ಬಳ್ಳಾರಿ
ಬಳ್ಳಾರಿ ನಗರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಆಗಿರುವ ತುಷಾರಮಣಿ ಅವರು ಮಂಗಳವಾರ ಬೆಳಗ್ಗೆ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬೆಳಗಿನ ವಾಯುವಿಹಾರಿಗಳಿಗೆ ಮತ್ತು ಕ್ರಿಕೆಟ್ ಹಾಗೂ ಇನ್ನೀತರ ಆಟಗಳಲ್ಲಿ ಮಗ್ನರಾಗಿದ್ದ ಯುವಕರಿಗೆ ಮತದಾನದ ಮಹತ್ವ ಸಾರುವ ಕರಪತ್ರಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು.
ಬೆಳಗ್ಗೆ 6ರಿಂದ 7ರವರೆಗೆ ಮುನ್ಸಿಪಲ್ ಕಾಲೇಜು ಮೈದಾನದ ತುಂಬೆಲ್ಲಾ ಓಡಾಡಿ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರಿಗೆ ತಪ್ಪದೇ ಮತದಾನ ಮಾಡಿ,ಯಾವುದೇ ಕಾರಣಕ್ಕೂ ಮತ ತಪ್ಪಿಸಿಕೊಳ್ಳಬೇಡಿ ಅಂತ ಹೇಳುತ್ತಿರುವುದು ಗಮನಸೆಳೆಯಿತು. ಮೈದಾನದಲ್ಲಿಯೇ ಕ್ರಿಕೆಟ್ ಆಟದಲ್ಲಿ ತಲ್ಲೀನರಾಗಿದ್ದ ಯುವಕರ ಕಡೆಗೆ ತೆರಳಿ ಯುವಕರು ದೇಶದ ಆಸ್ತಿ; ತಮಗೆ ಕಲ್ಪಿಸಲಾಗಿರುವ ಸಂವಿಧಾನಬದ್ಧ ಮತದಾನ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳದೇ ಯೋಗ್ಯ ವ್ಯಕ್ತಿಗೆ ಮತಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಿ ಎಂದರು.
ಸಾರ್ವಜನಿಕರು ಹಾಗೂ ಯುವಕರೊಂದಿಗೆ ಈ ಸಂದರ್ಭದಲ್ಲಿ ಅವರು ಸಂವಾದ ಕೂಡ ನಡೆಸಿದರು. ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ಅಧಿಕಾರಿ ಹನುಮಂತಪ್ಪ ಹಾಗೂ ಬಳ್ಳಾರಿ ನಗರ ಕ್ಷೇತ್ರದ ಚುನಾವಣಾ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
