ಹೊಸಪೇಟೆ
ನಗರದ ಸಹಕಾರಿ ಗೃಹ ನಿರ್ಮಾಣ ಮೈದಾನದಲ್ಲಿ ಫೆ.1ರಿಂದ 3ರ ವರೆಗೆ ಹೊಸಪೇಟೆ ಪತಂಜಲಿ ಯೋಗ ಸಮಿತಿಯ ದಶಮಾನೋತ್ಸವ ಸಮಾರಂಭ ಅಂಗವಾಗಿ ಬೃಹತ್ ವಿರಾಟ ಯೋಗ ಶಿಬಿರ ಆಯೋಜಿಸಲಾಗಿದೆ ಎಂದು ಸಮಿತಿಯ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.
ಇಲ್ಲಿನ ಪತಂಜಲಿ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್, ಮಹಿಳಾ ಪತಂಜಲಿ ಯೋಗ ಸಮಿತಿ ಸಂಯುಕ್ತಾಶ್ರಯದಲ್ಲಿ ಬರುವ ಫೆ.1ರಿಂದ 3ರ ವರೆಗೆ ಬೆಳಿಗ್ಗೆ 5.30ರಿಂದ 7ರ ವರೆಗೆ ಬೃಹತ್ ವಿರಾಟ್ ಯೋಗ ಶಿಬಿರ ನಡೆಯಲಿದ್ದು, ಇದರ ದಿವ್ಯ ಸಾನಿಧ್ಯವನ್ನು ಹಂಸಾಂಬ ಶಾರದಾಶ್ರಮದ ಪ್ರಭೋದಾಬಾಯಿ, ಶ್ರೀ ಸುಮೇದಾನಂದ ಮಹಾರಾಜ, ಶ್ರೀ ಶಿವಪ್ರಕಾಶಾನಂದ ಸ್ವಾಮೀಜಿಯವರು ವಹಿಸಲಿದ್ದಾರೆ ಎಂದರು.
ಫೆ.2ರಂದು ಬೆಳಿಗ್ಗೆ 9ಕ್ಕೆ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ರೈತ ಸಮಾವೇಶ ನಡೆಯಲಿದೆ. ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗೊಪ್ಪ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪತಂಜಲಿ ಕಿಸಾನ್ ಸೇವಾ ಸಮಿತಿಯ ಸಂಜಯ ಕುಸ್ತಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.3ರಂದು ಸಂಜೆ 5ಕ್ಕೆ ಸಹಕಾರಿ ಕಲ್ಯಾಂ ಮಂಟಪದಲ್ಲಿ ದಶಮಾನೋತ್ಸವ ಸಮಾರಂಭ ನಡೆಯಲಿದ್ದು, ಯೋಗ ವಿಜಯ, ನೆನಪಿನ ಸಂಪುಟ ಬಿಡುಗಡೆ ಮಾಡಲಾಗುವುದು. ಹರಿದ್ವಾರ ಯೋಗ ಪೀಠದ ಕೇಂದ್ರೀಯ ಪ್ರಭಾರಿ ಡಾ.ಜಯದೀಪ ಆರ್ಯ ಉದ್ಘಾಟಿಸಲಿದ್ದಾರೆ. ನೆನಪಿನ ಸಂಪುಟವನ್ನು ಬೀದರ್ ಲೋಕಸಭಾ ಸದಸ್ಯ ಭಗವಂತ ಖೂಬಾ ಬಿಡುಗಡೆ ಮಾಡಲಿದ್ದಾರೆ. ಮಹಿಳಾ ಸಮಿತಿ ರಾಜ್ಯ ಪ್ರಭಾರಿ ದ್ರಾಕ್ಷಾಯಣಿ ಶಿವಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.