ತುಮಕೂರು
ನಾವು ತಿನ್ನುವ ಆಹಾರ ಕಲುಷಿತತೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಲು ಹಾಗೂ ಕಲಬೆರಕೆ ಆಹಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ 2006ರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸಿತು. 2011, ಆಗಸ್ಟ್ 5ರಿಂದ ಈ ಕಾಯ್ದೆ ಜಾರಿಗೆ ಬಂದಿದೆ.
ಜನರು ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅನುಸರಿಸಲೇಬೇಕಾದ ನಿಯಮಗಳನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹೇಳುತ್ತದೆ. ಈ ಕಾಯ್ದೆಯಡಿಯಲ್ಲಿ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ- ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡಡ್ ಅಥಾರಿಟಿ ಆಫ್ ಇಂಡಿಯಾ) ರಚನೆಯಾಗಿದ್ದು, 15 ಪ್ರಮುಖ ನಿಯಮಾವಳಿಗಳನ್ನು ಈ ಪ್ರಾಧಿಕಾರ ರೂಪಿಸಿದೆ. ಅದರಂತೆ ಆಹಾರ ಪದಾರ್ಥಗಳನ್ನು ತಯಾರಿಸುವವರು, ವಹಿವಾಟುದಾರರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
ಗುಣಮಟ್ಟದ ಆಹಾರ ಮತ್ತು ಶುಚಿತ್ವಕ್ಕೆ ಕಾಯ್ದೆಯಲ್ಲಿ ಹೆಚ್ಚು ಹೊತ್ತು ನೀಡಲಾಗಿದೆ. ಆಹಾರ ತಯಾರಿಸುವ ಪ್ರತಿಯೊಂದು ಘಟಕವು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಈ ಉತ್ಪನ್ನಗಳನ್ನು ಮಾರಾಟ ಮಾಡುವ ಕಿರಾಣಿ ಅಂಗಡಿಯವರು ಸಹ ಈ ನಿಯಮಗಳನ್ನು ಪಾಲಿಸಬೇಕು. ದೊಡ್ಡ ಹೋಟೆಲ್‍ಗಳಿಂದ ಹಿಡಿದು ಸಣ್ಣ ಮತ್ತು ಬೀದಿ ಬದಿಯಲ್ಲಿ, ತಳ್ಳುಗಾಡಿಯಲ್ಲಿ ಆಹಾರ ತಯಾರಿಸಿ ಮಾರುವವರು ಸಹ ಅನುಮತಿ ಪಡೆಯುವುದು ಕಡ್ಡಾಯ.
ಒಂದು ವೇಳೆ ಇದನ್ನು ಪಾಲಿಸದೆ ಹೋದರೆ ಅಂತಹ ಯಾವುದೇ ಅಂಗಡಿಯ ಪರವಾನಗಿಯನ್ನು ರದ್ದು ಮಾಡಲು, ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಇದಕ್ಕೆ ಅಂಕಿತ ಅಧಿಕಾರಿಯಾಗಿ, ತಾಲ್ಲೂಕು ಮಟ್ಟದಲ್ಲಿ ಆಹಾರ ಸುರಕ್ಷತಾ ನೋಂದಣಾಧಿಕಾರಿ ಕಾರ್ಯನಿರ್ವಹಿಸುತ್ತಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಈ ಕೆಳಗಿನ ಕೆಲವು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದೆ.
ವ್ಯಕ್ತಿ ಆರೋಗ್ಯವಾಗಿರಬೇಕು
ಆಹಾರ ತಯಾರಿಸುವ ವ್ಯಕ್ತಿಯು ವೈಯಕ್ತಿಕವಾಗಿ ಆರೋಗ್ಯವಾಗಿರಬೇಕು. ಕೈಬೆರಳುಗಳ ಉಗುರುಗಳನ್ನು ಕತ್ತರಿಸಿರಬೇಕು. ಕೈಬೆರಳುಗಳಿಗೆ ಉಗುರು ಬಣ್ಣ, ಉಂಗುರ ಹಾಕಿರಬಾರದು. ತಲೆಗೂದಲನ್ನು ಉದ್ದವಾಗಿ ಬಿಡಬಾರದು. ತಲೆಗೆ ಟೋಪಿಯನ್ನು ಹಾಕಿರಬೇಕು. ವ್ಯಕ್ತಿಗೆ ಯಾವುದೇ ಅಂಟು ರೋಗಗಳಿರಬಾರದು. ಅಂದರೆ, ಕೆಮ್ಮ, ಪದೆ ಪದೇ ಅಥವಾ ಬಿಟ್ಟು ಬರುವ ಉಬ್ಬಸ, ನೆಗಡಿ, ಚರ್ಮದ ತೊಂದರೆ, ಮೂಗು ಸೋರುವುದು, ಕಿವಿ ಸೋರುವುದು ಇತ್ಯಾದಿ.
ವೈದ್ಯಕೀಯ ತಪಾಸಣೆ ಅಗತ್ಯ
ಪ್ರತಿ ಆರು ತಿಂಗಳಿಗೊಮ್ಮೆ ಆಹಾರ ತಯಾರಿಸುವ ವ್ಯಕ್ತಿಯು ವೈದ್ಯಕೀಯ ತಪಾಸಣೆಗೆ ಒಳಪಡಬೇಕು. ಶುಭ್ರವಾದ ಸಮವಸ್ತ್ರ ಧರಿಸಿರಬೇಕು. ದುರಭ್ಯಾಸಗಳಾದ ತಂಬಾಕು ಜಿಗಿಯುವುದು, ಧೂಮಪಾನ ಮಾಡುವುದರಿಂದ ದೂರ ಇರಬೇಕು. ಆಹಾರ ತಯಾರಿಸುವ ಸ್ಥಳವು ಇಲಿಗಳಿಂದ, ಕೀಟಗಳಿಂದ, ನೊಣಗಳಿಂದ ಮುಕ್ತವಾಗಿರಬೇಕು ಮತ್ತು ಆ ಜಾಗ ಸ್ವಚ್ಛತೆಯಿಂದ ಕೂಡಿರಬೇಕು. ನೆಲಹಾಸಿನಲ್ಲಿ ಧೂಳು ಅಥವಾ ಮಣ್ಣು ಮೆತ್ತಿಕೊಳ್ಳುವಂತಿರಬಾರದು. ತಂಗಳು ಬಳಸಬಾರದು.
ಕಚ್ಚಾ ಆಹಾರ ಪದಾರ್ಥಗಳು
ಇವುಗಳನ್ನು ಉಪಯೋಗಿಸುವುದರ ಮೊದಲು ಶುಚಿಗೊಳಿಸಿರಬೇಕು ಹಾಗೂ ದಾಸ್ತಾನು ಸ್ಥಳ ತೇವಾಂಶದಿಂದ ಕೂಡಿರಬಾರದು. ಅವಧಿ ಮುಗಿದ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು. ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಅಲ್ಲಿ ಸಂಗ್ರಹವಾಗುವ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತಿರಬೇಕು. ಸ್ವಚ್ಛತೆಗೆ ನೀರಿನ ಸೌಲಭ್ಯ ಇರಬೇಕು. ತಯಾರಿಸಿದ ಪದಾರ್ಥಗಳನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬಳಸಬೇಕು. ಹಳೆಯ, ತಂಗಳು ಆಹಾರ ಪದಾರ್ಥಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು.
ಮೇಲ್ಕಂಡ ನಿಯಮಗಳನ್ನು ತಪ್ಪದೆ ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮಕ್ಕೆ ಸಿದ್ಧರಾಗಬೇಕು ಎಂಬ ಎಚ್ಚರಿಕೆಯನ್ನು ಕಾನೂನು ನೀಡಿದೆ. ಕಾಯ್ದೆಯೇನೋ ತುಂಬಾ ಚೆನ್ನಾಗಿದೆ. ಆದರೆ ಅದರ ಅನುಷ್ಟಾನದಲ್ಲಿ ಸಾಕಷ್ಟು ನ್ಯೂನತೆಗಳಿವೆ. ಶೇ.50ರಷ್ಟು ಈ ಕಾಯ್ದೆಯ ನಿಯಮಗಳನ್ನು ಪಾಲಿಸಿ ಅನುಷ್ಟಾನಕ್ಕೆ ತರಲು ಸಾಧ್ಯವಾಗಿಲ್ಲ. ಎಷ್ಟೋ ಕಡೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮರ್ಪಕ ನೇಮಕಾತಿ ಆಗಿಲ್ಲ.
ಅಧಿಕಾರಿಗಳಿಗೆ ಸೂಕ್ತ ತರಬೇತಿ ಆಗಿಲ್ಲ. ಪ್ರಸ್ತುತ ಅನೇಕ ಕಡೆ ಇವರಿಗೆಲ್ಲಾ ಮಲ್ಟಿ ನ್ಯಾಷನಲ್ ಕಂಪನಿಗಳೇ ತರಬೇತಿ ಕೊಡುತ್ತಿವೆ. ಇಲ್ಲಿನ ವಾಸ್ತವದ ಚಿತ್ರಣವೇ ಬೇರೆ ಇರುತ್ತದೆ. ಬೀದಿ ಬದಿ ವ್ಯಾಪಾರ ಮಾಡುವವರೆಲ್ಲಾ ಕೆಟ್ಟವರಲ್ಲ. ಅವರೂ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಅವರಲ್ಲಿಯೂ ಒಳ್ಳೆಯವರಿದ್ದಾರೆ. ಇವರನ್ನು ನಂಬಿಕೊಂಡೇ ಅದೆಷ್ಟೋ ಜನ ಬದುಕು ಸವೆಸುತ್ತಿದ್ದಾರೆ ಹೀಗಾಗಿ ನಾವು ವಾಸ್ತವ ನೆಲೆಯಲ್ಲಿ ಚಿತ್ರಣ ನೋಡಬೇಕು ಎನ್ನುತ್ತಾರೆ ಬೆಂಗಳೂರಿನ ಖ್ಯಾತ ಆಹಾರ ತಜ್ಞ ಕೆ.ಸಿ ರಘು.
ಆಹಾರ ಉತ್ಪನ್ನಗಳ ಪ್ಯಾಕ್‍ಗಳ ಮೇಲೆ ಲೇಬಲ್ ಅಂಟಿಸಬೇಕು. ಅದರ ನಿಖರ ಬೆಲೆ, ವಾಯಿದೆ ದಿನಾಂಕ ಇತ್ಯಾದಿಗಳನ್ನು ನಮೂದಿಸಬೇಕು. ಕಳೆದ ವರ್ಷವೇ ಸರ್ಕಾರ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಿದೆ. ಆದರೆ ಇದು ಸಮರ್ಪಕವಾಗಿ ಅನುಷ್ಟಾನ ವಾಗುತ್ತಿಲ್ಲ. ಉದಾಹರಣೆಗೆ ಸಿಗರೇಟ್ ಪ್ಯಾಕ್ ಮೇಲೆ ಆರೋಗ್ಯಕ್ಕೆ ಹಾನಿಕಾರ ಎಂದು ನಮೂದಿಸಿದಂತೆ ಇತರೆ ಕೆಲವು ಉತ್ಪನ್ನಗಳ ಪ್ಯಾಕ್‍ಗಳ ಮೇಲೆಯೂ ಅದರ ಗುಣಾತ್ಮಕತೆಯ ಬಗ್ಗೆ ನಮೂದಿಸಬೇಕು. ಎಷ್ಟು ಕ್ಯಾಲೋರಿ ಇದೆ ಎಂಬುದು ಜನರಿಗೆ ತಿಳಿಯಬೇಕು. ಆದರೆ ಅಂತಹ ಲೇಬಲ್‍ಗಳನ್ನೇ ಹಾಕುತ್ತಿಲ್ಲ. ಈ ಬಗ್ಗೆ ಹೆಚ್ಚು ಜಾಗರೂಕತೆ ಬೇಕು ಎನ್ನುತ್ತಾರೆ ಅವರು.
ಬೀದಿ ಬದಿ ವ್ಯಾಪಾರ ಮಾಡುವುದೂ ಸಹ ಅವರ ಹಕ್ಕು. ಕಾನೂನಿನಲ್ಲಿಯೇ ಅವಕಾಶಗಳಿವೆ. ಆದರೆ ಶುಚಿತ್ವ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಬಂದಾಗ ಅದನ್ನು ಗಮನಿಸಬೇಕಾಗಿರುವುದು ಸಂಬಂಧಸಿದ ಇಲಾಖೆಗಳ ಕರ್ತವ್ಯ. ಈ ವಿಷಯದಲ್ಲಿ ಸಾಕಷ್ಟು ಲೋಪದೋಷಗಳಿವೆ. ನಾನೇ ಗಮನಿಸಿದಂತೆ ರಾಜ್ಯದ ಕೆಲವು ಟೀ ಅಂಗಡಿಗಳಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಟೀ ಪೌಡರ್‍ಅನ್ನು ಬಳಸುತ್ತಾರೆ. ಮತ್ತೆ ಮತ್ತೆ ಬಳಸುವುದನ್ನು ನಿಲ್ಲಿಸಬೇಕು. ಇದು ಆರೋಗ್ಯಕ್ಕೆ ಹಾನಿಕರ. ಒಮ್ಮೆ ಉಪಯೋಗಿಸಿದ ಟೀ ಪೌಡರ್ ಅನ್ನು ಮತ್ತೆ ಮತ್ತೆ ಬಳಸದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ಜನರೂ ಸಹ ಜಾಗೃತರಾಗಬೇಕು ಎನ್ನುತ್ತಾರೆ ರಘು.
ಬೀದಿ ಬದಿ ಆಹಾರ ಎಷ್ಟು ಸುರಕ್ಷಿತ ಎಂಬುದು ಆಯಾ ಅಂಗಡಿಗಳು, ಗಾಡಿಗಳ ಮೇಲೆ ಅವಲಂಬಿಸಿರುತ್ತದೆ. ಕೆಲವು ಕಡೆ ಉತ್ತಮ ಆಹಾರ ಕೊಡುತ್ತಾರೆ. ಮತ್ತೆ ಕೆಲವು ಕಡೆ ಕಳಪೆ ಉತ್ಪನ್ನಗಳಿಂದ ತಯಾರಿಸಿದ ಆಹಾರ ಕೊಡುವವರೂ ಇದ್ದಾರೆ. ಹೀಗಾಗಿ ಎಲ್ಲವನ್ನೂ ಒಂದೆ ಮಾನದಂಡದ ಅಡಿಯಲ್ಲಿ ಅಳೆಯಲು ಆಗುವುದಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ, ಬಡ ಮತ್ತು ಮಧ್ಯಮ ವರ್ಗದ ಜನರ ಹೊಟ್ಟೆ ತುಂಬಿಸುವಲ್ಲಿ ಬೀಡಿ ಬದಿ ಆಹಾರ ವ್ಯವಸ್ಥೆ ಪೂರಕವಾಗಿದೆ. ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ಕಳೆದ 25 ವರ್ಷಗಳಿಂದ ಮಹಿಳೆಯೊಬ್ಬರು ಕಡಿಮೆ ದರಕ್ಕೆ ಮುದ್ದೆ ಊಟ ಕೊಡುತ್ತಾ ಬಂದಿದ್ದಾರೆ. ಜನ ಇಷ್ಟ ಪಟ್ಟು ಅಲ್ಲಿಗೆ ಹೋಗುತ್ತಾರೆ. ಇದೇ ರೀತಿ ರಾಜ್ಯದ ಹಲವು ಕಡೆಗಳಲ್ಲಿ ಈ ದೃಶ್ಯ ಕಂಡುಬರುತ್ತದೆ. ಎಲ್ಲೆಲ್ಲಿ ಅಶುಚಿತ್ವ ಕಂಡು ಬರುತ್ತದೆ, ಕಳಪೆ ಆಹಾರ ಮಾರಾಟ ಕಂಡು ಬರುತ್ತದೆ ಅಂತಹ ಕಡೆಗಳಲ್ಲಿ ಜನರೆ ಪ್ರಶ್ನಿಸುವಂತಾಗಬೇಕು. ಆಗ ಕಳಪೆ ಆಹಾರ ಪೂರೈಸುವವರು ಎಚ್ಚೆತ್ತುಕೊಳ್ಳುತ್ತಾರೆ.
ಕೆ.ಸಿ. ರಘು
ಖ್ಯಾತ ಆಹಾರ ತಜ್ಞರು, ಬೆಂಗಳೂರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
