ಮತದಾನವನ್ನು ರಾಷ್ಟ್ರೀಯ ಸೇವೆ ಎಂದು ಪರಿಗಣಿಸಿ: ವಜುಬಾಯಿ ರೂಢವಾಲಾ

ಬೆಂಗಳೂರು

       ರಾಷ್ಟ್ರ ಮತ್ತು ಸಮಾಜವನ್ನು ಬಲಿಷ್ಟಗೊಳಿಸಬೇಕಾದರೆ, ಮತದಾನದಲ್ಲಿ ಪಾಲ್ಗೊಳ್ಳುವುದು ಪ್ರತಿ ಮತದಾರರ ಕರ್ತವ್ಯ ಮತದಾನವನ್ನು ರಾಷ್ಟ್ರೀಯ ಸೇವೆ ಎಂದು ಪರಿಗಣಿಸಬೇಕಾಗಿದೆ ರಾಜ್ಯಪಾಲ ವಜುಬಾಯಿ ರೂಢವಾಲಾ ಅವರು ತಿಳಿಸಿದ್ದಾರೆ.

         ನಗರದ ಪುರಭವನದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು ದೇಶವನ್ನು ಬಲಿಷ್ಠಗೊಳಿಸಲು ಕಡ್ಡಾಯವಾಗಿ ಮತದಾನ ಮಾಡುವಂತೆ ಅವರು ಯುವಸುಮುದಾಯಕ್ಕೆ ಕರೆ ನೀಡಿದರು.

          ಮೊದಲು ಜಾರಿಯಲ್ಲಿದ್ದ ಮತಪತ್ರದಲ್ಲಿ ಸಾಕಷ್ಟು ಸಂಶಯಗಳು ಇದ್ದವು. ಆದರೆ ವಿವಿ ಪ್ಯಾಟ್ ಬಂದ ನಂತರ ಮತದಾನದ ಬಗ್ಗೆ ಇದ್ದ ಎಲ್ಲಾ ಸಂಶಯಗಳು ದೂರವಾಗಿದ್ದು, ಜನತೆಯಲ್ಲಿ ವಿಶ್ವಾಸ ಮೂಡಿಸಿದೆ ಮತಪಟ್ಟಿಯಲ್ಲಿ ಹೆಸರು ಇಲ್ಲದವರು ಕೂಡಲೇ ಹೆಸರು ಸೇರಿಸಲು ಮುಂದಾಗಬೇಕು. ಕೇವಲ ತಾವೊಬ್ಬರೇ ಮತದಾನ ಮಾಡಬಾರದು. ನಮ್ಮ ಸುತ್ತಮುತ್ತಲಿನ ಮತದಾರರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.

         ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುದು ಮತದಾರರ ಹಕ್ಕು ಇದ್ದಂತೆ. ತಮ್ಮ ಮತವನ್ನು ವಿವೇಕಯುತವಾಗಿ ಚಲಾಯಿಸುವ ಮೂಲಕ ರಾಷ್ಟ್ರವನ್ನು ಸಬಲೀಕರಣಗೊಳಿಸಬೇಕು ಎಂದು ಹೇಳಿದರು.

         ಚುನಾವಣಾ ಕಣದಲ್ಲಿ ಇಬ್ಬರು ಕೆಟ್ಟವರು ಇದ್ದರೆ, ಅವರಿಬ್ಬರಲ್ಲಿ ಯಾರು ಕನಿಷ್ಟ ಕೆಟ್ಟವರು ಎಂಬುದನ್ನು ಗುರುತಿಸಿ ಅಂತಹವರಿಗೆ ಮತ ಚಲಾಯಿಸಬೇಕು ಎಂದು ಅವರು ಹೇಳಿದರು.ಚುನಾವಣಾ ಆಯೋಗದ ಅಧಿಕೃತ ವರದಿಯಂತೆ 5 ಕೋಟಿ 3 ಲಕ್ಷ ಮತದಾರರು ನೊಂದಣಿಯಾಗಿದ್ದಾರೆ ಎಂದು ಸ್ವಾಗತ ಭಾಷಣ ಮಾಡಿದ ಚುನಾವಣಾ ಆಯೋಗದ ಅಧಿಕಾರಿ ಕೆ.ಎನ್. ಅಜಯ ನಾಗಭೂಷಣ್ ಅವರು ತಿಳಿಸಿದರು.

        ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬುದು ಈ ಬಾರಿಯ ಧ್ಯೇಯವಾಕ್ಯವಾಗಿದೆ. ಪ್ರತಿ ನಾಗರೀಕರು ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಣಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

          ಇದೇ ಸಂದರ್ಭದಲ್ಲಿ ರಾಜ್ಯಪಾಲರು, ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿದರು. ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಇವೆಯೋ, ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು 1950ಕ್ಕೆ ಕರೆ ಮಾಡಬಹುದು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಮುಂದೆ ಏನು ಮಾಡಬೇಕು ಅಗತ್ಯ ಮಾಹಿತಿಯನ್ನು ಕರೆ ಮಾಡಿದ ವ್ಯಕ್ತಿಗೆ ಚುನಾವಣಾ ಸಿಬ್ಬಂದಿಗಳು ಮಾಹಿತಿ ನೀಡಲಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap