ದಾವಣಗೆರೆ:
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಬಿಎಸ್‍ಎನ್‍ಎಲ್ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಬಿಎಸ್‍ಎನ್‍ಎಲ್ ನೌಕರರು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಿಎಸ್‍ಎನ್‍ಎಲ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
2017ರ ಜನವರಿ 1ರಿಂದ ಅನ್ವಯವಾಗುವಂತೆ ನೂತನ ವೇತನ ಪರಿಷ್ಕರಣೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. 2017ರ ಜನವರಿ 1ರಿಂದ ನೌಕರರ ಪಿಂಚಣಿ ಪರಿಷ್ಕರಣೆಯನ್ನು ಜಾರಿಗೊಳಿಸಬೇಕು. 2ನೇ ವೇತನ ಪರಿಷ್ಕರಣೆಯ ಉಳಿದ ಬೇಡಿಕೆಗಳನ್ನೂ ಈಡೇರಿಸಬೇಕು ಪ್ರತಿಭಟನಕಾರರು ಒತ್ತಾಯಿಸಿದರು.
ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್‍ಗೆ 4ಜಿ ಸ್ಪೆಕ್ಟ್ರಂ ಅನ್ನು ಕೊಟ್ಟು, ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ಲ್ಯಾಂಡ್ ಮ್ಯಾನೇಜ್‍ಮೆಂಟ್ ಪಾಲಿಸಿಯನ್ನು ಶೀಘ್ರವೇ ತೀರ್ಮಾನಿಸಬೇಕು. 2000ರಲ್ಲಿ ತೆಗೆದುಕೊಂಡ ಸಂಪುಟದ ನಿರ್ಧಾರದಂತೆ ಎಲ್ಲಾ ಆಸ್ತಿಯನ್ನೂ ಬಿಎಸ್‍ಎನ್‍ಎಲ್‍ಗೆ ವರ್ಗಾವಣೆ ಮಾಡಬೇಕು. ಬ್ಯಾಂಕ್ ಸಾಲ ಪಡೆಯಲು ಅನುಮತಿ ನೀಡಬೇಕು. ಸಂಸ್ಥೆಯ ಅಭಿವೃದ್ಧಿಗಾಗಿ ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಖಾಲಿ ಇರುವ ನಿರ್ದೇಶಕ ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಟವರ್‍ಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡುವ ನಿರ್ಧಾರವನ್ನು ಕೈಬಿಡಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಈರಣ್ಣ, ವಿಕ್ಟರ್, ಎಸ್. ಗೋಪಾಲನಾಯ್ಕ್, ಕಾಂತರಾಜ್, ಜೋಷಿ ಮತ್ತಿತರರು ಪಾಲ್ಗೊಂಡಿದ್ದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ