ವೈಯಕ್ತಿಕ ಸ್ವಚ್ಛತೆಯಿಂದ ಮಲೇರಿಯ ನಿಯಂತ್ರಣ ಸಾಧ್ಯ

ತುಮಕೂರು

    ವೈಯಕ್ತಿ ಸ್ವಚ್ಛತೆ, ಸುತ್ತಮುತ್ತಲಿನ ಪರಿಸರ ನೈರ್ಮಲ್ಯ ಕಾಪಾಡುವುದರಿಂದ ಮಲೇರಿಯ ರೋಗವನ್ನು ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಎನ್.ಪುರುಷೋತ್ತಮ್ ತಿಳಿಸಿದರು.

    ನಗರದ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿಂದು ಏರ್ಪಡಿಸಿದ್ದ “ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ”ವನ್ನು ಉದ್ದೇಶಿಸಿ ಮಾತನಾಡಿದ ಅವರು ಸೊಳ್ಳೆಗಳಿಂದ ಹರಡುವ ಮಲೇರಿಯಾ ರೋಗವಿಂದು ಮಾರಕ ರೋಗವಾಗಿ ಮಾರ್ಪಟ್ಟಿದೆ.

      ಸಾರ್ವಜನಿಕ ಸ್ಥಳ, ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕೆಂದರಲ್ಲದೆ ಹತ್ತು ದಿನಗಳ ಕಾಲ ಒಂದೇ ಕಡೆ ನೀರು ನಿಂತಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ನಿಟ್ಟಿನಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ವಿದ್ಯಾರ್ಥಿಗಳು ಸಂದೇಶ ವಾಹಕಗಳಂತೆ ಕಾರ್ಯನಿರ್ವಹಿಸುವುದರಿಂದ ಶಿಕ್ಷಕರು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ಇದರಿಂದ ಜನರಿಗೆ ಬಹು ಬೇಗ ಮಾಹಿತಿ ರವಾನೆಯಾಗುತ್ತದೆ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ವರ್ಷ 103 ಮಲೇರಿಯಾ ಪ್ರಕರಣಗಳು ಬೆಳಕಿಗೆ ಬಂದಿದ್ದು 2019ರ ಜನವರಿಯಿಂದ ಈವರೆಗೆ 16 ಪ್ರಕರಣಗಳು ಪತ್ತೆಯಾಗಿವೆ. ಲ್ಯಾಟಿನ್ ಅಮೇರಿಕಾ, ಆಫ್ರಿಕಾ, ಮಧ್ಯ ಪ್ರಾಚ್ಯ ಹಾಗೂ ಪೂರ್ವ ಏಷ್ಯಾ ಪ್ರದೇಶಗಳಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ ಎಂದು ತಿಳಿಸಿದರಲ್ಲದೆ ಮಲೇರಿಯಾ ರೋಗದ ಹರಡುವಿಕೆ ಹಾಗೂ ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಧರಣೇಂದ್ರಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದಲೂ ಮಲೇರಿಯ ಹರಡುವ ಸಾಧ್ಯತೆಯಿದೆ.

     ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದರಿಂದ ಮಲೇರಿಯ ಮುಕ್ತ ಮಾಡಬಹುದಾಗಿದೆ. ಪ್ರತಿಯೊಬ್ಬರು ತಮ್ಮ ಮನೆ ಮುಂದೆ ಗಿಡ ನೆಡಿ ಹಾಗೂ ಅಕ್ಕ ಪಕ್ಕದ ಮನೆಯವರಿಗೂ ಸಹ ಗಿಡ ನೆಡಲು ತಿಳಿಸಿ. ಇದರಿಂದ ಸ್ವಚ್ಛ ಪರಿಸರ ನಿರ್ಮಾಣವಾಗಿ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಬಹದಾಗಿದೆ.

    ಮಹಾ ನಗರ ಪಾಲಿಕೆಯ ಮತ್ತೊಬ್ಬ ಸದಸ್ಯ ಮಂಜುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರು ಖಾಲಿ ನಿವೇಶನಗಳಲ್ಲಿ ಕಸ ಹಾಕುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಪ್ರತಿನಿತ್ಯ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪಾಲಿಕೆಯ ಕಸ ಸಂಗ್ರಹಿಸುವ ವಾಹನಕ್ಕೆ ನೀಡುವುದರಿಂದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದೆಂದು ಸಲಹೆ ನೀಡಿದರು.

     ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ|| ಸಿ.ಜಯರಾಮ್ ಮಾತನಾಡಿ, ತುಮಕೂರು ನಗರವು ಸ್ಮಾರ್ಟ್ ಸಿಟಿಯತ್ತ ಸಾಗುತ್ತಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರಿಯಬೇಕು ಎಂದರು.

      ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಆರೋಗ್ಯ ಅಧಿಕಾರಿ ಹನುಮಂತರಾಯಪ್ಪ, ಶಾಲೆಯ ಮುಖ್ಯೋಪಾಧ್ಯಾಯ ಎ.ಎಸ್. ಲಕ್ಷೀನಾರಾಯಣ, ಸಹಾಯಕ ಕೀಟ ಶಾಸ್ತ್ರಜ್ಞೆ ಎ.ಉಷಾ, ತಾಲೂಕು ಆರೋಗ್ಯಾಧಿಕಾರಿ ಎಸ್.ಶರತ್ ಚಂದ್ರ, ಆರೋಗ್ಯ ಹಿರಿಯ ಅಧಿಕಾರಿ ವೆಂಕಟಾಚಲಯ್ಯ, ವೈದ್ಯಾಧಿಕಾರಿ ಶಾಹಿರ ಬಾನು, ಆರೋಗ್ಯಾಧಿಕಾರಿ ಪಾಪ್ಪಣ್ಣ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

     ಇದಕ್ಕೂ ಮುನ್ನ ಮರಳೂರು ದಿಣ್ಣೆ ಸರ್ಕಾರಿ ಕನ್ನಡ ಮಾದರಿ ಹಾಗೂ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಆವರಣದಿಂದ ಮಲೇರಿಯ ವಿರೋಧಿ ಮಾಸಾಚರಣೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಎನ್.ಪುರುಷೋತ್ತಮ್ ಚಾಲನೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap