ತುರುವೇಕೆರೆ
ಆಕಸ್ಮಿಕ ಬೆಂಕಿ ಅನಾಹುತದಿಂದ ಸುಮಾರು 16 ಕ್ಕೂ ಹೆಚ್ಚು ಹುಲ್ಲಿನ ಬಣವೆ ಸುಟ್ಟುಹೋಗಿದ್ದ ತಾಲೂಕಿನ ಸಂಗಲಾಪುರ ಗ್ರಾಮಕ್ಕೆ ಶಾಸಕ ಮಸಾಲ ಜಯರಾಮ್ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ರೈತರಿಗೆ ಸಾಂತ್ವಾನ ಹೇಳಿದರು.
ಸಂಕಷ್ಟಕ್ಕೊಳಗಾದ ರೈತರನ್ನು ಕುರಿತು ಶಾಸಕ ಮಸಾಲ ಜಯರಾಮ್ ಮಾತನಾಡಿ, ಸಂಗಲಾಪುರ ಗ್ರಾಮದಲ್ಲಿ ನಿಗೂಢವಾಗಿ ಸುಮಾರು 16 ಕ್ಕೂ ಹೆಚ್ಚು ಹುಲ್ಲಿನ ಬಣವೆಗಳು ಸುಟ್ಟು ಹೋಗಿದ್ದು ನೋವು ತರವಂತಹ ವಿಷಯವಾಗಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು ಪತ್ತೆಹಚ್ಚಲು ಕಾರ್ಡ್‍ಲೆಸ್ ಸ್ಪೈ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ಬರಗಾಲ ಬೇಸಿಗೆಯಲ್ಲಿ ಮೇವು ಕಳೆದುಕೊಂಡ ರೈತರು ತಮ್ಮ ರಾಸುಗಳನ್ನು ಸಾಕುವುದು ಬಳ ಕಷ್ಟಕರವಾಗಿದೆ ಎಂಬುದು ಅರಿವಿದೆ ಎಂದರು.
ಸ್ಥಳದಲ್ಲಿದ್ದ ತಹಶೀಲ್ದಾರ್ ನಯೀಂ ಉನ್ನಿಸಾ ಅವರೊಂದಿಗೆ ಮಾತನಾಡಿ, ತುರುವೇಕೆರೆ ತಾಲೂಕು ಬರಗಾಲ ಪಟ್ಟಿಯಲ್ಲಿದ್ದು ಸರಕಾರದಿಂದ ನೀಡುವ ಮೇವು ಬ್ಯಾಂಕ್‍ನಲ್ಲಿ ಬೆಂಕಿಯಿಂದ ನಷ್ಟ ಹೊಂದಿರುವ ರೈತರಿಗೆ ಹೆಚ್ಚಿನ ಮೇವು ನೀಡುವಂತಹ ಯೋಜನೆ ಇದ್ದರೆ ತಕ್ಷಣವೆ ವ್ಯವಸ್ಥೆ ಮಾಡಿ ಹಾಗೂ ಕೂಡಲೇ ರೈತರ ಪಟ್ಟಿ ಮಾಡಿ ಮೇವು ಬೆಳೆದು ಕೊಳ್ಳಲು ಪಶು ಇಲಾಖೆಯಿಂದ ಮೇವು ಜೋಳದ ಕಿಟ್ ನೀಡುವಂತೆ ಪಶು ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿ ಎಂದು ತಿಳಿಸಿದರು.
ನಂತರ ಗ್ರಾಮದಲ್ಲಿನ ಚನ್ನಕೇಶವ ದೇವಸ್ಥಾನ ನಿರ್ಮಾಣಕ್ಕೆ 5 ಲಕ್ಷ ಅನುಧಾನ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಯಿಂ ಉನ್ನಿಸಾ, ಸಿಪಿಐ ಸಲೀಂ ಅಹಮದ್, ಪಿಎಸ್.ಐ ರಾಜು ಮುಖಂಡರಾದ ವಂಕಟರಾಮಯ್ಯ, ರಾಜು, ಸೋಮಶೇಖರ್, ಮಂಜಣ್ಣ, ಮೈನ್ಸ್‍ರಾಜು, ಚಿದಾನಂದ್, ಹನುಮಂತೇಗೌಡ, ಮಿತುನ್, ರಾಜೇಶ್, ಜಯಂತ್, ನಂಜುಂಡಪ್ಪ, ರಾಜಣ್ಣ, ಶಿವನಂಜಯ್ಯ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
