ತುರುವೇಕೆರೆ :
ಸುರೇಶ್‍ಗೌಡರೇ ದೇಶದ ಒಬ್ಬ ಮಾಜಿ ಪ್ರಧಾನಿಗಳು ಎಂಬ ಅರಿವಿಲ್ಲದೇ ನಿಮ್ಮ ನಾಲಿಗೆಯನ್ನು ಹರಿಯ ಬಿಡಬೇಡಿ. ಇದೇ ಪ್ರವೃತ್ತಿ ಮುಂದುವರೆದರೆ ರಾಜ್ಯದಾದ್ಯಂತ ಯುವ ಜೆಡಿಎಸ್ ಕಾರ್ಯಕರ್ತರು ತಮಗೆ ತಕ್ಕ ಪಾಠ ಕಲಿಸಲಿದ್ದಾರೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡರಿಗೆ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಮಾತಿನ ಚಾಟಿ ಏಟು ನೀಡಿದರು.
ಪಟ್ಟಣದ ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಸುರೇಶ್ ಗೌಡರು ಬಹಳ ಲಘುವಾಗಿ ಮಾತನಾಡಿರುವುದು ಅವರ ಘನತೆಗೆ ಶೋಭೆ ತರುವಂತದ್ದಲ್ಲ.
ದೇವೇಗೌಡರ ಬಗ್ಗೆ ಆಡಿರುವ ಕೀಳುಮಟ್ಟದ ಮಾತುಗಳು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ. ಇದೇ ಪ್ರವೃತ್ತಿ ಮುಂದುವರೆದರೆ ಜೆಡಿಎಸ್ ಕಾರ್ಯಕರ್ತರ ಕೆಂಗೆಣ್ಣಿಗೆ ಗುರಿಯಾಗಬೇಕಗುತ್ತದೆ. ಸುರೇಶ್ ಗೌಡರು ಶಾಸಕರಾಗಿದ್ದ ವೇಳೆ ಅಧಿಕಾರದ ದರ್ಪದಿಂದ ಟೋಲ್ ನ ಸಿಬ್ಬಂದಿ ಥಳಿಸಿದ್ದು, ವಕೀಲೆಯೋರ್ವರನ್ನು ಅವಮಾನಿಸಿದ್ದು, ತಾವೇ ಅಪಘಾತ ಮಾಡಿ, ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸದೇ ಮಾನವೀಯತೆ ಮರೆತು ಅವರ ಸಾವಿಗೆ ಕಾರಣವಾಗಿದ್ದ ಘಟನೆಯನ್ನು ಜಿಲ್ಲೆಯ ಜನರು ಇನ್ನೂ ಮರೆತಿಲ್ಲ. ಈಗಲೂ ಅಧಿಕಾರದ ದರ್ಪದಿಂದ ನಾಲಿಗೆಯನ್ನು ಹಿಡಿತವಿಟ್ಟುಕೊಳ್ಳದೇ ಮಾತನಾಡಿದ್ದೇ ಆದಲ್ಲಿ ಪರಿಸ್ಥಿತಿ ನೆಟ್ಟಗಿರದು ಎಂದು ಹೇಳಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಜಾತಿಗೆ ಮತ್ತು ಪಕ್ಷಕ್ಕೆ ಮಾತ್ರ ಸೀಮಿತವಾದವರಲ್ಲ. ಅವರು ದೇಶಕಂಡ ರೈತ ಪರ ಪ್ರಧಾನಿ. ಜಿಲ್ಲೆಯಲ್ಲಿ ದೇವೇಗೌಡರ ಗೆಲುವು ಖಚಿತ ಎಂಬ ಸುಳಿವಿನ ಮೇರೆಗೆ ಹತಾಶರಾಗಿ ಸುರೇಶ್ ಗೌಡರು ಮಾತನಾಡುತ್ತಿದ್ದು ಅವರು ಮಾನಸಿಕ ಸ್ಥಿರತೆ ಕಳೆದುಕೊಂಡಿರಬಹುದು ಎನಿಸುತ್ತದೆ ಎಂದು ಹೇಳಿದರು.
ಹೆಚ್.ಡಿ.ದೇವೇಗೌಡರ ವಿರುದ್ಧ ಸುರೇಶ್ ಗೌಡರು ಆಡಿರುವ ಮಾತುಗಳ ಕುರಿತು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ತಪ್ಪಿದಲ್ಲಿ ಜೆಡಿಎಸ್ ಕಾರ್ಯಕರ್ತರು ತಮ್ಮ ವಿರುಧ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಚಂದ್ರೇಶ್ ಎಚ್ಚರಿಕೆ ನೀಡಿದರು.
ದೇವೇಗೌಡರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ತೊಡರುಗಾಲು ಹಾಕಿದರು ಎಂಬುದೆಲ್ಲಾ ಸುಳ್ಳು. ದೇವೇಗೌಡರು ಸಹಕಾರ ನೀಡದಿದ್ದರೆ ಜಿಲ್ಲೆಗೆ ಒಂದು ತೊಟ್ಟೂ ನೀರು ಹರಿಯಲು ಸಾಧ್ಯವಿರಲಿಲ್ಲ. ಈಗ ಜಿಲ್ಲೆಯ ಹಲವಾರು ಕೆರೆಗಳು ಭರ್ತಿಯಾಗಿವೆ. ಅವು ಹೇಮಾವತಿ ನೀರಲ್ಲವೇ?. ಕೆಲವರು ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಮಾಜಿ ಜಿ.ಪಂ ಸದಸ್ಯ ಕೆ.ಬಿ.ಹನುಮಂತಯ್ಯ ಹೇಳಿದರು.
ಜೆ.ಡಿ.ಎಸ್ ವಕ್ತಾರ ಡಾ.ನಂಜಪ್ಪ ಮಾತನಾಡಿ ಚುನಾವಣಾ ಸಮಯದಲ್ಲಿ ಸುಳ್ಳು ಆರೋಪ ಮಾಡುವುದು ಥರವಲ್ಲ, ತಮ್ಮ ಸಾಧನೆಗಳನ್ನು ಜನತೆಯ ಮುಂದಿಟ್ಟು ರಾಜಕಾರಣಿಗಳು ಮತ ಕೇಳಲಿ, ರಾಜಕೀಯ ಕೆಸರೆರಚಾಟಕ್ಕಾಗಿ ದ್ವಂದ್ವ ಹೇಳಿಕೆ ಬೇಡ ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.
ಗೋಷ್ಟಿಯಲ್ಲಿ ಕೊಡಗೀಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸವಿತಾಕುಮಾರ್, ಗ್ರಾ.ಪಂ. ಸದಸ್ಯರಾದ ಹಾವಾಳಕೃಷ್ಣೇಗೌಡ, ಗೊಟ್ಟಿಕೆರೆಪ್ರಕಾಶ್, ವೀರಣ್ಣಗೌಡ, ಧರೀಶ್, ಸೋಮೇನಹಳ್ಳಿಶಂಕರಪ್ಪ, ಕುಮಾರ್, ಗಂಗಾಧರ್, ಪಾಲಣ್ಣ, ಅಪ್ಜಲ್, ರಂಗೇಗೌಡ, ಅಭಿಷೇಕ್ ಮತ್ತಿತರ ಗಣ್ಯರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ