ಕೊಟ್ಟೂರು
ವೃತ್ತಿರಂಗ ಭೂಮಿ ಕಲಾವಿದರ ಮೇಲೆ ಚುನಾವಣಾ ಆಯೋಗ ಗಧಾಪ್ರಹಾರ ಮಾಡಿದೆ ಎಂದು ನಾಟಕ ಅಕಾಡಮಿ ಸದಸ್ಯ ಹಾಗೂ ನಾಟಕ ರಚನೆಕಾರ ಜೀವರ್ಗಿರಾಜಣ್ಣ ಅಸಹನೆ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಬೀಡುಬಿಟ್ಟಿರುವ ಹುಚ್ಚೇಶ್ವರ ನಾಟ್ಯಕಲಾಸಂಘ ಕಮತಗಿ ಹಾಗೂ ಬಿಎಸ್‍ಆರ್ ನಾಟಕ ಕಂಪನಿ ಗುಬ್ಬಿ, ಬುಧವಾರ ರಾತ್ರಿ ಶ್ರೀಗುರುಕೊಟ್ಟೂರೇಶ್ವರ ಕಲಾರಂಗದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ವಿಶ್ವÀರಂಗಭೂಮಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಇಲ್ಲಿನ ಚುನಾವಣಾಧಿಕಾರಿ ಮಧ್ಯಾಹ್ನ 3ಗಂಟೆ ಹಾಗೂ ಸಂಜೆ 6ಗಂಟೆಗೆ ನಾಟಕ ಪ್ರದರ್ಶನ ಮಾಡಬೇಕೆಂದು ಆದೇಶ ಹೊರಡಿಸಿದ್ದಾರೆ.
ಆದರೆ ಕರ್ನಾಟಕದ ತೋಗರ್ಸಿ, ಅಂಕಲಿ, ಚಿಕ್ಕೋಡಿ, ಗುರುಗುಂಟಿಯಲ್ಲಿ ಇಂದಿಗೂ ನಾಟಕಗಳು ಸಂಜೆ 6ಗಂಟೆಗೆ ಹಾಗೂ ರಾತ್ರಿ 9ಗಂಟೆಗೆ ಪ್ರದರ್ಶನವಾಗುತ್ತಿವೆ. ಅಲ್ಲಿಲ್ಲದ ಚುನಾವಣೆ ನೀತಿ ಸಂಹಿತಿ ಕೊಟ್ಟೂರು ಮಾತ್ರ ಅನ್ವಯವಾಗುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.
ಚಿತ್ರಮಂದಿರಗಳ ಮೇಲಿಲ್ಲದ ಚುನಾವಣೆ ನೀತಿ ಸಂಹಿತಿ ವೃತ್ತಿರಂಗಭೂಮಿ ನಾಟಕಗಳ ಮೇಲೇಕೆ? ಈ ಆದೇಶಕ್ಕೆ ತಿದ್ದುಪಡಿ ತರಬೇಕೆಂದು ನಾಟಕ ಅಕಾಡಮೆ ಅಧ್ಯಕ್ಷರು ಹಾಗೂ ಆಕಾಡಮೆ ಸದಸ್ಯರು ಹಾಗೂ ಕಲಾವಿದರು ಬೆಂಗಳೂರಿನ ರಾಜ್ಯ ಚುನಾವಣಾಧಿಕಾರಿಗೆ ಮನವಿ ಕೊಟ್ಟೆವು.
ತಕ್ಷಣ ಮೊದಲಿನ ಆದೇಶಕ್ಕೆ ತಿದ್ದುಪಡಿತಂದು ಸಂಜೆ ಮತ್ತು ರಾತ್ರಿ ನಾಟಕಗಳನ್ನು ಪ್ರದರ್ಶನ ಮಾಡಬಹುದು ಎಂಬ ಆದೇಶದ ಸುತ್ತೋಲೆಯನ್ನು ಇಡೀ ರಾಜ್ಯಕ್ಕೆ ಹೊರಡಿಸಿದ್ದಾರೆ. ಆದರೆ ಕೊಟ್ಟೂರಿನ ಚುನಾವಣಾಧಿಕಾರಿ ಮಾತ್ರ ಸಂಜೆ ಮತ್ತು ರಾತ್ರಿ ನಾಟಕದ ಪ್ರದರ್ಶನಕ್ಕೆ ಆದೇಶ ಕೊಡುತ್ತಿಲ್ಲವೆಂದು ಸುತ್ತೋಲೆ ಪತ್ರವನ್ನು ಪ್ರದರ್ಶಿಸಿ ತಮ್ಮ ನೋವನ್ನು ತೋಡಿಕೊಂಡರು.
ಶ್ರೀಕೊಟ್ಟೂರೇಶ್ವರ ಕಲಾರಂಗದ ನಿರ್ದೇಶಕ ಶ್ರೀಕಾಂತ, ಬಳ್ಳಾರಿಯ ಬಿರು ಬಿಸಿಲಿನಲ್ಲಿ ಮಟಮಟ ಮಧ್ಯಾಹ್ನ ಹೇಗೆ ನಾಟಕ ನೋಡಲು ಪ್ರೇಕ್ಷಕರು ಬರಲು ಸಾಧ್ಯ, ಚುನಾವಣಾ ಆಯೋಗ ಗುಬ್ಬಿಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ಇದರಿಂದ ಕಲಾವಿದರಿಗೆ ತುಂಬ ಅನ್ಯಾವಾಗಿದೆ ಎಂದರು.
ಕಲಾರಂಗದ ಎಂ.ಎಸ್.ಶಿವನಗುತ್ತಿ, ದೇವರಮನಿ ಸುರೇಶ, ಪೋಸ್ಟ್ ಕೊಟ್ರೇಶ, ಗೀರೀಶ, ಕೊಟ್ರಯ್ಯ, ನಾಗರಾಜ್, ಪ್ರಭುವೀರಸ್ವಾಮಿ, ವಾಣಿ, ನಟರಾಜ್ ಮುಂತಾದವರು ಚುನಾವಣಾ ನೀತಿ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳುವ ಚಿಂತನೆ ಇರುವುದಾಗಿ ತಿಳಿಸಿದರು.
ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಹುಚ್ಚೇಶ್ವರ ನಾಟ್ಯ ಸಂಘದ ಕಲಾವಿದರಿಗೆ ಹಾಗೂ ಬಿಎಸ್‍ಆರ್ ನಾಟಕ ಕಂಪನಿ ಗುಬ್ಬಿ ಕಲಾವಿದರಿಗೆ ಕಲಾರಂಗದಿಂದ ಸನ್ಮಾನ ಮಾಡಲಾಯಿತು.