ಸರ್ಕಾರಿ ಆಸ್ಪತ್ರೆ ಗುತ್ತಿಗೆ ನೌಕರರಿಗೆ ಇಲ್ಲ ಸಂಬಳ !

ಹುಳಿಯಾರು

   ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿಗಳಿಗೆ ಸುಮಾರು ಏಳೆಂಟು ತಿಂಗಳುಗಳಿಂದ ಸಂಬಳಗಳಾಗದೆ ಪರಿತಪಿಸುವಂತೆ ಆಗಿದೆ.

   ಚಿಕ್ಕನಾಯಕನಹಳ್ಳಿ ಜನರಲ್ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನಲ್ಲಿ ಜೆ.ಸಿ.ಪುರ, ಹುಳಿಯಾರು, ದಸೂಡಿ, ಯಳನಾಡು, ಹಂದನಕೆರೆ, ಮತಿಘಟ್ಟ, ಶೆಟ್ಟಿಕೆರೆ, ತೀರ್ಥಪುರ, ತಿಮ್ಮನಹಳ್ಳಿ, ಕಂದಿಕೆರೆ, ಗೋಡೆಕೆರೆ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಚಿ.ನಾ.ಹಳ್ಳಿಯಲ್ಲಿ 6 ಹಾಗೂ ಹುಳಿಯಾರಿನಲ್ಲಿ 4 ಸಿಬ್ಬಂದಿ ಬಿಟ್ಟರೆ ಉಳಿದ ಆಸ್ಪತ್ರೆಯಲ್ಲಿ ಒಬ್ಬರು ಅಥವಾ ಇಬ್ಬರು ಕೆಲಸ ನಿರ್ವಹಿಸುತ್ತಿದ್ದು ಒಟ್ಟು 25 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

   ಕಳೆದ ವರ್ಷ ಟೋಟಲ್ ಸಲೂಷನ್ ಅವರಿಂದ ತಾಲ್ಲೂಕಿನ ಆಸ್ಪತ್ರೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನಿಯೋಜಿಸಲಾಗಿದ್ದು, ಜೂನ್ 2019 ರಿಂದ ಕಿಯೋನಿಕ್ಸ್ ವತಿಯಿಂದ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಇವರೆಲ್ಲರಿಗೂ ಕಿಯೋನಿಕ್ಸ್ 10 ಸಾವಿರ ರೂಗಳಿಂದ 11 ಸಾವಿರ ರೂ. ಸಂಭಾವನೆ ಕೊಡುವುದಾಗಿಯೂ ಪ್ರತಿ ಮಾಹೆ 5 ನೇ ತಾರೀಖಿನೊಳಗೆ ಸಂಭಾವನೆ ಕೊಡುವುದಾಗಿಯೂ ಭರವಸೆ ನೀಡಿ ನೇಮಕ ಮಾಡಿಕೊಂಡಿದೆ.

   ಆದರೆ ಹಿಂದಿನ ಟೋಟಲ್ ಸೆಲ್ಯೂಷನ್ ಅವರು 5 ತಿಂಗಳು ವೇತನ ನೀಡದೆ ನಿರ್ಲಕ್ಷ್ಯಿಸಿದ್ದಾರೆ. ಈಗಿನ ಕಿಯೋನಿಕ್ಸ್ ಅವರು 3 ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಹಾಗಾಗಿಯೇ ಕೆಲವೊಂದು ಆಸ್ಪತ್ರೆಗಳಲ್ಲಿ ಕೆಲ ಗುತ್ತಿಗೆ ನೌಕರರು ಕೆಲಸವನ್ನೆ ಬಿಟ್ಟಿದ್ದಾರೆ. ಇದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೂ ಮೇಲಧಿಕಾರಿಗಳು, ಜನಪ್ರತಿನಿಧಿಗಳು ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ. ಕೆಲ ಆಸ್ಪತ್ರೆಯಲ್ಲಿನ ವೈದ್ಯರೇ ಗುತ್ತಿಗೆ ನೌಕರರು ಸಂಕಷ್ಟ ನೋಡಲಾರದೆ ಖರ್ಚಿಗೆ ಒಂದಿಷ್ಟು ದುಡ್ಡು ಕೊಟ್ಟು ಮಾನವೀಯತೆ ಮೆರೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

   ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ದಿನನಿತ್ಯ ಆಸ್ಪತ್ರೆ ಸ್ವಚ್ಛತೆ, ವೈದ್ಯರಿಗೆ ಸಕಾಲಕ್ಕೆ ಟೀ, ಕಾಫಿ, ಬಿಸ್ಕೇಟ್, ರೋಗಿಗಳ ಬಗ್ಗೆ ಕಾಳಜಿ, ಲ್ಯಾಬೋರೇಟರಿಯಲ್ಲಿ ಉತ್ಪತ್ತಿಯಾದ ತ್ಯಾಜ್ಯಗಳು, ರಕ್ತ ಪರೀಕ್ಷೆ ಮಾಡುವ ಸ್ಲೈಡ್‍ಗಳನ್ನು ತೊಳೆಯುವುದು, ಆಸ್ಪತ್ರೆಯಲ್ಲಿನ ಬೆಡ್‍ಗಳನ್ನು ಸ್ವಚ್ಛವಾಗಿಡುವುದು, ನೆಲ ಒರೆಸುವುದು, ರೋಗಿಗಳಿಗೆ ವೈದ್ಯರು ಬರುವುದನ್ನು ತಿಳಿಸುವುದು, ಹೀಗೆ ಹತ್ತು ಹಲವಾರು ಕೆಲಸಗಳಲ್ಲಿ ತೊಡಗಿಕೊಂಡವರ ಸ್ಥಿತಿ ಸಂಬಳವಿಲ್ಲದೆ ಶೋಚನೀಯವಾಗಿದೆ.

    ಈ ಕೆಲಸವನ್ನೇ ನೆಚ್ಚಿಕೊಂಡಿರುವ ನೌಕರರ ಪಾಡು ಹೇಳ ತೀರದಾಗಿದೆ. ಮಕ್ಕಳ ಶಾಲೆಯ ಶುಲ್ಕ, ಪೋಷಕರ ಔಷಧೋಪಚಾರ ಹಾಗೂ ತಿಂಗಳ ರೇಷನ್ ತರುವುದಕ್ಕೂ ಕಷ್ಟವಾಗಿ ಮತ್ತೊಬ್ಬರ ಬಳಿ ಕೈಯೊಡ್ಡುವ ದುಸ್ಥಿತಿ ನಿರ್ಮಾಣವಾಗಿದೆ. ಐದಾರು ತಿಂಗಳಿಂದ ಆತ್ಮೀಯರ ಬಳಿ ಸಾಲ ಮಾಡಿ ಸಂಸಾರ ತೂಗಿಸಿದ್ದು ಈಗ ಕೆಲಸದವರು ಸಾಲ ಹಿಂದಿರುಗಿಸುವಂತೆಯೂ, ಹೊಸದಾಗಿ ಮತ್ಯಾರೂ ಸಾಲ ಕೊಡದಂತೆಯೂ ಆಗಿದ್ದು ನಮ್ಮ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲದಂತಾಗಿದೆ ಎಂದು ಕೆಲ ನೌಕರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link