ಬೋರ್ ವೆಲ್ ನೀರು ಅಕ್ರಮ ಮಾರಾಟ : ಗ್ರಾಮಸ್ಥರಿಂದ ಪ್ರತಿಭಟನೆ

ಗುಬ್ಬಿ

    ಕಳೆದೆರಡು ವರ್ಷದಿಂದ ನಿರಂತರವಾಗಿ ಬೋರ್‍ವೆಲ್ ಮೂಲಕ ನೀರು ಮಾರಾಟ ಮಾಡುತ್ತಿರುವ ಪ್ರಭಾವಿ ವ್ಯಕ್ತಿಯ ಪರ ಬ್ಯಾಟಿಂಗ್ ಮಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪರವಾನಗಿ ನೀಡಲು ಮುಂದಾದ ಕ್ರಮವನ್ನು ವಿರೋಧಿಸಿದ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದ ಸಂದರ್ಭದಲ್ಲಿ ಕೆಲ ಸದಸ್ಯರು ಸಾರ್ವಜನಿಕ ಪರ ನಿಂತು ಸಭೆಯನ್ನು ಬಹಿಷ್ಕರಿಸಿ ಧರಣಿಗೆ ಬೆಂಬಲ ನೀಡಿದ ಘಟನೆ ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ನಡೆಯಿತು.

   ಹೆದ್ದಾರಿ 206 ರ ಬದಿಯಲ್ಲೇ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಪನಹಳ್ಳಿ ಸರ್ವೆ ನಂಬರ್ 25/5 ರಲ್ಲಿ ಎರಡು ಬೋರ್‍ವೆಲ್ ಕೊರೆಸಿ ನೀರನ್ನು ಕೃಷಿಗೆ ಬಳಸಿಕೊಳ್ಳದೇ ದಿನದ 24 ಗಂಟೆಗಳ ಕಾಲ ನಿರಾತಂಕವಾಗಿ ನೀರನ್ನು ಟ್ಯಾಂಕರ್‍ಗಳು ಹಾಗೂ ಕ್ಯಾಂಟರ್‍ಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯ ರೈತರು ತೀವ್ರ ಅಸಮಾಧಾನ ಹೊರಹಾಕಿದರು.

   ಸುತ್ತಲಿನ ನಾಲ್ಕು ಗ್ರಾಮಗಳ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತಿಹೋಗುತ್ತಿದ್ದು, ಈ ಎರಡು ಬೋರ್‍ವೆಲ್‍ಗಳಲ್ಲಿ ನಿರಾಯಾಸವಾಗಿ ನೀರನ್ನು ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಆಧುನಿಕ ಜನರೇಟ್ ಅಳವಡಿಸಿಕೊಂಡು ನಿಮಿಷಕ್ಕೆ ಟ್ಯಾಂಕರ್‍ವೊಂದು ಭರ್ತಿ ಮಾಡುವ ಮಟ್ಟಕ್ಕೆ ನೀರು ತುಂಬಿಸಲಾಗುತ್ತಿದೆ. ಇದರಿಂದ ನೀರಿನ ಕೊರತೆ ರೈತರಿಗೆ ಕಾಡಿದೆ, ಕೃಷಿ ನಡೆಸಲು ಸಾಧ್ಯವಾಗದೇ ಪರದಾಡುವಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

   ಗ್ರಾಪಂ ಸದಸ್ಯೆ ಪಾಲಾಕ್ಷಮ್ಮ ಮಾತನಾಡಿ ಈ ಬೋರ್‍ವೆಲ್ ಬಗ್ಗೆ ದೂರು ನೀಡಲಾಗಿ ತಹಸೀಲ್ದಾರ್ ನೀರು ಮಾರಾಟದ ದಂಧೆ ನಿಲ್ಲಿಸಿದ್ದರು. ನಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬಳಿಕ ಸ್ವಂತದ ಜನರೇಟರ್ ಬಳಿಸಿಕೊಂಡು ನೀರು ನಿರಂತರವಾಗಿ ಮಾರಾಟ ಮಾಡುತ್ತಿದ್ದಾರೆ. ಸುತ್ತಲಿನ ಕೃಷಿಕರ ಬೋರ್‍ವೆಲ್‍ನಲ್ಲಿ ನೀರು ಇಲ್ಲವಾಗಿ ಕೃಷಿ ನಡೆಸಲಾಗದೇ ಪರದಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕಾನೂನು ಕ್ರಮವಹಿಸಿ ಬೋರ್‍ವೆಲ್ ನಿಲ್ಲಿಸಬೇಕು. ಜನರೇಟರ್ ಅಲ್ಲಿಂದ ತಗೆಯಿಸಿ ಮಾರಾಟ ದಂಧೆಗೆ ಬ್ರೇಕ್ ಹಾಕಲು ಪಿಡಿಒಗೆ ಆಗ್ರಹಿಸಿದರು.

   ಗ್ರಾಪಂ ಸದಸ್ಯ ರಾಜಣ್ಣ ಮಾತನಾಡಿ ರಾಜಕೀಯ ಒತ್ತಡ ತರುವ ಜತೆಗೆ ಇಡೀ ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾದ ಪ್ರಭಾವಿ ವ್ಯಕ್ತಿ ನೂರಾರು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿರುವ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಒತ್ತಡ ಹೇರುವ ಜತೆಗೆ ಸದಸ್ಯರಿಗೆ ಅಮೀಷ ತೋರಲು ಮುಂದಾದ ಬಗ್ಗೆ ತಿಳಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.

   ಈ ಬೋರ್‍ವೆಲ್‍ಗಳು ಹೆದ್ದಾರಿ ರಸ್ತೆ ಕಾಮಗಾರಿ ಸೇರಿದಂತೆ ಹಲವು ಕೆಲಸ ಕಾರ್ಯಗಳಿಗೆ ನಿರಂತರವಾಗಿ ನೀರು ಒದಗಿಸುವ ಕೆಲಸ ನಡೆದಿದೆ. ಕಮರ್ಷಿಯಲ್ ಉಪಯೋಗಕ್ಕೆ ಬೋರ್‍ವೆಲ್ ನಡೆಸಲು ಎರಡು ವರ್ಷದಿಂದ ಯಾವುದೇ ಪರವಾನಗಿ ನೀಡಿರಲಿಲ್ಲ. ಈ ಬಗ್ಗೆ ಕ್ರಮವಹಿಸಬೇಕು. ದಿಢೀರ್ ಅಜಂಡಾ ಸಭೆಗೆ ಬಂದಿದ್ದು, ನೀರು ಮಾರಾಟಕ್ಕೆ ಅನುಮತಿ ನೀಡದಂತೆ ಕೆಲ ಸದಸ್ಯರ ಆಗ್ರಹವಿದೆ. ಇಲ್ಲಿ ಒತ್ತಡ ಹೇರುವ ಕೆಲಸ ನಡೆದಿದೆ. ಈ ಬಗ್ಗೆ ತಾಲ್ಲೂಕು ಆಡಳಿತ ಸೂಕ್ತ ತನಿಖೆ ನಡೆಸಬೇಕು. ಕೃಷಿಕ ವರ್ಗಕ್ಕೆ ತೊಂದರೆ ಕೊಟ್ಟು ನೀರು ಅಕ್ರಮವಾಗಿ ಮಾರಾಟ ಮಾಡಿ ಲಕ್ಷಾಂತರ ದುಡಿಮೆಗೆ ನಿಂತ ವ್ಯಕ್ತಿ ಬಗ್ಗೆ ಕ್ರಮವಹಿಸಲು ಸದಸ್ಯ ಶಿವಶಂಕರ್ ಒತ್ತಾಯಿಸಿದರು.

   ಸುಮಾರು 4 ತಾಸು ನಡೆದ ಪ್ರತಿಭಟನೆಯು ನಡೆಯಬೇಕಿದ್ದ ಗ್ರಾಪಂ ಸಾಮಾನ್ಯಸಭೆ ರದ್ದು ಪಡಿಸಿತು. ಜನರೇಟರ್ ಮೂಲಕ ನೀರು ಮಾರಾಟ ದಂಧೆಗೆ ಕಡಿವಾಣ ಹಾಕಲು ಪಿಡಿಒ ಗುರುಮೂರ್ತಿ ಅವರಿಗೆ ಆಗ್ರಹಿಸಿದರು. ಈ ಮಧ್ಯೆ ಆಗಮಿಸಿದ ಎಪಿಎಂಸಿ ಸದಸ್ಯ ಎಚ್.ಸಿ.ಪ್ರಭಾಕರ್ ಧರಣಿನಿರತರೊಂದಿಗೆ ಸಂಧಾನಕ್ಕೆ ಮುಂದಾದರು. ಲಿಖಿತ ರೂಪದಲ್ಲಿ ಭರವಸೆಗೆ ರೈತರು ಆಗ್ರಹಿಸಿದರು .

   ತಕ್ಷಣ ಅಧ್ಯಕ್ಷೆ ಹಾಗೂ ಕೆಲ ಸದಸ್ಯರು ಕಚೇರಿಯಿಂದ ಹೊರನಡೆದರು. ಮತ್ತಷ್ಟು ಆಕ್ರೋಶಗೊಂಡ ರೈತರು ಲಿಖಿತ ಭರವಸೆಗೆ ಆಗ್ರಹಿಸಿ ಪಿಡಿಒ ಅವರಿಂದ ಪತ್ರ ಪಡೆದು ನಂತರ ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಸಿದ್ದೇಶ್, ಮಂಜುನಾಥ್. ಶಿವಾನಂದ್, ಮೂಡ್ಲಗಿರಯ್ಯ, ಪುಷ್ಪರಾಜು, ಚನ್ನನಂಜಪ್ಪ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link