ಮತದಾನ ಜಾಗೃತಿಗೆ ಮ್ಯಾರಥಾನ್ ಓಟ

ಚಿತ್ರದುರ್ಗ:
       ಇದೇ ತಿಂಗಳ ಹದಿನೆಂಟರಂದು ನಡೆಯಲಿರುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಏ.14 ರಂದು ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರಿಂದ ಮ್ಯಾರಥಾನ್ ಓಟ ಮತ್ತು ಮಾನವ ಸರಪಳಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಹಾಗೂ ಜಿಲ್ಲಾ ಸ್ವೀಪ್ ಸಮತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ತಿಳಿಸಿದರು.
          ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮತದಾನದ ಮೇಲೆ ದೇಶದ ಭವಿಷ್ಯ ನಿಂತಿರುವುದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮ್ಯಾರಥಾನ್ ಓಟ ಹಾಗೂ ಮಾನವ ಸರಪಳಿ ಹಮ್ಮಿಕೊಂಡಿದ್ದು, ಇಲ್ಲಿಯವರೆಗೂ ಎಲ್ಲಾ ಚುನಾವಣೆಗಳಲ್ಲಿ ಶೇ.60 ರಿಂದ ಎಪ್ಪತ್ತರಷ್ಟು ಮತದಾನವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಶೇ.ನೂರಕ್ಕೆ ನೂರರಷ್ಟು ಮತದಾನವಾಗಬೇಕು.
      ಅದಕ್ಕಾಗಿ ಜನತೆಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.ಸರ್ಕಾರಿ ನೌಕರರ ಸಂಘದಿಂದ ಅಂದು ಬೆಳಿಗ್ಗೆ 7 ಗಂಟೆಗೆ ಹೊರಡುವ ಮ್ಯಾರಥಾನ್ ಓಟ ರಂಗಯ್ಯನಬಾಗಿಲು, ಉಚ್ಚಂಗಿಯಲ್ಲಮ್ಮ ದೇವಸ್ಥಾನ ಮುಂಭಾಗದ ಮೂಲಕ ಆನೆಬಾಗಿಲು, ಮಹಾತ್ಮಗಾಂಧಿ ವೃತ್ತ, ಸಂತೇಹೊಂಡ ರಸ್ತೆ, ಪ್ರಸನ್ನ ಟಾಕೀಸ್ ರಸ್ತೆ, ಗೋಪಾಲಪುರ ರಸ್ತೆ, ಜೆ.ಸಿ.ಆರ್.ಮೂಲಕ ಜಿಲ್ಲಾಧಿಕಾರಿ ಕಚೇರಿ ವೃತ್ತಕ್ಕೆ ತಲುಪಿ ಮಾನವ ಸರಪಳಿ ಮೂಲಕ ಸಾರ್ವಜನಿಕರಲ್ಲಿ ಮತದಾನ ಕುರಿತು ಅರಿವು ಮೂಡಿಸಲಾಗುವುದು. ಸರ್ಕಾರಿ ನೌಕರರು ಹಾಗೂ ಪ್ರಥಮ ಬಾರಿಗೆ ಮತಚಲಾಯಿಸುವ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳುವಂತೆ ಕೆ.ಜಿ.ಜಗದೀಶ್ ಮನವಿ ಮಾಡಿದರು.
       
       ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ರವಿಕುಮಾರ್, ಗೌರವಾಧ್ಯಕ್ಷ ಡಿ.ಎಂ.ಸಿದ್ದೇಶ್ವರ, ಉಪಾಧ್ಯಕ್ಷ ಎಸ್.ಶಿವಮೂರ್ತಿ, ಎನ್.ಸುಧಾ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link