ಹಾವೇರಿ
ಶಾಂತಿಯುತ, ಸುಗಮ ಹಾಗೂ ನ್ಯಾಯ ಸಮ್ಮತ ಚುನಾವಣೆ ಹಾಗೂ ದುರ್ಬಲ, ಅಶಕ್ತ ಮತದಾರರು ಸೇರಿದಂತೆ ಎಲ್ಲ ಮತದಾರರು ನಿರ್ಭಿತಿಯಿಂದ ಮತಚಲಾಯಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಹೊತ್ತ ಕೇಂದ್ರ ಸಶಸ್ತ್ರ ಸೇನಾಪಡೆ ಹಾಗೂ ಸ್ಥಳೀಯ ಪೊಲೀಸ್, ಗೃಹರಕ್ಷಕ ದಳದಿಂದ ಹಾವೇರಿ ನಗರದಲ್ಲಿಂದು ಪಥಸಂಚಲನ ಕಾರ್ಯಕ್ರಮ ಜರುಗಿತು.
ನಗರದ ಹುಕ್ಕೇರಿಮಠ ಪ್ರೌಢಶಾಲಾ ಆವರಣದಿಂದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಪೊಲೀಸ್ ನಡಿಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಚಾಲನೆ ನೀಡಿದರು.
ಹುಕ್ಕೇರಿಮಠದ ಶಿವಲಿಂಗೇಶ್ವರ ಪ್ರೌಢಶಾಲಾ ಆವರಣದಿಂದ ಆರಂಭಗೊಂಡ ಸಮವಸ್ತ್ರ ಧರಿಸಿದ ಮಿಲಟರಿ ಪಡೆಯ ಶಿಸ್ತುಬದ್ಧ ನಡಿಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಇವರೊಂದಿಗೆ ಪೊಲೀಸ್ ವಿವಿಧ ತುಕಡಿಗಳು, ಗೃಹರಕ್ಷಕದಳದವರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಗಾಂಧಿವೃತ್ತ, ಸುಭಾಸ್ ವೃತ್ತ, ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಪಥಸಂಚಲನ ಪುನಃ ಹುಕ್ಕೇರಿಮಠ ಪ್ರೌಢಶಾಲೆ ಆವರಣ ತಲುಪಿತು.
ಪೊಲೀಸ್, ಕೇಂದ್ರ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳದ ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಶಿಸ್ತುಬದ್ಧ ನಡಿಗೆ ನೋಡುಗರ ಮನದಲ್ಲಿ ಹೆಮ್ಮೆಯ ಜೊತೆಗೆ ಪೊಲೀಸ್ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾದವು.
ಇದೇ ಎಪ್ರಿಲ್ 23 ರಂದು ನಡೆಯುವ ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗಬಾರದು. ಚುನಾವಣೆ ಗಲಾಟೆ, ಗೊಂದಲಗಳು ಬೇಡ ಎಂದು ಮತದಾನದಿಂದ ದೂರ ಉಳಿಯುವ ಜನರಿಗೆ ಆತ್ಮವಿಶ್ವಾಸತುಂಬಿ ಮತಗಟ್ಟೆಗಳಿಗೆ ಕರೆತರುವ ಜೊತೆಗೆ ಯಾವುದೇ ಚುನಾವಣಾ ಪೂರ್ವ ಹಾಗೂ ಮತದಾನ ಸಂದರ್ಭದಲ್ಲಿ ಗೊಂದಲ, ಗದ್ದಲ, ಗಲಾಟೆಗೆ ಅವಕಾಶವಿಲ್ಲದಂತೆ ನಿಮಗೆ ನಾವು ರಕ್ಷಣೆ ನೀಡುತ್ತೇವೆ ಎಂಬ ಸಂದೇಶ ನೀಡಲು ಆಯೋಜಿಸಲಾದ ಮತಸಂಚಲನ (ಪಥಸಂಚಲನ) ಅತ್ಯಂತ ಅರ್ಥಪೂರ್ಣವಾಗಿ ಸಂಘಟಿತಗೊಂಡು ಕಾರ್ಯಕ್ರಮದ ಉದ್ದೇಶ ಸಾರ್ಥಕಗೊಂಡಿತು.
ಪೇದೆಗಳಿಗೆ ಆತ್ಮವಿಶ್ವಾಸ: ಪಥಸಂಚಲನ ಪೂರ್ವದಲ್ಲಿ ಕೇಂದ್ರ ಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರ ಅತ್ಯಂತ ಶಾಂತಿಯುತ ಮತ ಕ್ಷೇತ್ರವಾಗಿದೆ. ದುರ್ಬಲ ಮತದಾರರು, ಸಾರ್ವಜನಿಕರು ನಿರ್ಭಿಡಿಯಿಂದ ಮತಚಲಾಯಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ಅವಕಾಶವಿಲ್ಲದಂತೆ ನಿಗಾವಹಿಸಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿ. ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಪಡೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ. ಚುನಾವಣಾ ಕರ್ತವ್ಯದಲ್ಲಿ ಎಲ್ಲರೂ ಸಮಾನರು. ಶಾಂತಿಯುತ, ನ್ಯಾಯ ಸಮ್ಮತ ಚುನಾವಣೆಗೆ ನಾವೆಲ್ಲ ಬದ್ಧತೆಯಿಂದ ಕೆಲಸಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಮಾತನಾಡಿ, ಈಗಾಗಲೇ ಮತಗಟ್ಟೆವಾರು ಕೇಂದ್ರಪಡೆಯ ಹಾಗೂ ಪೊಲೀಸ್ ಮತ್ತು ಗೃಹರಕ್ಷಕ ಪೇದೆಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತಮಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿ ತಮಗೆ ವಹಿಸಿದ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರ್ಭಿತವಾದ ಶಾಂತಿಯುತ ಮತದಾನಕ್ಕೆ ತಾವೆಲ್ಲ ನಿಷ್ಠೆಯಿಂದ ಕಾರ್ಯನಿರ್ವಹಿಸಿ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾದ ಗೃಹರಕ್ಷಕ ಅಥವಾ ಪೊಲೀಸ್ ಸಿಬ್ಬಂದಿ ಗೈರು ಹಾಜರಾದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಮೀಸಲು ಪಡೆಯ ಕಮಾಂಡೆಂಟ್ ರಮೇಶ ಕಬಾಡೆ ಅವರು ಮಾತನಾಡಿ, ತಮಗೆ ನಿರ್ವಹಿಸಿದ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ, ಮತಗಟ್ಟೆಯ ಹೊರಗೆ ಕರ್ತವ್ಯದಲ್ಲಿ ತೊಡಗಿ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಿ. ಸುಗಮ ಹಾಗೂ ಶಾಂತಿಯುತ ಚುನಾವಣೆಗೆ ಬದ್ಧರಾಗಿ ಕಾರ್ಯನಿರ್ವಹಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಕೆ.ಲೀಲಾವತಿ, ಕೇಂದ್ರ ಮೀಸಲು ಪಡೆಯ ಕಮಾಂಡೆಂಟ್ ರಮೇಶ ಕಬಾಡೆ, ಡಿವೈಎಸ್‍ಪಿ ಕುಮಾರಪ್ಪ, ಹಾವೇರಿ ಸಹಾಯಕ ಚುನಾವಣಾಧಿಕಾರಿ ಎನ್.ತಿಪ್ಪೇಸ್ವಾಮಿ ಇತರ ಅಧಿಕಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.