ಬೆಂಗಳೂರು
ಅತಿಯಾದ ಮುಸ್ಲಿಂ ತುಷ್ಠೀಕರಣದ ಕಾರಣಕ್ಕೆ ವಿಪಕ್ಷಗಳಿಂದ ಟೀಕೆ ಎದುರಿಸುತ್ತಲೇ ಇರುವ ಸರ್ಕಾರದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಗಿಬಿದ್ದಿದ್ದಾರೆ. ಆಗಸ್ಟ್ 2 ರಂದು ಬೆಂಗಳೂರಿನ ಸಿಎಂ ಕಾನ್ವೆನ್ಶನ್‌ನಲ್ಲಿ ಸುನ್ನಿ ಕೋಆರ್ಡಿನೇಷನ್ ಕಾರ್ಯಕ್ರಮ ನಡೆದಿತ್ತು.
ಈ ವೇಳೆ ಸಮಾರಂಭದ ಮುಖ್ಯ ಅತಿಥಿ ಆಗಮಿಸಿದ್ದ ರೀತಿಯೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸರ್ಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದೇ ಇರುವ ವ್ಯಕ್ತಿ ‘ಜಿ’ ಸಿರೀಸ್ ಕಾರ್‌ನಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. ಅಷ್ಟು ಮಾತ್ರವಲ್ಲದೆ, ಅವರಿಗೆ ಪೊಲೀಸ್ ಭದ್ರತೆ ಪ್ರೊಟೋಕಾಲ್‌ಅನ್ನೂ ನೀಡಲಾಗಿದೆ. ಇದೇ ವಿಚಾರವನ್ನು ಬಸನಗೌಡ ಪಾಟೀಲ್ ಯತ್ನಾಳ್ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ. ಅದರೊಂದಿಗೆ ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ, ಕರ್ನಾಟಕ ಡಿಜಿಪಿಗೆ ಟ್ಯಾಗ್ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಯತ್ನಾಳ್, ‘ಸರ್ಕಾರಕ್ಕೆ ಸಂಬಂಧವೇ ಇಲ್ಲದ ಈ ವ್ಯಕ್ತಿಗೆ ಯಾಕೆ ‘ಜಿ’ ಸಿರೀಸ್ ಕಾರ್‌ಅನ್ನು ಹಾಗೂ ಪೊಲೀಸ್ ಭದ್ರತೆ & ಪ್ರೊಟೋಕಾಲ್‌ಅನ್ನು ನೀಡಲಾಗಿದೆ. ಇದು ಶಿಷ್ಟಾಚಾರದ ನಿಯಗಳನ್ನು ಉಲ್ಲಂಘಿಸಿದ ಹಾಗೆ ಅಲ್ಲವೇ. ಅಲ್ಪಸಂಖ್ಯಾತರ ಮತಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಮುಖಂಡರಿಗೆ ಅನುಕೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ ತೆರಿಗೆದಾರರ ಹಣದ ಬೃಹತ್ ವ್ಯರ್ಥವೂ ಆಗಿದೆ. ರಾಜ್ಯವು ಮಳೆಯ ಅಬ್ಬರಕ್ಕೆ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಹೀಗೆ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಮುಸ್ಲಿ ಮೌಲ್ವಿಯೊಬ್ಬರು ಪೊಲೀಸ್ ಭದ್ರತೆಯಲ್ಲಿ ರಾಜ್ಯ ಸರ್ಕಾರದ ಕಾರ್‌ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರೊಂದಿಗೆ ರಾಜಕಾರಣಿ ಸಿಎಂ ಇಬ್ರಾಹಿಂ ಕೂಡ ಬಂದಿದ್ದಾರೆ. ಇದೇ ವಿಚಾರವೀಗ ವಿವಾದಕ್ಕೆ ಕಾರಣವಾಗಿದೆ. ಜಿ ಸಿರೀಸ್ ಕಾರುಗಳು ಸರ್ಕಾರಿ ಅಧಿಕಾರಿಗಳು ಹಾಗೂ ಸರ್ಕಾರದ ಭಾಗವಾಗಿರುವ ವ್ಯಕ್ತಿಗಳು ಮಾತ್ರವೇ ಬಳಸುತ್ತಾರೆ.