ಹಾನಗಲ್ಲ :
ಹಬ್ಬದ ಹರ್ಷದಂತೆ ಚುನಾವಣೆಗಳನ್ನು ಮತದಾನದ ಮೂಲಕ ಸಂಭ್ರಮಿಸಿದರೆ ದೇಶದ ಹಿತ ಕಾಯುವ ನಾಯಕರನ್ನು ಆಯ್ಕೆ ಮಾಡಿದಂತಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಬಿ.ಮಹಾಜನ ತಿಳಿಸಿದರು.
ಮಂಗಳವಾರ ಹಾನಗಲ್ಲಿನ ಕಲ್ಲಹಕ್ಕಲ ಕಮಾಟಗೇರಿ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿ, ಕವಿವೃಕ್ಷ ಬಳಗದ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿದ ಮತದಾನ ಜಾಗೃತಿ ಹಾಗೂ ಕಾವ್ಯ ಸ್ಪಂದನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮತದಾನ ನಮ್ಮ ಹಕ್ಕು ಹಾಗೂ ಜವಾಬ್ದಾರಿಯೂ ಆಗಿದೆ. ಇದರಿಂದ ವಿಮುಖರಾಗಬಾಎದು. ನಮ್ಮ ಪ್ರಜಾಪ್ರತಿನಿಧಿಗಳ ಆಯ್ಕೆಗೆ ನಮ್ಮ ಮತವೇ ಇಲ್ಲದಿದ್ದರೆ ಐದು ವರ್ಷಗಳ ಕಾಲ ನಾವು ವಂಚಿತರಾದಂತೆ. ನಾನು ಹಾಗೂ ನನ್ನ ಪರಿಸರದ ಎಲ್ಲರೂ ಮತದಾನ ಮಾಡುವಂತೆ ಜಾಗೃತಿ ವಹಿಸಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ದೇಶದ ಆರೋಗ್ಯಕ್ಕೆ ಉತ್ತಮ ನಾಯಕನ ಆಯ್ಕೆಯಾಗಬೇಕು. ಉತ್ತಮ ನಾಯಕನ ಆಯ್ಕೆಗೆ ಉತ್ತಮ ಮನಸ್ಸಿನಿಂದ ಪ್ರತಿಯೊಬ್ಬರು ಮತದಾನ ಮಾಡುವಂತಾಗಬೇಕು. ಆರೋಗ್ಯವಂತ ಸಮಾಜ, ದೇಶಕ್ಕಾಗಿ ಆರೋಗ್ಯವಂತ ಮನಸ್ಸಿನ ಮತದಾನ ಬೇಕು. ಇದು ಎಲ್ಲರ ಅರಿವಿಗೆ ಬಂದು ಕಾರ್ಯಸಾಧುವಾದರೆ ಉತ್ತಮ ದೇಶ ಕಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಬಿ.ಉಪಾಸಿ, ಮತದಾನಕ್ಕಾಗಿ ಕೇವಲ ಸರಕಾರಿ ನೌಕರರು ಜಾಗೃತಿ ಮೂಡಿಸಿದರೆ ಸಾಲದು. ಎಲ್ಲ ಪ್ರಜ್ಞಾವಂತರು ಈ ಕಾರ್ಯದಲ್ಲಿ ಮುಂದಾಗಬೇಕು. ನಮ್ಮ ಜನಪ್ರತಿನಿಧಿಯ ಆಯ್ಕೆಗೆ ಆಸಕ್ತಿಯಿಂದ ಮತದಾನ ಮಾಡಿರಿ. ಶೇ.100 ರಷ್ಟು ಮತದಾನ ಮಾಡುವ ಮೂಲಕ ಆದರ್ಶ ಮತದಾರರಾಗೋಣ ಎಂದರು.
ಕವಿ ವೃಕ್ಷ ಬಳಗದ ತಾಲೂಕಾಧ್ಯಕ್ಷ ಗಣೇಶ ಚೌವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ, ಶೃಜನಶೀಲ ಕನ್ನಡ ಸಾಹಿತ್ಯ ಬಳಗದ ತಾಲೂಕಾಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ, ಕಲಾವಿದ ರವಿ ಲಕ್ಷ್ಮೇಶ್ವರ, ಉಪನ್ಯಾಸಕಿ ಯಮುನಾ ಕೋನೇಸರ್, ಪುರಸಭೆ ಅಭಿಯಂತರ ಎನ್.ಕೆ.ಮಿರ್ಜಿ, ಯೋಜನಾಧಿಖಾರಿ ಶಿವಾನಂದ ಕ್ಯಾಲಕೊಂಡ ಅತಿಥಿಗಳಾಗಿದ್ದರು.
ಕವಿಗೋಷ್ಠಿ :
ಇದೇ ಸಂದರ್ಭದಲ್ಲಿ ಮತದಾನ ಜಾಗೃತಿ ಕುರಿತು ನಡೆದ ಕವಿಗೋಷ್ಠಿಯಲ್ಲಿ ಮಂಜುನಾಥ ಕೊರವರ “ಮತದಾನ ಮಾಡುವುದು ನಮ್ಮ ಹೊಣೆ”, ಮೌನೇಶ ಕಮ್ಮಾರ “ನನ್ನ ಆಯ್ಕೆಯ ನನ್ನ ಸರಕಾರ”, ಮಾರುತಿ ಕೊರಗರ “ಮತದಾನ ಮಾಡಿ ದೇಶ ಕಟ್ಟತೆನಿ”, ಪಾರ್ವತಿಬಾಯಿ ಕಾಶಿಕರ “ರಣಕಹಳೆ”, ಯಮಿನಾ ಕೋನೇಸರ “ಬ್ರಹ್ಮಾಸ್ತ್ರ”, ಶಿವಾನಂದ ಮಾರನಬೀಡ “ಬೆಲೆ ಕಟ್ಟದ ಮತ”, ಮಾಲತೇಶಗೌಡ ಕಾಲ್ವೆಕಲ್ಲಾಪೂರ “ಹಾಕುವ ಬನ್ನಿ ಮತ”, ಲೀಲಾವತಿ ಪೂಜಾರ “ಮತ”, ಕಲ್ಯಾಣಿ ಹೆಗಡೆ “ಜಾಗೃತರಾಗಿ”, ನಂದೀಶ ಲಮಾಣಿ “ಮತ ಬೇಟೆ”, ಶಿವಾನಂದ ಕ್ಯಾಲಕೊಂಡ “ವ್ಯರ್ಥವಾಗದಿರಲಿ ಮತ”, ಮಹೇಶ ಹನಕೇರಿ ‘ಮತದಾನ ಮತದಾರ”, ಗಣೇಶ ಚವ್ಹಾಣ “ನಮ್ಮ ಹಿತಕ್ಕೆ ಮತ”, ವಿದ್ಯಾರ್ಥಿಗಳಾದ ಭೂಮಿಕಾ ಜಾಡರ, ಪೂಜಾ ಅಣ್ಣಪ್ಪನವರ, ವಿಶೃತ್‍ಅಕ್ಷಯ ಹನಕೇರಿ, ನವೀನ ವಾಲ್ಮೀಕಿ ಮತಜಾಗೃತಿ ಚುಟುಕುಗಳನ್ನು ಓದಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








