ಶಿರಾ
ಹೇಮಾವತಿ ನೀರನ್ನು ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಹರಿಸಿಕೊಳ್ಳುವಾಗ ಕಳ್ಳಂಬೆಳ್ಳ ಕೆರೆಯನ್ನು ತುಂಬಿಸಲಾಗಿತ್ತು. ಈ ಭಾಗದ ಅಡಕೆ, ತೆಂಗಿನ ತೋಟಗಳು ಒಣಗುತ್ತಿದ್ದು, ಕಳ್ಳಂಬೆಳ್ಳ ಕೆರೆಯಲ್ಲಿ ಹಾಲಿ ಇರುವ ನೀರನ್ನು ಕೂಡಲೆ ಕಾಲುವೆ ಮೂಲಕ ಹರಿಸುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘ ಸೋಮವಾರ ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.
ಕಳ್ಳಂಬೆಳ್ಳ ಕೆರೆಯು ಹೇಮಾವತಿ ನೀರಿನಿಂದ ತುಂಬಿದ್ದಾಗ ಸದರಿ ನೀರನ್ನು ಸಮೀಪದ ಗ್ರಾಮಗಳ ರೈತರು ಬಳಕೆ ಮಾಡಿಕೊಳ್ಳುವ ಅವಕಾಶವಿದೆ. ಕಳ್ಳಂಬೆಳ್ಳ ಸೇರಿದಂತೆ ಚಿಕ್ಕನಹಳ್ಳಿ, ಬಾಲೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಈ ನೀರಿನಿಂದ ತಮ್ಮ ತೋಟಗಳನ್ನು ಉಳಿಸಕೊಳ್ಳುವ ಅನಿವಾರ್ಯತೆ ಇರುವ ಪರಿಣಾಮ ಕಳ್ಳಂಬೆಳ್ಳ ಕೆರೆಯ ನೀರನ್ನು ಕಾಲುವೆಗಳಲ್ಲಿ ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಮಾಡಿದ್ದರು. ಮನವಿ ಸಲ್ಲಿಸಿ 15 ದಿನಗಳು ಕಳೆದರೂ ನೀರನ್ನು ಹಾಯಿಸದಿದ್ದಾಗ ರೈತರು ಪ್ರತಿಭಟನೆ ನಡೆಸಲು ಕಾರಣವಾಗಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಧನಂಜಯಾರಾಧ್ಯ ಮಾತನಾಡಿ, ಕಳ್ಳಂಬೆಳ್ಳ ಕೆರೆ ಭಾಗದ ರೈತರ ತೋಟಗಳ ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ನೀರಿಲ್ಲದೆ ತೋಟಗಳು ಒಣಗಿವೆ. ಕೆರೆಯ ನೀರನ್ನು ಕಾಲುವೆಗಳಲ್ಲಿ ಹರಿಸಿದರೆ. ಈ ಭಾಗದ ತೋಟಗಳು ಮರು ಜೀವ ಪಡೆಯುತ್ತವೆಯಲ್ಲದೆ, ಅಂತರ್ಜಲವೂ ಹೆಚ್ಚುತ್ತದೆಯಾದ್ದರಿಂದ ಕೆರೆ ನೀರನ್ನು ಹರಿಸುವಂತೆ ಮನವಿ ಮಾಡಿದರು.
ಕಳ್ಳಂಬೆಳ್ಳ ನೀರಾವರಿ ಹೋರಾಟ ಸಮಿತಿಯ ರಂಗನಾಥಪ್ಪ, ಬಾಲೇನಹಳ್ಳಿ ಶಾಂತರಾಜು, ವಿರೂಪಾಕ್ಷಪ್ಪ, ಸಿದ್ಧಗಂಗಪ್ಪ, ಚಿಕ್ಕದಾಸರಹಳ್ಳಿಯ ಕಾಂತರಾಜು, ಶ್ರೀರಂಗಪ್ಪ, ಕಳ್ಳಂಬೆಳ್ಳ ಮುರಳಿಧರ್, ಬಿ.ಆರ್.ರಂಗನಾಥಪ್ಪ, ನಾಗರಾಜು, ರಾಮೇಲಿಂಗಪ್ಪ ಸೇರಿದಂತೆ ಅನೇಕ ರೈತ ಮುಖಂಡರು ಪ್ರತಿಭಟನೆಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ