ಬಳ್ಳಾರಿ
ಕುಡಿಯುವ ನೀರು ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ಅತ್ಯಮೂಲ್ಯವಾದದ್ದು. ಈ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗು ನ್ಯಾಯಾಧೀಶರಾದ ಎಸ್.ಬಿ.ಹಂದ್ರಾಳ್ ಹೇಳಿದರು.
ನಗರದ ಗಡಗಿ ಚೆನ್ನಪ್ಪ ವೃತ್ತದ ಬಳಿಯ ಕೆಎಸ್‍ಆರ್‍ಟಿಸಿ ಹಳೆ ಬಸ್ ನಿಲ್ದಾಣದಲ್ಲಿಂದು ಸನ್ಮಾರ್ಗ ಗೆಳೆಯರ ಬಳಗದ ವತಿಯಿಂದ ಸಾರಿಗೆ ಬಸ್‍ಗಳಲ್ಲಿ ಕುಡಿಯುವ ನೀರಿನ ಕ್ಯಾನ್‍ಗಳ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬಡ ಪ್ರಯಾಣಿಕರು ಬಸ್ ಪ್ರಯಣದರ ಕೊಟ್ಟು ಪ್ರಯಾಣಿಸುವುದೇ ಕಷ್ಟಕರ. ಅಂತಹದರಲ್ಲಿ ಕುಡಿಯುವ ನೀರು ತೆಗೆದುಕೊಂಡು ಪ್ರಯಾಣಿಸುವುದೂ ಸಹ ಇನ್ನೂ ಕಷ್ಟಕರವಾಗುತ್ತದೆ. ಇಂತಹ ಸಂದರ್ಭದಲ್ಲಿ ಸನ್ಮಾರ್ಗ ಗೆಳೆಯರ ಬಳಗ ಬಸ್‍ಗಳಲ್ಲಿ ಕುಡಿಯುವ ನೀರಿನ ಕ್ಯಾನ್‍ಗಳನ್ನು ಅಳವಡಿಸಿರುವುದು ಪ್ರಯಾಣಿಕರ ಅನುಕೂಲವಾಗಿದೆ ಎಂದರು.
ಸನ್ಮಾರ್ಗ ಗೆಳೆಯರ ಬಳಗ ಕಳೆದ 5 ವರ್ಷಗಳಿಂದ ಬಸ್‍ಗಳಲ್ಲಿ ಪ್ರಯಾಣಿಕರಿಗಾಗಿ ಕುಡಿಯುವ ನೀರಿನ ಕ್ಯಾನ್ ಅಳವಡಿಸಿಕೊಂಡು ಬರುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ. ಮಾ.22 ರಂದು ವಿಶ್ವ ಜಲ ದಿನಾಚರಣೆ ಇದ್ದು, ಅಂದು ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸಬೇಕು. ಕುಡಿಯುವ ನೀರನ್ನು ವೃಥಾ ಪೋಲು ಮಾಡದೇ ಕಾಪಾಡಬೇಕು ಎಂದು ತಿಳಿಸಿದರು.
ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಪ್ಪಗಲ್ಲು ಚಂದ್ರಶೇಖರ ಆಚಾರ್ ಮತನಾಡಿ, ಕೆಎಸ್‍ಆರ್‍ಟಿಸಿ ಅಧಿಕಾರಿಗಳ ಮತ್ತು ಬಸ್ ಚಾಲಕ-ನಿರ್ವಾಹಕರ ಸಹಕಾರದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕಳೆದ 5 ವರ್ಷದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಅದರಲ್ಲೂ ಬೇಸಿಗೆಯಲ್ಲೂ ನೀರು ಅವಶ್ಯಕ. ಪ್ರಯಾಣಿಕರ ನೀರಿನ ದಾಹ ತೀರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಇನ್ನೂ ಹೆಚ್ಚಾಗುತ್ತಿದೆ. ಪ್ರತಿ ಬಸ್‍ನಲ್ಲಿ ಮೂರು ಕ್ಯಾನ್‍ಗಳನ್ನು ಅಳವಡಿಸಲಾಗಿದೆ ಎಂದರು.
ಶ್ರೀಶೈಲಾ, ಮುಗಳಕೋಡ, ಕೌತಾಳಂ, ಮೀರಜ್, ಶಿವಮೊಗ್ಗ, ಬೆಣಕಲ್ಲು, ಜಾನೇಕುಂಟೆ, ಹರಗಿನಡೋಣಿ, ಎರ್ರಂಗಳಗಿ, ಜೌರಂಗಬಾದ್, ಬೆಂಗಳೂರು, ಗುಲ್ಬರ್ಗಾ, ಬಾಗಲಕೋಟೆ, ಹೈದ್ರಾಬಾದ್, ಜೌಕು, ಕೂರಿಗನೂರು, ಕುರೇಕುಪ್ಪ, ಹೊಸಳ್ಳಿ, ಅಸುಂಡಿ, ವಿಠಲಾಪುರ, ಸೋಮಸಮುದ್ರ, ಸಿಂದವಾಳ, ತಾಳೂರು, ಕಮ್ಮರಚೇಡು, ಕನಕಗಿರಿ, ಸಂಡೂರು ಸೇರಿದಂತೆ ನಗರ ಸಾರಿಗೆ ಬಸ್‍ಗಳಲ್ಲೂ ಕುಡಿಯುವ ನೀರಿನ ಕ್ಯಾನ್‍ಗಳನ್ನು ಅಳವಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ, ಆರ್‍ಟಿಒ ಶ್ರೀಧರ ಮಲನಾಡು, ಪಿಎಸ್‍ಐಗಳಾದ ಹನುಮಂತಪ್ಪ, ನಿರಂಜನ್, ಅಮರೇಶಗೌಡ, ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ, ಕೆ. ಪಂಪಾಪತಿ, ತೇಜಾ ರಘುರಾಮರಾವ್, ವಿಶ್ವ ಸುರೇಶ್, ಕೆ. ವಿಶ್ವನಾಥ್, ಹನುಮಂತರೆಡ್ಡಿ, ಡಾ. ರಘುಕುಮಾರ್, ಅಶೋಕ ಬಂಡಾರಿ, ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
