ಗುರುವಾರದಿಂದ ವಿಧಾನಮಂಡಲ ಅಧಿವೇಶನ..!

ಬೆಂಗಳೂರು

      ರಾಜ್ಯ ರಾಜಕಾರಣದ ಕ್ಷೋಭೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ ವಿಧಾನಮಂಡಲ ಅಧಿವೇಶನ ಗುರುವಾರದಿಂದ (10) ಆರಂಭವಾಗಲಿದೆ.

    ಆಡಳಿತ ಪಕ್ಷ ಮಾತ್ರವಲ್ಲದೆ ವಿರೋಧ ಪಕ್ಷಗಳು ಆಂತರಿಕ ಕಚ್ಚಾಟದಲ್ಲಿ ಮಗ್ನವಾಗಿರುವ ಸಂದರ್ಭದಲ್ಲೇ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ರಾಜ್ಯದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ಭಾರೀ ಅನಾಹುತವಾಗಿದ್ದು ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂಬ ಕೂಗು ವಿರೋಧ ಪಕ್ಷಗಳಿಂದ ಮಾತ್ರವಲ್ಲ,ಆಡಳಿತ ಪಕ್ಷದ ಸಾಲಿನಿಂದಲೇ ಕೇಳಿ ಬರುವ ಲಕ್ಷಣಗಳು ಕಾಣಿಸುತ್ತಿವೆ.

    ಪ್ರವಾಹದಿಂದಾಗಿ ಮೂವತ್ತೆಂಟು ಸಾವಿರ ಕೋಟಿ ರೂಗಳಷ್ಟು ನಷ್ಟವಾಗಿದೆ ಎಂದು ಈ ಮುನ್ನ ರಾಜ್ಯ ಸರ್ಕಾರ ಕಳಿಸಿದ್ದ ವರದಿ ಸಮರ್ಪಕವಾಗಿಲ್ಲ ಎಂದು ತಿರಸ್ಕರಿಸಿದ ಕೇಂದ್ರ ಸರ್ಕಾರ ಪರಿಹಾರ ಕಾರ್ಯಕ್ಕಾಗಿ ಕೇವಲ 1200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣ ಆಗಿದೆ.

    ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರಕ್ಕೆ ನಂಬಿಕೆ ಇಲ್ಲ.ಹೀಗಾಗಿ ಅದು ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಿದೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.ಈ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನದಲ್ಲೂ ಆ ವಿಷಯ ಕೋಲಾಹಲಕ್ಕೆ ಕಾರಣವಾಗಲಿದ್ದು ಪ್ರತಿಪಕ್ಷಗಳ ಧಾಳಿಗೆ ಆಡಳಿತ ಪಕ್ಷ ನಲುಗುವ ಸಾಧ್ಯತೆ ಇದೆ.
ಇಷ್ಟಾದರೂ ಸಮ್ಮಿಶ್ರ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಬೊಕ್ಕಸ ಖಾಲಿ ಮಾಡಿ ಹೋಗಿತ್ತು ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಈ ವಿಷಯದಲ್ಲೂ ಆಡಳಿತ-ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆಯುವ ಸಾಧ್ಯತೆಗಳಿವೆ.

   ಕೇಂದ್ರ ಸರ್ಕಾರ ರಾಜ್ಯದ ಸಂಕಷ್ಟಕ್ಕೆ ಸಕಾಲದಲ್ಲಿ ಸ್ಪಂದಿಸಲಿಲ್ಲ ಎಂಬ ಕುರಿತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು ಇದು ಪ್ರತಿಪಕ್ಷಗಳ ಪಾಲಿಗೆ ಹರಿತ ಅಸ್ತ್ರವಾಗಲಿದೆ.ಈ ಮಧ್ಯೆ ಕೇಂದ್ರ ಸರ್ಕಾರ ರಾಜ್ಯದ ಪ್ರತಿಪಕ್ಷಗಳ ನಾಯಕರನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕ ಹೆದರಿಸುತ್ತಿದೆ.ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಈ ಹಿನ್ನೆಲೆಯಲ್ಲಿ ಬಗ್ಗು ಬಡಿಯುವ ಯತ್ನ ಮಾಡಿದೆ ಎಂಬ ವಿಷಯ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‍ನಿಂದ ಮಂಡಲನೆಯಾಗುವ ಸಾಧ್ಯತೆ ಹೆಚ್ಚು.

    ಸಮ್ಮಿಶ್ರ ಸರ್ಕಾರ ಪತನದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ದಾರಿಗಳು ಬೇರೆಯಾಗಿದ್ದು ಈ ಅಂಶ ಆಡಳಿತ ಪಕ್ಷದ ಪಾಲಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಮೂಡಿಸಬಹುದಾದರೂ ಒಟ್ಟಾರೆಯಾಗಿ ಉಭಯ ಪಕ್ಷಗಳು ಪ್ರತಿಪಕ್ಷವಾಗಿ ಸರ್ಕಾರದ ವಿರುದ್ಧ ಮುಗಿಬೀಳುವುದಂತೂ ನಿಶ್ಚಿತ.

    ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ 4000 ಕ್ಕೂ ಹೆಚ್ಚು ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಿದ್ದು ಇದರ ಪರಿಣಾಮವಾಗಿ ಇದು ಅಭಿವೃದ್ಧಿ ಪರ ಸರ್ಕಾರವಲ್ಲ,ವರ್ಗಾವಣೆ ಧಂದೆಯ ಸರ್ಕಾರ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುವುದು ಖಚಿತವಾಗಿದೆ.

    ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನ ಕಳೆದರೂ ಆಡಳಿತ ಯಂತ್ರ ಟೇಕ್ ಅಪ್ ಆಗಿಲ್ಲ ಎಂಬ ಕೂಗು ಕೇಳುವುದು ಖಚಿತವಾಗಿದ್ದು ಪ್ರತಿಪಕ್ಷಗಳ ಧಾಳಿಗೆ ಸರ್ಕಾರ ಯಾವ ರೀತಿ ಸಮಜಾಯಿಷಿ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.ಈ ಬಾರಿಯ ವಿಧಾನಮಂಡಲ ಅಧಿವೇಶನವನ್ನು ಮೂರು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದ್ದು ಸಮ್ಮಿಶ್ರ ಸರ್ಕಾರ ಮಂಡಿಸಿದ್ದ ಬಜೆಟ್‍ಗೆ ಅಂಗೀಕಾರ ಪಡೆಯುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

   ಅದೇ ರೀತಿ ನೆರೆ ಪರಿಹಾರ ಕಾರ್ಯಕ್ಕೆ ಅನುಕೂಲವಾಗುವಂತೆ ಸಧ್ಯದ ಬಜೆಟ್ ಜತೆಗೆ ಪೂರಕ ಅಂದಾಜುಗಳ ಬಜೆಟ್ ಮಂಡಿಸುವುದು ಮತ್ತು ವಿಧಾನಮಂಡಲದ ಅಂಗೀಕಾರ ಪಡೆಯುವುದು ಸರ್ಕಾರದ ಉದ್ದೇಶ.ಒಂದು ವೇಳೆ ಬಜೆಟ್‍ಗೆ ಅಂಗೀಕಾರ ದೊರೆಯದಿದ್ದರೆ ಲೇಖಾನುದಾನವನ್ನು ಪುನ: ಎರಡು ತಿಂಗಳ ಲೇಖಾನುದಾನ ಪಡೆಯಲು ಸರ್ಕಾರ ನಿರ್ಧರಿಸಿದ್ದು ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಅಕ್ಟೋಬರ್ 31 ರವರೆಗೆ ಲೇಖಾನುದಾನ ಪಡೆದು ನಿಟ್ಟುಸಿರು ಬಿಟ್ಟಿತ್ತು.

   ಇಂತಹ ಹಲ ಅಂಶಗಳು ಅಕ್ಟೋಬರ್ 10 ರ ಗುರುವಾರದಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದ ಬಗ್ಗೆ ಕುತೂಹಲ ಮೂಡಿಸಿರುವುದು ಸ್ಟಷ್ಟ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link