ವಿದ್ಯಾವಂತರಿಂದಲೇ ಹೆಚ್ಚು ಅನಾಹುತ: ವಿಷಾದ

ದಾವಣಗೆರೆ:

  ಇತ್ತೀಚಿನ ದಿನಗಳಲ್ಲಿ ಅನಕ್ಷರಸ್ಥರಿಗಿಂತಲೂ ವಿದ್ಯಾವಂತರಿಂದಲೇ ಹೆಚ್ಚಿನ ಅನಾಹುತ ಸಂಭವಿಸುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ ಎಂದು ದೇವಾಂಗ ಹಾಸ್ಟೆಲ್ ಸಂಘದ ಅಧ್ಯಕ್ಷ ಡಾ.ಎಂ.ಟಿ.ದೇವೇಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

   ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನಗರ ದೇವಾಂಗ ಸಂಘದಿಂದ ಹಮ್ಮಿಕೊಂಡಿದ್ದ 2ನೇ ವರ್ಷದ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನೇಕಾರ ವಧು-ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಅನಕ್ಷರಸ್ಥರಿಗಿಂತ ಬಹಳ ಬುದ್ಧಿವಂತರು, ತುಂಬಾ ಓದಿದವರೇ ಸಮಾಜಕ್ಕೆ ಹೆಚ್ಚಿನ ಹಾನಿ ಮಾಡುತ್ತಿದ್ದಾರೆ. ಆದ್ದರಿಂದ ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಆಚಾರ-ವಿಚಾರ ಕಲಿಸಬೇಕೆಂದು ಸಲಹೆ ನೀಡಿದರು.

  ವಿದ್ಯಾರ್ಥಿ ಜೀವನವು ಬಂಗಾರದ ಜೀವನವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್, ವಾಟ್ಸಾಪ್, ಫೇಸ್‍ಬುಕ್‍ಗಳಿಗೆ ಒತ್ತು ನೀಡದೇ, ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹ ನೀಡಿದ ಅವರು, ಬಡತನದ ಕಾರಣದಿಂದ ವಿದ್ಯಾಭ್ಯಾಸ ಮುಂದುವರೆಸಲಾಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು ಎಂದರು.

   ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಡಾ.ಎಸ್.ರಂಗನಾಥ ಮಾತನಾಡಿ, ನಮ್ಮ ಸಮಾಜದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಿದ್ದಾರೆ. ಆದರೆ ನೀಟ್, ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಮಾಡುತ್ತಿಲ್ಲ. ಇನ್ನೂ ಮುಂದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ರ್ಯಾಂಕ್ ಗಳಿಸುವತ್ತ ಗಮನ ಹರಿಸಬೇಕು. ಸಮಾಜದಿಂದ ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್ ಆರಂಭಿಸುವ ಉದ್ದೇಶವಿದೆ. ಅಲ್ಲದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಮಾಜದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಸೇರಿದಂತೆ ಅನೇಕ ಸೌಲಭ್ಯಗಳಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

    ಸಸ್ತಾಪುರ ಮಹಾಸಂಸ್ಥಾನ ಮಠದ ಡಾ.ಈಶ್ವರಾನಂದ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 45ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.

    ಅಧ್ಯಕ್ಷತೆಯನ್ನು ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಡಿಐಜಿ ಜಿ.ರಮೇಶ ವಹಿಸಿದ್ದರು. ವೇದಿಕೆಯಲ್ಲಿ ನಗರ ದೇವಾಂಗ ಸಂಘದ ಕೆ.ವೆಂಕಟೇಶ, ಜಿ.ಆರ್.ಕುಮಾರ, ರಂಗನಾಥ, ಟಿ.ಅಜ್ಜೇಶಿ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link