ನಾಟಕದ ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯಗಳು ತುಂಬುತ್ತಿವೆ. ಹೀಗಾಗಿ ಹೆಚ್ಚುವರಿ ನೀರನ್ನು ಕಪಿಲಾ ಹಾಗೂ ಕಾವೇರಿ ನದಿಗೆ ಹರಿದು ಬಿಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರವಾಹ ಭೀತಿಯಲ್ಲಿರುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ, ಹಳೇಹಂಪಾಪುರ, ಮುಳ್ಳೂರು ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್ ನೆನ್ನೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಮ್ಮೆಲೆ ನೀರು ಬಿಡುವುದರಿಂದ ನದಿ ಪಾತ್ರದಲ್ಲಿನ ಜನರು ಸಂಕಷ್ಟಕ್ಕೀಡಾ ಗುವುದು ಸಹಜ. ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಕಂದಾಯ ಸಚಿವರ ಜೊತೆ ಚರ್ಚಿಸಿ, ಆಣೆಕಟ್ಟೆಯ ಒಳ ಹರಿವಿನ ಪ್ರಮಾಣ ಎಷ್ಟು ಪ್ರಮಾಣದಲ್ಲಿರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಿಸಲು ಈ ಬಾರಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಕಳೆದ ಬಾರಿ ಕಬಿನಿ ಹಾಗೂ ಕೆ.ಆರ್.ಎಸ್. ಜಲಾಶಯದಿಂದ ಒಮ್ಮೆಲೆ ನೀರು ಹರಿದುಬಿಟ್ಟ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ 5 ಗ್ರಾಮಗಳು ಪ್ರವಾಹದಿಂದ ಹಾನಿಗೊಳಗಾಗಿದ್ದವು. ಆದ್ದರಿಂದ ಈ ಬಾರಿ ಈ ಗ್ರಾಮಗಳಿಗೆ ಪ್ರವಾಹದ ನೀರು ಒ:ನುಗ್ಗದಂತೆ ಜಿಲ್ಲಾಡಳಿತವು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
