ಸಂತೆ ಜಾಗ ಸ್ಥಳಾಂತರ : ವ್ಯಾಪಾರಿಗಳಿಂದ ಪುರಸಭೆ ಮುಂದೆ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ
    ಪಟ್ಟಣದಲ್ಲಿ ನಡೆಯುತ್ತಿರುವ ಸಂತೆ ಸ್ಥಳವನ್ನು ಪುರಸಭೆ ಎಪಿಎಂಸಿ ಯಾರ್ಡ್‍ಗೆ ಬದಲಾಯಿಸಿರುವುದನ್ನು ವಿರೋಧಿಸಿ ಸಂತೆ ವ್ಯಾಪಾರಸ್ಥರು ಪುರಸಭೆ ಮುಂಭಾಗ ಪ್ರತಿಭಟಿಸಿದರು.ಪ್ರತಿ ಸೋಮವಾರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಸಂತೆ ನಡೆಯುತ್ತಿದ್ದು ಈ ಸಂತೆಯನ್ನು ಡಿ. 16ರಿಂದ ಎಪಿಎಂಸಿ ಯಾರ್ಡ್‍ಗೆ ಬದಲಾಯಿಸಲಾಗಿದೆ ಎಂದು ಪುರಸಭೆ ಪ್ರಕಟಣೆ ಹಾಗೂ ಕರಪತ್ರಗಳನ್ನು ಹಂಚಿತ್ತು.
    ಸಂತೆ ಬದಲಾವಣೆ ಮಾಡುವುದಾದರೆ ಒಂದೆರಡು ತಿಂಗಳು ಮುಂಚೆಯೇ ಮಾಲೀಕರಿಗೆ ಮಾಹಿತಿ ನೀಡಬೇಕು. ಯಾವುದನ್ನು ತಿಳಿಸದೆ ಸಂತೆ ಸ್ಥಳ ಬದಲಾಯಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಸಂತೆ ಜಾಗ ಬದಲಾದರೆ ಜನಸಾಮಾನ್ಯರಿಗೆ ಬಹಳ ತೊಂದರೆಯಾಗಲಿದೆ. ವ್ಯಾಪಾರ ಮಾಡಲು ಆಟೋ ಹತ್ತಿಕೊಂಡು ಸಂತೆಗೆ ಬರಬೇಕಾಗುತ್ತದೆ. ಈಗ ನಡೆಯುತ್ತಿರುವ ಸಂತೆ ನೆಹರು ಸರ್ಕಲ್ ಹಾಗೂ ಸಿವಿಲ್ ಬಸ್ಟಾಂಡ್‍ಗೆ ಹತ್ತಿರವಿದೆ.
    ಜನಸಾಮಾನ್ಯರು ಬಸ್ಸ್ಟಾಂಡ್‍ನಲ್ಲಿ ಇಳಿಯುತ್ತಿದ್ದಂತೆ ಸಂತೆ ಸ್ಥಳಕ್ಕೆ ನಡೆದುಕೊಂಡೆ ಬರಬಹುದು, ಕೂಡಲೇ ತಮ್ಮ ಆದೇಶವನ್ನು ವಾಪಸ್ ಹಿಂಪಡೆಯಬೇಕೆಂದು ಪ್ರತಿಭಟಿಸಿದ ಸಂತೆ ಮಾಲೀಕರು ಆಗ್ರಹಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಎಪಿಎಂಸಿ ಜಾಗದಲ್ಲಿ ಸಂತೆ ಆರಂಭಿಸಿದರೆ ಕೇವಲ 5% ಜನರಿಗೆ ಮಾತ್ರ ಅನುಕೂಲವಾಗುತ್ತದೆ. ಉಳಿದಂತೆ ಶೇ.95% ರಷ್ಟು ಜನರಿಗೆ ಅನಾನುಕೂಲವಾಗುತ್ತದೆ.
    ಸಂತೆ ನಡೆಯುತ್ತಿರುವುದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದರೆ ಭಾನುವಾರ ರಜಾದಿನ ಸಂತೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದ ಅವರು, ಅಧಿಕಾರಿಗಳು ಅಧಿಕಾರದ ಸರ್ವಾಧಿಕಾರ ಮಾಡುತ್ತಿದ್ದಾರೆ. ಸಂತೆ ಬದಲಾವಣೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೇಳಿಲ್ಲ, ಏಕಾಏಕಿ ಈ ಆದೇಶ ಜಾರಿ ಮಾಡಿರುವುದರಿಂದ ಜನರಿಗೆ ತೊಂದರೆಯಾಗಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap