ಹೊಸದುರ್ಗ:
ಸಂಸ್ಕಾರಯುತ ವಿವೇಕ ಪಡೆದ ವ್ಯಕ್ತಿ ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ತಾಲೂಕಿನ ಕೆಲ್ಲೋಡು ಕನಕ ಗುರುಪೀಠದಲ್ಲಿ ಶುಕ್ರವಾರ ರಾತ್ರಿ ನಡೆದ ಕನಕ ಹುಣ್ಣಿಮೆ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿದರು.ಪ್ರಕೃತಿಯಲ್ಲಿ ಅತ್ಯಂತ ಪವಿತ್ರವಾದ ಮಾನವ ಜನ್ಮವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜೀವನ ನಡೆಸಬೇಕಿದೆ. ಸಮಾಜದಲ್ಲಿ ಅಧರ್ಮದಿಂದ ವರ್ತನೆ ಮಾಡಿದರೇ ನಮ್ಮ ಭವಿಷ್ಯಕ್ಕೆ ನಾವೇ ಅಂತ್ಯ ಹಾಡಿಕೊಂಡತ್ತಾಗವುದು ಖಚಿತ. ಸಮಾಜದಲ್ಲಿ ಜಾತಿ, ಧರ್ಮಗಳ ಆಧಾರದ ಮೇಲೆ ಜಗಳವಾಡುವುದು ಯಾರಿಗೂ ಶೋಭೆ ತರುವುದಿಲ್ಲ. ದ್ಷೇಷ, ಅಸೂಯೆ ಮರೆತು ಸಹಬಾಳ್ವೆಯಿಂದ ಬದುಕಬೇಕಿದೆ. ಎಲ್ಲರೊಂದಿಗೆ ಪ್ರೀತಿ ಹಂಚುತ್ತಾ ವಿಶ್ವಾಸ, ನೆಮ್ಮದಿ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕಿದೆ ಎಂದರು.
ಮಾನವ ಮಹದೇವನಾಗಬೇಕು. ಮಾನವನ ದೇಹ ಗಲಿಜಾದರೇ ಸಾಬೂನಿನಿಂದ ತೊಳೆದುಕೊಳ್ಳಬಹುದು. ಆದರೇ, ಮನಸ್ಸಿನ ಮಲಿನವನ್ನು ತೊಳೆಯಲು ಆಧ್ಯಾತ್ಮವೆಂಬ ದಿವ್ಯೌಷಯ ಅಗತ್ಯವಿದೆ. ಧ್ಯಾನ, ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಚಂಚಲ ಮನಸ್ಸಿನ ಭಾವನೆಗಳಿಂದ ಹೊರಬಂದು ನಿರ್ಮಲವಾದ ಮನಸ್ಸನ್ನು ಹೊಂದಬಹುದಾಗಿದೆ. ಇಂದು ಮಹಿಳೆಯರಿಗೆ ಧಾರಾವಾಹಿಗಳೇ ಕೇಂದ್ರಬಿಂದುಗಳಾಗಿವೆ.
ಏಳೆಂಟು ವರ್ಷಗಳ ಕಾಲ ಪ್ರಸಾರವಾದ ಕಾದಂಬರಿ ಎಂಬ ಧಾರಾವಾಹಿಯನ್ನು ಮಹಿಳೆಯರು ಇಂದಿಗೂ ಸ್ಮರಿಸುತ್ತಾರೆ. ಧಾರಾವಾಹಿಗಳಿಂಗಿಂತ ದೈವ ಭಕ್ತಿ ಹಾಗೂ ಆಧ್ಯಾತ್ಮವನ್ನು ಮೈಗೂಡಿಸುವಂತಹ ಭಜನೆಯ ಕಡೆ ಮನಸ್ಸು ಕೇಂದ್ರಿಕೃತರಾಗಬೇಕು. ಮನೆಯಲ್ಲಿ ಅತ್ತೆ, ಸೊಸೆ ತನ್ನ ಜವಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೇ, ಇಬ್ಬರೂ ಹೊಂದಾಣಿಕೆಯಿಂದ ನಡೆಸಿಕೊಂಡರೇ ಸಂಸಾರ ಸುಗುಮವಾಗಿರುತ್ತದೆ ಎಂದರು.
ತಾಲೂಕಿನ ಓಬಳಾಪುರ ಗ್ರಾಮದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಹುಣ್ಣಿಮೆ ಅಂಗವಾಗಿ ಮಠದ ಆವರಣದಲ್ಲಿರುವ ಶ್ರೀ ಮಹಾಲಕ್ಷ್ಮೀಯನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಭಜನಾ ಕಾರ್ಯಕ್ರಮ ಮುಗಿದ ನಂತರ ಶ್ರೀ ಮಹಾಲಕ್ಷ್ಮೀಯ ಪೂಜಾ ಕಾರ್ಯಗಳು ನೇರವೇರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
