ಚಳ್ಳಕೆರೆ
ಗ್ರಾಮೀಣ ಭಾಗಗಳ ಜನರಿಗೆ ಶುದ್ದ ಕುಡಿಯುವ ನೀರು ನಿರಂತರ ಒದಗಿಸುವ ಭರವಸೆಯನ್ನು ನೀಡುತ್ತಿರುವ ಸರ್ಕಾರ ನೀರಿಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚುಡುತ್ತಿದೆ. ಸರ್ಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ್ರ ಎಲ್ಲಿಯೂ ನೀರಿನ ಸಮಸ್ಯೆ ಇಲ್ಲವೆಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಅಧಿಕಾರಿಗಳು, ಸುಳ್ಳು ಭರವಸೆ ನೀಡಿ ಮುಗ್ಧ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸದೆ ನಿರ್ಲಕ್ಷತಾಳಿದ್ಧಾರೆ.
ಈ ಹಿನ್ನೆಲ್ಲೆಯಲ್ಲಿ ತಾಲ್ಲೂಕಿನ ಗೋಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪನಹಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿರುವ ಹಳೆ ದ್ಯಾಮಲಾಂಭ ದೇವಸ್ಥಾನದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರು ಘಟಕ ಕಳೆದ ಹತ್ತು ತಿಂಗಳಿಂದಲೂ ಬಾಗಿಲಿಗೆ ಹಾಕಿದ ಬೀಗವನ್ನು ತೆಗೆಯದೆ ಹಾಗೇ ಇಟ್ಟಿದ್ದಾರೆ. 2017-18ನೇ ಸಾಲಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಡಿ.ದೇವರಾಜ ಅರಸು ಶುದ್ದ ಕುಡಿಯುವ ನೀರಿನ ಘಟಕ ಯೋಜನೆಯಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ಈ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಈ ಭಾಗದ ನೂರಾರು ಕುಟುಂಬಗಳಿಗೆ ಇಲ್ಲಿ ದೊರೆಯುವ ಶುದ್ದ ನೀರೇ ಆಧಾರವಾಗಿದ್ದು, ಆದರೆ ಇದುವರೆಗೂ ಈ ಘಟಕದಿಂದ ಒಂದು ಹನಿಯೂ ನೀರು ಇನ್ನೂ ಹರಿದೇ ಇಲ್ಲ.
ಅಲ್ಲಿನ ನಿವಾಸಿಗಳಾದ ಕರಿಬಸಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಚಳ್ಳಕೆರೆ ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿಗಳಿಗೆ ಈ ಬಗ್ಗೆ ಈಗಾಗಲೇ ನಿರಂತರವಾಗಿ ಹತ್ತಾರು ಬಾರಿ ಮನವಿ ಮಾಡಿದ್ದೇವೆ. ಅಂದು ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಗೋವಿಂದಪ್ಪ ಮತ್ತು ಸಹಾಯಕ ಇಂಜಿನಿಯರ್ ತಿಪ್ಪೇಸ್ವಾಮಿಗೆ ಹಲವಾರು ಬಾರಿ ಈ ಬಗ್ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ.
ಮತ್ತೊರ್ವ ನಿವಾಸಿ ಮಂಜುನಾಥ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇಲ್ಲಿನ ಜನರೆಲ್ಲರೂ ನೀರಿಗಾಗಿ ಪ್ರಾಥಮಿಕ ಶಾಲೆ ಬಳಿ ಇರುವ ಕುಡಿಯುವ ನೀರಿನ ಘಟಕಕ್ಕೆ ತೆರಳಬೇಕಿದೆ. ಈಗ ಅಲ್ಲಿಯೂ ಸಹ ಪ್ರಮಾಣ ತಗ್ಗಿದೆ. ಹಿಂದಿನಂತೆ ಸಮರ್ಪಕವಾಗಿ ನೀರು ಅಲ್ಲಿಯೂ ಸಿಗುತ್ತಿಲ್ಲ. ಕಳೆದ ಎರಡ್ಮೂರು ದಿನಗಳಿಂದ ಅಲ್ಲಿನ ಘಟಕದಲ್ಲೂ ಸಹ ಕುಡಿಯುವ ನೀರು ಬರುತ್ತಿಲ್ಲ.
ಕಾರಣ, ಮೋಟರ್ ಪಂಪ್ ಸುಟ್ಟಿದೆ. ಆದರೆ, ಗ್ರಾಮ ಪಂಚಾಯಿತಿ ಸದಸ್ಯರು ಅದರ ರಿಪೇರಿಯತ್ತ ಗಮನ ನೀಡುತ್ತಿದ್ಧಾರೆ. ಆದರೆ, ಇಲ್ಲಿನ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಸದಸ್ಯರಾಗಲಿ, ಅಭಿವೃದ್ಧಿ ಅಧಿಕಾರಿಗಳಾಗಲಿ, ತಾಲ್ಲೂಕು ಪಂಚಾಯಿತಿ ಸದಸ್ಯರಾಗಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಘಟಕಕ್ಕಾಗಿ 10 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಹತ್ತು ತಿಂಗಳು ಕಳೆದರೂ ಸಹ ಇಲ್ಲಿನ ಜನರಿಗೆ ಈ ಘಟಕದಿಂದ ನೀರು ಬರದೇ ಕೇವಲ ಕಣ್ಣೀರಷ್ಟೇ ಬರುತ್ತಿದೆ ಎಂದಿದ್ಧಾರೆ.
ತಾಲ್ಲೂಕು ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇಂತಹ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕಿದೆ. 10 ತಿಂಗಳ ಕಾಲ ಸುಧೀರ್ಘ ಅವಧಿಯನ್ನು ಪಡೆದರೂ ಸಹ ಒಮ್ಮೆಯಾದರೂ ಬಂದು ಇದರ ದುರಸ್ಥಿತ ಬಗ್ಗೆ ಯಾವುದೇ ರೀತಿಯ ವಿಷಯವನ್ನು ತಿಳಿಸಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ನೀರಿನ ಘಟಕ ಕಾರ್ಯಾರಂಭ ಕುರಿತದಂತೆ ನಿರ್ಲಕ್ಷ್ಯೆ ವಹಿಸಿದ್ಧಾರೆಂದು ಆರೋಪಿಸಿದ್ದಾರೆ. ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ಶುದ್ದ ನೀರಿನ ಘಟಕಗಳು ಹಲವಾರು ಕಾರಣಗಳಿಂದಾಗಿ ಕಾರ್ಯನಿರ್ವಹಿಸದೇ ತಟಸ್ಥವಾಗಿದ್ದು ಈ ಬಗ್ಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸುವರೇ ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ