ಲೋಕಸಭಾ ಚುನಾವಣೆ : ಶಾಂತಿಯುತ ಚುನಾವಣೆ ನಡೆಸಲು ಪೊಲೀಸರಿಗೆ ವಿಜಯ್ ಭಾಸ್ಕರ್ ಕರೆ

ಬೆಂಗಳೂರು

       ಲೋಕಸಭಾ ಚುನಾವಣೆಯಲ್ಲಿ ನಿಷ್ಪಕ್ಷ ಪಾತವಾಗಿ ಕಾರ್ಯ ನಿರ್ವಹಿಸಿ ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು, ಪೊಲೀಸರಿಗೆ ಕರೆನೀಡಿದ್ದಾರೆ.

       ದೇಶದಲ್ಲಿ ಕರ್ನಾಟಕ ಶಾಂತಿಪ್ರಿಯ ರಾಜ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡಿ ಉತ್ತಮ ಹೆಸರು ಬರುವಂತೆ ನೋಡಿಕೊಳ್ಳಿ ಎಂದು ಹೇಳಿದರು.

       ಕೋರಮಂಗಲದ ಕೆಎಸ್‍ಆರ್‍ಪಿ ಮೈದಾನದಲ್ಲಿ ನಡೆದ ಪೊಲೀಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆಯ ವೇಳೆ ಸಮಾಜಘಾತುಕ ಶಕ್ತಿಗಳು ಶಾಂತಿಗೆ ಭಂಗ ತರುವ ಕೃತ್ಯದಲ್ಲಿ ತೊಡಗುವುದನ್ನು ಮಟ್ಟಹಾಕಬೇಕು ಎಂದರು.

       ಆಧುನಿಕ ಸಮಾಜದ ವೇಗಕ್ಕೆ ಪೊಲೀಸ್ ಸಿಬ್ಬಂದಿಗಳು ತಮ್ಮನ್ನು ಬದಲಾವಣೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ತಾಂತ್ರಿಕತೆ ಎಷ್ಟು ವೇಗವಾಗಿ ಬೆಳೆಯುತ್ತದೆ ಎಂದರೆ, ನಾವು ಅದಕ್ಕೆ ಹೊಂದಿಕೊಳ್ಳಲು ಬಹಳ ಶ್ರಮ ವಹಿಸಬೇಕಾಗುತ್ತದೆ. ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಕಂಡಿದೆ ಎಂದು ತಿಳಿಸಿದರು.

        ತಂತ್ರಜ್ಞಾನವನ್ನು ಬಳಸಿಕೊಂಡು ಬಹಳಷ್ಟು ಸಂಕೀರ್ಣ ಪ್ರಕರಣಗಳನ್ನು ಬೇಧಿಸಲಾಗಿದೆ. ಹಲವು ಅಪರಾಧಿಗಳನ್ನು ತಂತ್ರಜ್ಞಾನದ ನೆರವಿನಿಂದ ಬಂಧಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

        ಪೊಲೀಸರು ಮತ್ತು ಜನಸಾಮಾನ್ಯರ ನಡುವೆ ಉತ್ತಮ ಸಂಬಂಧ ಏರ್ಪಡಲು ಪೊಲೀಸ್ ಧ್ವಜಾ ದಿನಾಚರಣೆ ಉತ್ತಮ ಕಾರ್ಯಕ್ರಮವಾಗಿದೆ. ನಿವೃತ್ತ ರಕ್ಷಣಾ ಸಿಬ್ಬಂದಿಗಳ ಕಲ್ಯಾಣದ ಬಗ್ಗೆ ಚಿಂತಿಸಲು ಇದು ನೆರವಾಗಲಿದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ವಿವಿಧ ಪಡೆಗಳ ಗೌರವ ವಂದನೆಯನ್ನು ವಿಜಯ್ ಭಾಸ್ಕರ್ ಅವರು ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಒಳಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link