ಕೊರಟಗೆರೆ
ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಐದು ವರ್ಷ ಸುಭದ್ರವಾಗಿ ಇರಲಿದೆ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಿಂದ ಸರಕಾರ ಬೀಳಿಸುವ ಕುತಂತ್ರ ರಾಜಕಾರಣ ನಡೆಯುತ್ತಿದೆ. ರಾಜ್ಯದ ಜನರು ರಾಜಕೀಯ ವಿದ್ಯಮಾನವನ್ನು ಅತಿಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ತಾಲ್ಲೂಕಿನ ಕೋಳಾಲ ಹೋಬಳಿ ಭೈರಗೊಂಡ್ಲು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಪಿತೂರಿಯ ಮೂಲಕ ಸರಕಾರ ಬೀಳಿಸುವ ಕುತಂತ್ರ ನಡೆಯುತ್ತಿದೆ. ದೇವರ ಮತ್ತು ಜನರ ಆಶೀರ್ವಾದದಿಂದ ಸರಕಾರಕ್ಕೆ ಯಾವುದೇ ಅಪಾಯವಿಲ್ಲದೆ ಸಾಗುತ್ತಿದೆ. ಜನರ ಆಶೀರ್ವಾದದಿಂದ ನಾವು ಸರಕಾರ ನಡೆಸುತ್ತಿದ್ದೇವೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಅಧಿಕಾರ ಪಡೆಯುವ ಉದ್ದೇಶದಿಂದ ಜನರ ತೀರ್ಪನ್ನು ಕಸಿಯುವ ಪ್ರಯತ್ನವನ್ನು ವಿರೋಧ ಪಕ್ಷದ ನಾಯಕರು ನಿಲ್ಲಿಸಬೇಕು ಎಂದು ಹೇಳಿದರು.
ಬಯಲು ಸೀಮೆಯ ರೈತರಿಗೆ ನೀರಿನ ಬವಣೆ ನೀಗಿಸುವ ಸಲುವಾಗಿ ಎತ್ತಿನಹೊಳೆ ಯೋಜನೆ ರೂಪಿಸಲಾಯಿತು. ಮೊದಲ ಹಂತದ ಅನುದಾನ ಬಿಡುಗಡೆಗೊಳಿಸಿ, ಕಾಮಗಾರಿ ನಡೆಯುತ್ತಿದೆ. 13 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣ ಆಗಲಿದೆ. ಬಫರ್ ಡ್ಯಾಂನಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಾನವಾದ ಪರಿಹಾರದ ಹಣವನ್ನು ಕೊಡಿಸುತ್ತೇನೆ. ರೈತರು ಹೆದರಿಕೆ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ನನ್ನ ಕ್ಷೇತ್ರದ ತೋವಿನಕೆರೆ ಗ್ರಾಮದಲ್ಲಿ ಮಳೆಯಾದರೆ ಕೋಳಾಲ ಹೋಬಳಿಯಲ್ಲಿ ಮಳೆಯೆ ಬಿದ್ದಿರುವುದಿಲ್ಲ. ಆದರೂ ಕೊರಟಗೆರೆ ಕ್ಷೇತ್ರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿಅಂಶ ನೀಡಿರುವುದು ಯಾವ ಆಧಾರದ ಮೇಲೆ ಎಂಬುದು ಇನ್ನೂ ನನಗೆ ತಿಳಿಯದಾಗಿದೆ. ಅಧಿಕಾರಿ ವರ್ಗ ಹೋಬಳಿವಾರು ಮಳೆ ಪ್ರಮಾಣದ ಅಂಕಿಅಂಶ ಒದಗಿಸಿ ಎಂದು ಸೂಚಿಸಿದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಅನುಕೂಲ ಆಗುವಂತಹ ಬದು ನಿರ್ಮಾಣ, ಕೃಷಿಹೊಂಡಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಕೃಷಿ ಅಧಿಕಾರಿ ವರ್ಗ ರೈತರ ಜಮೀನಿಗೆ ಭೇಟಿ ನೀಡಿ ಅವರ ಸಮಸ್ಯೆಯನ್ನು ಆಲಿಸುವ ಪ್ರಯತ್ನ ಮಾಡಿ. ಕೃಷಿ ಇಲಾಖೆಯಿಂದ ರೈತರಿಗೆ ಸಿಗುವಂತಹ ಪ್ರತಿಯೊಂದು ಸೌಲಭ್ಯವನ್ನು ಒದಗಿಸುವ ಮೂಲಕ ರೈತರ ಅಭಿವೃದ್ದಿಗೆ ನೆರವು ಆಗಬೇಕು ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‍ಕುಮಾರ್ ಪಾಟೀಲ್, ತುಮಕೂರು ಜಿಲ್ಲಾ ಅಧ್ಯಕ್ಷ ರಾಮಕೃಷ್ಣ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆಶಂಕರ್, ಪಪಂಸದಸ್ಯ ಓಬಳರಾಜು, ತಾಪಂ ಮಾಜಿ ಅಧ್ಯಕ್ಷ ಕೆಂಪಣ್ಣ, ಮುಖಂಡರಾದ ವೆಂಕಟೇಶ್ ಮಂಜುನಾಥ್, ಚಂದ್ರಪ್ಪ, ಪುರುಷೋತ್ತಮ್, ಅರಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








